ಬೆಂಗಳೂರಿನ ಸಮಸ್ಯೆಗಳಿಗೆ ಜನರೇ ಕೊಟ್ಟರು ಪರಿಹಾರ! 102 ನಿವಾಸಿಗಳಿಂದ ಬಂತು 138 ಐಡಿಯಾ, ವಿಭಿನ್ನ ನಗರ ಯೋಜನೆ ಪ್ಲಾನ್

ಡಿಸೆಂಬರ್ 4 ರಿಂದ 13 ರವರೆಗೆ 10 ದಿನಗಳ ಕಾಲ ನಡೆಯಲಿರುವ ನಗರವ್ಯಾಪಿ ಕಲೆ, ಸಂಸ್ಕೃತಿ ಮತ್ತು ಊರ ಹಬ್ಬ ‘ಬೆಂಗಳೂರು ಜಾತ್ರೆ 2026’ ಇದರ ಹಿನ್ನೆಲೆಯಲ್ಲಿ ನಗರಾಡಳಿತ ಸಾರ್ವಜನಿಕರಿಂದ ನಗರದ ಮೂಲಸೌಕರ್ಯ ಹಾಗೂ ಇತರ ಅಭಿವೃದ್ಧಿಗೆ ಸಲಹೆ-ಸೂಚನೆಗಳನ್ನು, ಡಿಸೈನ್​ಗಳನ್ನು ಕೇಳಿತ್ತು. ಇದಕ್ಕೆ 102 ನಿವಾಸಿಗಳಿಂದ 138 ಐಡಿಯಾಗಳು ಬಂದಿರುವುದು ಗಮನ ಸೆಳೆದಿವೆ.

ಬೆಂಗಳೂರಿನ ಸಮಸ್ಯೆಗಳಿಗೆ ಜನರೇ ಕೊಟ್ಟರು ಪರಿಹಾರ! 102 ನಿವಾಸಿಗಳಿಂದ ಬಂತು 138 ಐಡಿಯಾ, ವಿಭಿನ್ನ ನಗರ ಯೋಜನೆ ಪ್ಲಾನ್
ಜನರೇ ಕೊಟ್ಟ ಐಡಿಯಾ, ನಗರಯೋಜನೆ ಡಿಸೈನ್​ಗಳು
Image Credit source: city designs.bengalurujatre

Updated on: Nov 26, 2026 | 6:35 PM

ಬೆಂಗಳೂರು, ನವೆಂಬರ್ 26: ‘ಬೆಂಗಳೂರು ಜಾತ್ರೆ 2026’ರ ಅಂಗವಾಗಿ ನಗರದ ಮೂಲಸೌಕರ್ಯ ಸುಧಾರಣೆಗೆ ‘ಬೆಂಗಳೂರು ಜಾತ್ರೆ, ಸಿಟಿ ಡಿಸೈನ್ಸ್’ ಎಂಬ ಅಭಿಯಾನದಡಿ ಸಾರ್ವಜನಿಕರಿಂದ ಸಲಹೆ, ವಿನ್ಯಾಸಗಳನ್ನು ಆಹ್ವಾನಿಸಲಾಗಿತ್ತು. ಇದಕ್ಕೆ 102 ನಿವಾಸಿಗಳು, ವಿದ್ಯಾರ್ಥಿಗಳು, ವಿನ್ಯಾಸ ಸಂಸ್ಥೆಗಳು ಹಾಗೂ ಇತರರು ಒಟ್ಟು 138 ಐಡಿಯಾಗಳನ್ನು ಕಳುಹಿಸಿದ್ದಾರೆ. ಈ ಎಲ್ಲ ಪ್ರಸ್ತಾವನೆಗಳು ಸದ್ಯ ನಗರಾಡಳಿತದ ಪರಿಶೀಲನೆಯಲ್ಲಿವೆ ಎಂದು ‘ಬೆಂಗಳೂರು ಸಿಟಿ ಡಿಸೈನ್ಸ್’ ವೆಬ್‌ಸೈಟ್ ತಿಳಿಸಿದೆ.

ಜನರ ಸಮಸ್ಯೆಗಳಿಗೆ ಜನರೇ ಪರಿಹಾರ ಸೂಚಿಸಿರುವುದು ಈ ಅಭಿಯಾನದ ವಿಶೇಷ. ಎಚ್‌ಎಎಲ್ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ನಿರಂತರ, ಅಡೆತಡೆಯಿಲ್ಲದ ಫುಟ್‌ಪಾತ್ ನಿರ್ಮಿಸುವುದು, ಮೆಟ್ರೋ ನಿಲ್ದಾಣಗಳಿಂದ ಬಿಎಂಟಿಸಿ ಬಸ್ ನಿಲ್ದಾಣಗಳಿಗೆ ಕಡಿಮೆ ದೂರದಲ್ಲಿ ಸುರಕ್ಷಿತ ಸಂಪರ್ಕ ಕಲ್ಪಿಸುವುದು ಪ್ರಮುಖ ಸಲಹೆಗಳಾಗಿವೆ.

Loading...

ಬಸ್‌ಗಾಗಿ ಕಾಯುವ ಪ್ರಯಾಣಿಕರಿಗೆ ನೆರಳಿನ ಆಸನ, ಬಸ್ ಆಗಮನದ ನೇರ ಮಾಹಿತಿ, ಮಾರ್ಗ ಸೂಚಕ ಫಲಕಗಳನ್ನು ಒದಗಿಸುವ ವಿನ್ಯಾಸಗಳೂ ಬಂದಿವೆ. ರಸ್ತೆ ವಿಭಜಕಗಳಲ್ಲಿ ಕಡಿಮೆ ಎತ್ತರದ ಸ್ಥಳೀಯ ಗಿಡಗಳನ್ನು ಬೆಳೆಸುವುದು, ಪಾದಚಾರಿಗಳಿಗೆ ಸುರಕ್ಷಿತವಾಗಿ ರಸ್ತೆ ದಾಟಲು ಅವಕಾಶ ಕಲ್ಪಿಸುವುದು, ಕತ್ತಲಿರುವ ರಸ್ತೆಗಳಲ್ಲಿ ಬೆಳಕಿನ ವ್ಯವಸ್ಥೆ ಸುಧಾರಿಸುವ ಸಲಹೆಗಳೂ ಗಮನ ಸೆಳೆದಿವೆ.

Bus Stop Proposal

Bus Stop Proposal

ಫ್ಲೈಓವರ್ ಕೆಳಗಿನ ಖಾಲಿ ಜಾಗವನ್ನು ಪಾದಚಾರಿ ಮಾರ್ಗ, ವಿಶ್ರಾಂತಿ ಸ್ಥಳ, ಆಟದ ಮೈದಾನ ಅಥವಾ ಸಾರ್ವಜನಿಕ ಬಳಕೆಗೆ ರೂಪಿಸುವ ಪ್ರಸ್ತಾವನೆಗಳೂ ಇವೆ. ರಸ್ತೆ ದೀಪ, ಬೆಂಚ್, ಕಸದ ಬುಟ್ಟಿಗಳಿಗೆ ಕ್ಯುಆರ್ ಕೋಡ್ ಅಳವಡಿಸಿ ದೂರು ದಾಖಲಿಸುವ ವ್ಯವಸ್ಥೆಯನ್ನೂ ಸೂಚಿಸಲಾಗಿದೆ.

ಬಸ್ ನಿಲ್ದಾಣದ ವಿನ್ಯಾಸ

Bus Stop

ಬಸ್‌ಗಾಗಿ ಕಾಯುವ ಪ್ರಯಾಣಿಕರಿಗೆ ಬಿಸಿಲು ಮತ್ತು ಮಳೆಯಿಂದ ರಕ್ಷಣೆ ನೀಡುವ ಮೇಲ್ಛಾವಣಿ, ಕುಳಿತುಕೊಳ್ಳಲು ಆಸನ, ಅಂಗವಿಕಲರಿಗೂ ಸುಲಭ ಪ್ರವೇಶ ಹಾಗೂ ಬಸ್‌ಗಳ ಮಾಹಿತಿ ಫಲಕಗಳನ್ನು ಒಂದೇ ವಿನ್ಯಾಸದಲ್ಲಿ ಕಲ್ಪಿಸುವ ಸಲಹೆ ಗಮನ ಸೆಳೆದಿದೆ.

ರಸ್ತೆ ವಿಭಜಕಗಳ ಸುಧಾರಣೆ

ರಸ್ತೆ ವಿಭಜಕಗಳಲ್ಲಿ ಹಸಿರು ಗಿಡಗಳು, ಪ್ರತಿಫಲಕ ಗುರುತುಗಳು ಮತ್ತು ಸುರಕ್ಷಿತವಾಗಿ ರಸ್ತೆ ದಾಟಲು ಪಾದಚಾರಿಗಳಿಗೆ ಅಥವಾ ಪ್ರಾಣಿಗಳಿಗೆ ಆಶ್ರಯದ ಸ್ಥಳಗಳನ್ನು ರೂಪಿಸುವ ಐಡಿಯಾ ಇದೆ. ಸಂಚಾರಕ್ಕೆ ಅಡ್ಡಿಯಾಗದಂತೆ ಕಡಿಮೆ ವೆಚ್ಚದಲ್ಲಿ ರಸ್ತೆ ವಿಭಜಕಗಳನ್ನು ಹೆಚ್ಚು ಸುರಕ್ಷಿತ ಹಾಗೂ ಆಕರ್ಷಕವಾಗಿಸುವುದು ಇದರ ಉದ್ದೇಶ.

ರಸ್ತೆಯ ಸಮಗ್ರ ಮರು ವಿನ್ಯಾಸ

Road Restructure

ಸುಮಾರು 500 ಮೀಟರ್ ಉದ್ದದ ರಸ್ತೆಯನ್ನು ಆಯ್ಕೆ ಮಾಡಿ, ಫುಟ್‌ಪಾತ್, ರಸ್ತೆ ದಾಟುವ ಸ್ಥಳ, ಬೀದಿ ದೀಪ, ಹಸಿರು ಪ್ರದೇಶ, ಬಸ್ ಸಂಪರ್ಕ, ಆಸನ ಮತ್ತು ಕಸದ ವ್ಯವಸ್ಥೆಗಳನ್ನು ಒಟ್ಟಾಗಿ ಸುಧಾರಿಸುವ ವಿನ್ಯಾಸವನ್ನೂ ಆಹ್ವಾನಿಸಲಾಗಿದೆ. ಸಣ್ಣ ಪ್ರದೇಶದಲ್ಲಿ ಕೈಗೊಳ್ಳುವ ಬದಲಾವಣೆ ಇಡೀ ವಾರ್ಡ್‌ಗೆ ಮಾದರಿಯಾಗಬಹುದೇ ಎಂಬುದನ್ನು ಈ ಐಡಿಯಾ ತೋರಿಸುತ್ತದೆ.

ಇದನ್ನೂ ಓದಿ: ಡಿ.4ರಿಂದ 13ರವರೆಗೆ ‘ಬೆಂಗಳೂರು ಜಾತ್ರೆ’: 10 ದಿನ ನಡೆಯುವ ಈ ಹಬ್ಬದಲ್ಲಿ ಏನೆಲ್ಲ ಇರಲಿವೆ?

ಬೆಂಗಳೂರಿನ ಟ್ರಾಫಿಕ್, ಫುಟ್‌ಪಾತ್, ಕಸ ಮತ್ತು ಸಾರ್ವಜನಿಕ ಸಾರಿಗೆ ಸಮಸ್ಯೆಗಳಿಂದ ಬೇಸತ್ತಿದ್ದರೂ ಜನರು ಆಶಾವಾದಿಗಳಾಗಿ ಪರಿಹಾರಕ್ಕಾಗಿ ಇಷ್ಟೊಂದು ಐಡಿಯಾಗಳನ್ನು ನೀಡಿದ್ದಾರೆ. ಈಗ ನಗರಾಡಳಿತ ಈ ಸಲಹೆಗಳನ್ನು ನಿಜವಾಗಿಯೂ ಜಾರಿಗೆ ತರುತ್ತದೆಯೇ? ಅಥವಾ ದುಬಾರಿ ವೆಚ್ಚ, ತಾಂತ್ರಿಕ ಅಡಚಣೆಗಳ ಕಾರಣ ನೀಡಿ ಕಡತಗಳಲ್ಲೇ ಉಳಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us