Bangalore IT Raid: ಬೆಂಗಳೂರಿನಲ್ಲಿ ಐಟಿ ದಾಳಿ, 100 ಕೋಟಿ ರೂ. ಮೌಲ್ಯದ ಮರೆಮಾಚಿದ್ದ ವಹಿವಾಟು ಪತ್ತೆ
ಬೆಂಗಳೂರು ಐಟಿ ದಾಳಿ: ಆದಾಯ ತೆರಿಗೆ ಇಲಾಖೆ ಹಾಗೂ ಸರಕು ಮತ್ತು ಸೇವಾ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರು ನಗರದಲ್ಲಿ ಕಳೆದ 15 ದಿನಗಳಿಂದ ಮಿಂಚಿನ ಕಾರ್ಯಾಚರಣೆ ನಡೆಸಿ 100 ಕೋಟಿ ರೂ. ಮೌಲ್ಯದ ಅಕ್ರಮವನ್ನು ಬಯಲಿಗೆಳೆದಿದ್ದಾರೆ. ಜೆಸಿ ರಸ್ತೆ, ಚಿಕ್ಕಪೇಟೆ, ಅವೆನ್ಯೂ ರಸ್ತೆ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ದಾಳಿ ನಡೆಸಲಾಗಿದೆ.

ಬೆಂಗಳೂರು, ನವೆಂಬರ್ 29: ಬೆಂಗಳೂರು (Bangalore) ನಗರದಲ್ಲಿ ಆದಾಯ ತೆರಿಗೆ ಹಾಗೂ ಜಿಎಸ್ಟಿ ಇಲಾಖೆಗಳು ಅಧಿಕಾರಿಗಳು ಮಿಂಚಿನ ಕರ್ಯಾಚರಣೆ (IT Raid), ದಾಳಿ ನಡೆಸಿ ಸುಮಾರು 100 ಕೋಟಿ ರೂ. ಮೌಲ್ಯದ ಮರೆಮಾಚಿದ್ದ ವಹಿವಾಟು ಪತ್ತೆ ಮಾಡಿದ್ದಾರೆ. ಅಧಿಕಾರಿಗಳ ದಾಳಿಯಿಂದ ವ್ಯಾಪಕ ತೆರಿಗೆ ವಂಚನೆ ಜಾಲ ಬಯಲಾಗಿದೆ. ನಗರದ ಕೇಂದ್ರ ವಿಭಾಗ ಸೇರಿದಂತೆ ಚಿಕ್ಕಪೇಟೆ, ಅವೆನ್ಯೂ ರಸ್ತೆ, ಬಿವಿಕೆ ರಸ್ತೆ, ಜೆಸಿ ರಸ್ತೆ, ಎಸ್‌ಪಿ ರೋಡ್ ಪ್ರದೇಶಗಳಲ್ಲಿನ ಹಲವು ವ್ಯಾಪಾರಸ್ಥರ ಮಳಿಗೆಗಳ ಮೇಲೆ ದಾಳಿ ನಡೆದಿದೆ.
ದಾಳಿಯಲ್ಲಿ ಎಲೆಕ್ಟ್ರಾನಿಕ್ಸ್, ವಾಹನ ಬಿಡಿಭಾಗಗಳು, ಗಿಫ್ಟ್ ಐಟಂಗಳು, ಒಣಹಣ್ಣುಗಳು ಸೇರಿದಂತೆ ವಿವಿಧ ಸಾಮಗ್ರಿಗಳ ಖರೀದಿ–ಮಾರಾಟದಲ್ಲಿ ತೆರಿಗೆ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ವೇಳೆ ಪತ್ತೆಯಾಗಿರುವ ಅಕ್ರಮಗಳು
- ತೆರಿಗೆ ಬಿಲ್ ಇಲ್ಲದೇ ಸರಕು ಖರೀದಿ
- ಖರೀದಿ ಬಿಲ್‌ಗಳಿಗಿಂತ ಹೆಚ್ಚಾಗಿ ಸರಕು ಖರೀದಿ
- ಬಿಲ್ ನೀಡದೆ ಸರಕು ಮಾರಾಟ
- ಕಬ್ಬಿಣ, ಉಕ್ಕು, ಹಾರ್ಡ್‌ವೇರ್, ಸಿಮೆಂಟ್ ವ್ಯಾಪಾರಿಗಳಿಂದ ತೆರಿಗೆ ತಪ್ಪಿಸಲು ಮಾಲುಗಳ ಜತೆಯಲ್ಲದ ನಕಲಿ ಬಿಲ್‌ಗಳನ್ನು ನೀಡಿರುವುದು
- ಗುತ್ತಿಗೆದಾರರಿಗೆ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಪಡೆಯಲು ಸಹಾಯಕವಾಗುವ ನಕಲಿ ಬಿಲ್ ಜಾಲ
- 40 ಲಕ್ಷ ರೂ. ಮೀರಿದ ವಹಿವಾಟು ಇದ್ದರೂ GST ನೋಂದಣಿ ಮಾಡದೇ ವ್ಯವಹಾರ
- ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1,000 ಚೀಲ ಗುಟ್ಕಾ ಮತ್ತು ಪಾನ್ ಮಸಾಲಾ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ವಶ
- ಸರಿಯಾದ ಬಿಲ್ ಇಲ್ಲದೆ ಕಬ್ಬಿಣದ ಸ್ಕ್ರ್ಯಾಪ್ ಸಾಗಿಸುತ್ತಿದ್ದ 75 ವಾಹನಗಳು ವಶಕ್ಕೆ
ಕಳೆದ 15 ದಿನಗಳಲ್ಲಿ ಐಟಿ, ಜಿಎಸ್ಟಿ ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆ
ಕಳೆದ 15 ದಿನಗಳಲ್ಲಿ ಬೆಂಗಳೂರಿನಲ್ಲಿ ಐಟಿ ಹಾಗೂ ಜಿಎಸ್ಟಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. 500 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಿ, 100 ಕೋಟಿ ರೂ. ಮರೆಮಾಚಿದ್ದ ವಹಿವಾಟು ಪತ್ತೆ ಮಾಡಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ನಕಲಿ ನಂದಿನಿ ತುಪ್ಪ ಕಡಿವಾಣಕ್ಕೆ KMF ಹೊಸ ಪ್ರಯೋಗ: ಕ್ಯೂ ಆರ್ ಕೋಡಿನಲ್ಲೇ ಅಸಲಿ, ನಕಲಿ ಪತ್ತೆ
ತೆರಿಗೆ ವಂಚನೆ ನಡೆಸಿದ ವ್ಯಾಪಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಹೆಚ್ಚಿನ ದಾಖಲೆಗಳನ್ನು ಪರಿಶೀಲಿಸುವ ಕಾರ್ಯ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು
