ಮಹಾರಾಷ್ಟ್ರ ಸಚಿವರಿಗೆ ಬೆಳಗಾವಿ ಪ್ರವೇಶ ನೀಡಬೇಡಿ, ಅವರನ್ನು ಬಂಧಿಸಿ: ಕರವೇ ನಾರಾಯಣ ಗೌಡ ಮನವಿ
ಮಹಾರಾಷ್ಟ್ರದ ಸಚಿವರನ್ನು ಬೆಳಗಾವಿ ಜಿಲ್ಲೆಯೊಳಗೆ ಪ್ರವೇಶಿಸಲು ಬಿಡಬಾರದು. ಅವರನ್ನು ಬಂಧಿಸಬೇಕು ಅಥವಾ ವಾಪಸ್ ಕಳುಹಿಸಬೇಕು ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಹೇಳಿದ್ದಾರೆ.
ಬೆಂಗಳೂರು: ಬೆಳಗಾವಿ (Belagavi) ಪ್ರದೇಶ ಕಬಳಿಸುವ ಸಂಚು ನಿರಂತರವಾಗಿ ನಡೆಯುತ್ತಿದೆ. ಡಿಸೆಂಬರ್ 6ರಂದು ಬೆಳಗಾವಿಯಲ್ಲಿ ಮಹಾರಾಷ್ಟ್ರದ ಸಚಿವರು ಹಾಗೂ ಶಾಸಕರು ಸಭೆಗಳನ್ನು (Maharashtra ministers and MLAs Meeting) ನಡೆಸಲಿದ್ದಾರೆ. ಸಭೆಗೆಂದು ಬಂದಾಗ ಕರ್ನಾಟಕವನ್ನು ಅವರು ಹೀಯಾಳಿಸುತ್ತಾರೆ. ಅಲ್ಲದೇ ಕನ್ನಡಿಗರನ್ನು ಪ್ರಚೋದಿಸುವ ಹೇಳಿಕೆಗಳನ್ನು ನೀಡುತ್ತಾರೆ. ಮರಾಠಿಗರು-ಕನ್ನಡಿಗರ ನಡುವೆ ಎತ್ತಿಕಟ್ಟುವ ಸಂಚು ನಿರಂತರವಾಗಿ ನಡೆಯುತ್ತಿದೆ. ಹೀಗಾಗಿ ಮಹಾರಾಷ್ಟ್ರ ಸಚಿವರ ಪ್ರವೇಶಕ್ಕೆ ಅವಕಾಶ ನೀಡಬಾರದು. ಗಡಿಯಲ್ಲಿ ಅವರನ್ನು ಬಂಧಿಸಬೇಕು ಇಲ್ಲವಾದರೆ ವಾಪಸ್ ಕಳುಹಿಸಬೇಕು ಎಂದು ಬೆಳಗಾವಿ ಜಿಲ್ಲಾಡಳಿತ ಹಾಗೂ ಪೊಲೀಸ್ ವರಿಷ್ಠರಿಗೆ ಹೇಳಿರುವುದಾಗಿ ಕರವೇ ಅಧ್ಯಕ್ಷ ನಾರಾಯಣ ಗೌಡ (KaRaVe President Narayana Gowda) ಹೇಳಿದ್ದಾರೆ.
ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಭೇಟಿ ವಿಚಾರವಾಗಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಇಂದು(ಡಿಸೆಂಬರ್ 04) ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಮುಂದಿನ ಹೋರಾಟದ ರೂಪರೇಷೆ ಬಗ್ಗೆ ಸಮಾಲೋಚನೆ ನಡೆಯಿತು. ಬಳಿಕ ಸುದ್ದಿಗಾರರೊಂದಿಗೆ ನಾರಾಯಣಗೌಡ ಅವರು ಮಾತನಾಡಿದರು.
ಇದನ್ನೂ ಓದಿ: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಭಗವದ್ಗೀತೆ ಪಾಠ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ: ವಿಧಾನಸಭೆ ಸ್ಪೀಕರ್ ಕಾಗೇರಿ
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಬೆಳಗಾವಿ ಎಂದ ತಕ್ಷಣ ನಮ್ಮ ಕಾರ್ಯಕರ್ತರಿಗೆ ರೋಮಾಂಚನ ಆಗುತ್ತದೆ. ಆ ಬೆಳಗಾವಿ ಪ್ರದೇಶವನ್ನು ಕಬಳಿಸುವ ಸಂಚು ನಿರಂತರವಾಗಿ ನಡೆಯುತ್ತಿದೆ. ಮಹಾರಾಷ್ಟ್ರದಿಂದ ಬರಲಿರುವ ಸಚಿವರನ್ನು ಗಡಿಯಲ್ಲಿ ಬಂಧಿಸಬೇಕು, ಇಲ್ಲವಾದರೆ ವಾಪಾಸ್ ಕಳುಹಿಸಬೇಕು ಎಂಬ ಎಚ್ಚರಿಕೆ ಕೊಟ್ಟಾಗಿದೆ. ಆದರೂ ಇವತ್ತು ಮತ್ತೆ ಉದ್ದಟತನದ ಹೇಳಿಕೆ ಅಲ್ಲಿನ ಸಚಿವರು ನೀಡಿದ್ದಾರೆ. ನಮಗೆ ಬೆದರಿಕೆ ಹಾಕಬೇಡಿ. ನಾವೂ ಡಿಸೆಂಬರ್ 6ರಂದು ಬೆಳಗಾವಿಗೆ ಬರುತ್ತೇವೆ. ನಾಳೆ ರಾತ್ರಿ ಹೊರಡಲಿದ್ದೇವೆ ಎಂದರು.
ಸಾವಿರಾರು ಸಂಖ್ಯೆಯಲ್ಲಿ ಕರವೇ ಕಾರ್ಯಕರ್ತರು ಡಿಸೆಂಬರ್ 6ರಂದು ಬೆಳಗಾವಿಗೆ ಬರಲಿದ್ದಾರೆ. ಬೆಂಗಳೂರಿನಿಂದ 100 ವಾಹನಗಳಲ್ಲಿ ಬೆಳಗಾವಿ ಕಡೆ ನಾವು ಹೊರಡಲಿದ್ದೇವೆ. ಬೆಳಗಾವಿಗೆ ಮಹಾರಾಷ್ಟ್ರದ ಸಚಿವರನ್ನು ಜಿಲ್ಲಾಧಿಕಾರಿ ಬಿಟ್ಟರೂ ನಾವು ಬಿಡುವುದಿಲ್ಲ. ಅಲ್ಲಿ ತಡೆಯುವ ಕೆಲಸ ನಾವು ಮಾಡುತ್ತೇವೆ. ಅವರು ಪಾಕಿಸ್ತಾನ-ಭಾರತ ಗಡಿಯ ಭಯೋತ್ಪಾದನೆ ಮಾಡುವ ಕುಲಕ್ಕೆ ಸೇರಿದವರು ಎಂದು ಆಕ್ರೋಶ ಹೊರಹಾಕಿದರು. ಕರ್ನಾಟಕವನ್ನು ಪ್ರಚೋದನೆ ಮಾಡುವುದು ಹಾಗೂ ಭಯೋತ್ಪಾದನೆ ಉಂಟು ಮಾಡುವ ಕೆಲಸ ಮಹಾರಾಷ್ಟ್ರ ಮಾಡುತ್ತಿದೆ. ಅಂತ ರಾಷ್ಟ್ರ ದ್ರೋಹಿಗಳನ್ನು ರಾಜ್ಯಕ್ಕೆ ಬರಬಾರದು. ಹೀಗಾಗಿ ಅವರನ್ನು ತಡೆಯುವ ಕೆಲಸ ನಾವು ಮಾಡುತ್ತೇವೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:54 pm, Sun, 4 December 22