ಲೇ ಆಫ್ ಅಂದ್ರೆ ಭಯವಿಲ್ಲ, ಇದು ಹೊಸ ಆರಂಭ!: ಕೆಲಸ ಕಳೆದುಕೊಂಡರೂ ಸಂಭ್ರಮಿಸಿದ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್
ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬರು ಕೆಲಸ ಕಳೆದುಕೊಂಡರೂ ಆತಂಕಗೊಳ್ಳದೆ, ಅದನ್ನು ವೈಯಕ್ತಿಕ ಬೆಳವಣಿಗೆಯ ಅವಕಾಶ ಎಂದು ಸ್ವೀಕರಿಸಿದ್ದಾರೆ. ಹಣಕಾಸಿನ ಸ್ವಾತಂತ್ರ್ಯ ಮತ್ತು ಉಳಿತಾಯದ ಮಹತ್ವವನ್ನು ತಮ್ಮ ವೈರಲ್ ಪೋಸ್ಟ್ ಮೂಲಕ ಎತ್ತಿಹಿಡಿದಿದ್ದಾರೆ. ಸಾಲವಿಲ್ಲದ ಮನೆ ಇರುವುದರಿಂದ ತಾನು ಸಂತೋಷವಾಗಿರುವುದಾಗಿ ಹೇಳಿದ್ದಾರೆ. ಆದರೆ, ನೆಟ್ಟಿಗರು ಇದಕ್ಕೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದು, ಇದು ಎಲ್ಲರಿಗೂ ಸಾಧ್ಯವಿಲ್ಲ ಎಂದಿದ್ದಾರೆ.

ಬೆಂಗಳೂರು, ಏ.8: ಬೆಂಗಳೂರಿನಲ್ಲಿ ದಿನಕ್ಕೊಂದು ಲೇ ಆಫ್ ಸುದ್ದಿಗಳು ಬರುತ್ತಿದೆ. ಎಐ ಪರಿಣಾಮದಿಂದ, ಇನ್ನು ಅನೇಕರ ಕಾರಣದಿಂದ ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಇದೆ. ಲೇ ಆಫ್ ಆದ್ರೆ ಎಲ್ಲರಿಗೂ ಆತಂಕ ಆಗುತ್ತಿದೆ. ಮುಂದಿನ ಜೀವನ ಹೇಗೆ? ಇಎಂಐಗಳನ್ನು ಕಟ್ಟುವುದು ಎಂಬ ಯೋಚನೆಗಳು ಇರುತ್ತದೆ. ಆದರೆ ಇಲ್ಲೊಬ್ಬರು ಐಟಿ ಉದ್ಯೋಗಿ ಅಷ್ಟು ದೊಡ್ಡ ಕೆಲಸವನ್ನು ಕಳೆದುಕೊಂಡು ಬಿಂದಾಸ್ ಆಗಿದ್ದಾರೆ. ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಕೆಲಸ ಕಳೆದುಕೊಂಡ ನಂತರ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಈ ಟೆಕ್ಕಿಯು ತಾನು ಕೆಲಸ ಕಳೆದುಕೊಂಡಿರುವುದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದಾರೆ. “ಕಳೆದ ಕೆಲವು ವರ್ಷಗಳಿಂದ ನಿರಂತರ ಕೆಲಸದ ಒತ್ತಡದಲ್ಲಿದ್ದೆ. ಈಗ ಸಿಕ್ಕಿರುವ ಈ ಬಿಡುವು ನನ್ನ ವೈಯಕ್ತಿಕ ಬೆಳವಣಿಗೆಗೆ ಮತ್ತು ಕುಟುಂಬದೊಂದಿಗೆ ಸಮಯ ಕಳೆಯಲು ಸಿಕ್ಕ ಅವಕಾಶ,” ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೆ, ಹಣಕಾಸಿನ ಸ್ವಾತಂತ್ರ್ಯ (Financial Freedom) ಮತ್ತು ಉಳಿತಾಯದ ಮಹತ್ವದ ಬಗ್ಗೆಯೂ ಅವರು ಬೆಳಕು ಚೆಲ್ಲಿದ್ದಾರೆ. “ನನ್ನನ್ನು ಕೆಲಸದಿಂದ ವಜಾ ಮಾಡಲಾಗಿದೆ, ಆದರೂ ನನಗೆ ಸಂತೋಷವಾಗುತ್ತಿದೆ…. ಮತ್ತು ಇಲ್ಲ, ನನ್ನ ಕೈಯಲ್ಲಿ ಯಾವುದೇ ಆಫರ್ ಇಲ್ಲ… ನನಗೆ ಅದ್ಭುತವೆನಿಸಲು ಒಂದೇ ಕಾರಣವೆಂದರೆ ನನಗೆ EMI ನಲ್ಲಿ ಮನೆ ಇಲ್ಲದಿರುವುದು” ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿ ತಪ್ಪಿಸಲು ಬಾಗಿಲು ತೆರೆದಿಟ್ಟು ಮಲಗಿದ್ದ ಮಹಿಳೆಗೆ ಕಾದಿತ್ತು ಶಾಕ್!
ಈ ಪೋಸ್ಟ್ ಬೆನ್ನಲ್ಲೇ ನೆಟ್ಟಿಗರು ಎರಡು ಗುಂಪುಗಳಾಗಿ ವಿಂಗಡಣೆಯಾಗಿದ್ದಾರೆ. ಒಂದು ವರ್ಗದ ಜನರು ಅವರ ಸಕಾರಾತ್ಮಕ ಮನೋಭಾವವನ್ನು ಶ್ಲಾಘಿಸಿದರೆ, ಇನ್ನೊಂದು ವರ್ಗವು “ಇದು ಎಲ್ಲರಿಗೂ ಸಾಧ್ಯವಿಲ್ಲ, ಸಾಲ ಮತ್ತು ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಲೇ ಆಫ್ ಒಂದು ಶಾಪ,” ಎಂದು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಜೀವನ ವೆಚ್ಚ ಮತ್ತು ಮನೆ ಬಾಡಿಗೆ ಹೆಚ್ಚುತ್ತಿರುವ ಈ ಸಮಯದಲ್ಲಿ ಕೆಲಸ ಕಳೆದುಕೊಳ್ಳುವುದು ಸವಾಲಿನ ಕೆಲಸ ಎಂಬ ಚರ್ಚೆಯೂ ತೀವ್ರಗೊಂಡಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




