ಬೆಂಗಳೂರು, (ಜನವರಿ 22): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗೆ ತಾತ್ಕಾಲಿಕವಾಗಿ ಅಡಚಣೆ ಉಂಟಾಗಲಿದೆ. ಇದೇ ಫೆಬ್ರವರಿ 10ರಿಂದ 14ರವರೆಗೆ ಏರೋ ಇಂಡಿಯಾದ 15ನೇ ಆವೃತ್ತಿ ಬೆಂಗಳೂರಿನ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಫೆ.5ರಿಂದ14ರ ವರೆಗೆ ಪ್ರತಿದಿನ ಕೆಲವು ಗಂಟೆಗಳ ಕಾಲ ವಾಯುಯಾನ ಮುಚ್ಚಲಾಗುತ್ತದೆ. ಇದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ ಆಗಲಿದೆ. ಈ ಬಗ್ಗೆ ಕೆಂಪೇಗೌಡ ಏರ್ಪೋರ್ಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಏರ್ ಶೋ ಹಿನ್ನೆಯಲ್ಲಿ 10 ದಿನಗಳ ಅವಧಿಯಲ್ಲಿ ಒಟ್ಟು 47 ಗಂಟೆಗಳ ಕಾಲ ವಿಮಾನಯಾನದಲ್ಲಿ ಅಡಚಣೆ ಉಂಟಾಗಲಿದೆ. ನಿಗದಿತ ಅವಧಿಯಲ್ಲಿ ಪ್ರತಿದಿನ ಕೆಲವು ಗಂಟೆಗಳ ಕಾಲ ವಾಯುಪ್ರದೇಶವನ್ನು ಕ್ಲೋಸ್ ಮಾಡಲಾಗುತ್ತದೆ. ಹೀಗಾಗಿ ವಿಮಾನಗಳ ಕಾರ್ಯಾಚರಣೆಗಳು ವ್ಯತ್ಯಯವಾಗಬಹುದು. ಇದರಿಂದ ಪ್ರಯಾಣಿಕರು ತಮ್ಮ ನಿಗದಿತ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಬಹುದು ಎಂದು ಕೆಂಪೇಗೌಡ ಏರ್ಪೋರ್ಟ್ ತಿಳಿಸಿದೆ.
ಯಲಹಂಕದ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ 2025ರ ನಿಮಿತ್ತ ಫೆಬ್ರವರಿ 5 ರಿಂದ ಫೆಬ್ರವರಿ 14, 2025 ರವರೆಗೆ ಪ್ರತಿದಿನ ಕೆಲವು ಗಂಟೆಗಳ ಕಾಲ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾಯುಯಾನ ಪ್ರದೇಶ ಮುಚ್ಚಲ್ಪಡಲಿದ್ದು, ಪ್ರಯಾಣಿಕರು ವಿಮಾನ ವೇಳಾಪಟ್ಟಿಗಳ ಪರಿಷ್ಕೃತ ಅಥವಾ ನವೀಕರಿಸಿದ ವಿವರಗಳಿಗಾಗಿ ಆಯಾ ವಿಮಾನಯಾನ… pic.twitter.com/57iYH5uaIt
— ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು (@blrairport_kn) January 21, 2025
ಯಲಹಂಕದ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ 2025ರ ನಿಮಿತ್ತ ಫೆಬ್ರವರಿ 5 ರಿಂದ ಫೆಬ್ರವರಿ 14, 2025 ರವರೆಗೆ ಪ್ರತಿದಿನ ಕೆಲವು ಗಂಟೆಗಳ ಕಾಲ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾಯುಯಾನ ಪ್ರದೇಶ ಮುಚ್ಚಲ್ಪಡಲಿದ್ದು, ಪ್ರಯಾಣಿಕರು ವಿಮಾನ ವೇಳಾಪಟ್ಟಿಗಳ ಪರಿಷ್ಕೃತ ಅಥವಾ ನವೀಕರಿಸಿದ ವಿವರಗಳಿಗಾಗಿ ಆಯಾ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ. ವಿಮಾನ ವೇಳಾಪಟ್ಟಿಯ ನವೀಕೃತ ಮಾಹಿತಿಗೆ ಅನುಸಾರವಾಗಿ ತಮ್ಮ ಆಗಮನ ಮತ್ತು ನಿರ್ಗಮನವನ್ನು ಯೋಜಿಸಲು ನಾವು ವಿನಂತಿ ಮಾಡುತ್ತೇವೆ ಎಂದು ಕೆಂಪೇಗೌಡ ಏರ್ಪೋರ್ಟ್ ಅಧಿಕೃತವಾಗಿ ತಿಳಿಸಿದೆ.
ಯಲಹಂಕ ವಾಯುನೆಲೆಯಲ್ಲಿ ಇದೇ ಫೆಬ್ರವರಿ 10 ರಿಂದ 14 ರವರೆಗೆ 2025ನೇ ಸಾಲಿನ ಏರ್ ಶೋ ನಡೆಸೋಕೆ ಪ್ಲಾನ್ ರೆಡಿಯಾಗಿದೆ. ಇತ್ತ ಏರ್ ಶೋ ವೇಳೆ ಪಕ್ಷಿಗಳ ಕಾಟಕ್ಕೆ ಬ್ರೇಕ್ ಹಾಕಲು ಯಲಹಂಕ ಸುತ್ತಮುತ್ತ 26ದಿನಗಳ ಕಾಲ ಮಾಂಸ ಮಾರಾಟ ಹಾಗೂ ಮಾಂಸಹಾರಿ ಹೊಟೇಲ್ ಗಳಿಗೆ ಪಾಲಿಕೆ ನಿರ್ಬಂಧ ಹೇರಿತ್ತು. ಇದೀಗ ಪಾಲಿಕೆಯ ಈ ನಡೆಗೆ ಮಾಂಸ ವ್ಯಾಪಾರಿಗಳು ಹಾಗೂ ಹೊಟೇಲ್ ಮಾಲೀಕರ ಆಕ್ಷೇಪ ವ್ಯಕ್ತವಾಗ್ತಿದೆ.ವಾರಗಟ್ಟಲೇ ವ್ಯಾಪಾರಕ್ಕೆ ಹೊಡೆತ ಬೀಳುವ ಆತಂಕಕ್ಕೆ ವ್ಯಾಪಾರಿಗಳು ಕಂಗಾಲಾಗಿಹೋಗಿದ್ದಾರೆ.
ಹಾಗೇ ಯಾವುದೇ ಡ್ರೋನ್, ಏರ್ ಬಲೂನ್ ಸೇರಿ ಬೆಂಗಳೂರಿನಲ್ಲಿ ಯಾವುದೇ ರೀತಿಯ ವೈಮಾನಿಕ ಹಾರಾಟದ ಮೇಲೆ ಫೆಬ್ರವರಿ 10 ರಿಂದ ಐದು ದಿನಗಳ ಕಾಲ ನಿಷೇಧಾಜ್ಞೆ ಹೇರಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:52 pm, Wed, 22 January 25