ಬೆಂಗಳೂರು ವಿಮಾನ ನಿಲ್ದಾಣದ ಟಿ-2 ಮುಂಭಾಗ ಸಾರ್ವಜನಿಕರಿಗಾಗಿ ಆರ್ಟ್ ಪಾರ್ಕ್
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ "ಆರ್ಟ್ ಪಾರ್ಕ್" ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಸಿದ್ಧ ಕಲಾವಿದ ಎಸ್.ಜಿ. ವಾಸುದೇವ್ ಅವರ ತಂಡದ ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದರು. ಪ್ರಯಾಣಿಕರು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಾವಿದರೊಂದಿಗೆ ಸಂವಾದ ನಡೆಸಿದರು. ವಿಮಾನ ನಿಲ್ದಾಣದ ಸಿಬ್ಬಂದಿ ಪ್ರಯಾಣಿಕರಿಗೆ ಸಾಂಸ್ಕೃತಿಕ ಅನುಭವವನ್ನು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಬೆಂಗಳೂರು, ಏಪ್ರಿಲ್ 16: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಬೆಂಗಳೂರಿನ (Bengaluru) ಟರ್ಮಿನಲ್ 2ರ ಮುಂಭಾಗದಲ್ಲಿ ಕಲಾಸಕ್ತರು ಮತ್ತು ಸಾರ್ವಜನಿಕರಿಗಾಗಿ “ಆರ್ಟ್ ಪಾರ್ಕ್” (Art Park) ನ ವಿಶೇಷ ಆವೃತ್ತಿಯನ್ನು ಆಯೋಜಿಸಲಾಗಿತ್ತು. ಪ್ರಸಿದ್ಧ ಕಲಾವಿದ ಎಸ್.ಜಿ. ವಾಸುದೇವ್ ಅವರ ತಂಡದ ಕಲಾವಿದರು ತೆರೆದ ಆವರಣದಲ್ಲಿ ಪ್ರದರ್ಶಿಸಿದ ಕಲಾ ಪ್ರದರ್ಶನವನ್ನು ಪ್ರಯಾಣಿಕರು, ಸ್ಥಳೀಯ ನಿವಾಸಿಗಳು, ಸಿಬ್ಬಂದಿಗಳು ಕಣ್ತುಂಬಿಕೊಂಡರು.
ಈ ಕುರಿತು ಮಾತನಾಡಿದ ಪ್ರಸಿದ್ಧ ಕಲಾವಿದ ಎಸ್.ಜಿ ವಾಸುದೇವ್, “ಆರ್ಟ್ ಪಾರ್ಕ್ ಎಂಬುದು ಸುದೀರ್ಘ ಕಾಲದಿಂದ ಆಯೋಜಿಸುತ್ತಿರುವ ಉಪಕ್ರಮವಾಗಿದ್ದು, ಬೆಂಗಳೂರು ನಗರದಾದ್ಯಂತ 75 ಕ್ಕೂ ಹೆಚ್ಚು ಆವೃತ್ತಿಗಳನ್ನು ನಡೆಸುವ ಮೂಲಕ ಕಲಾವಿದರು ಮತ್ತು ಸಮುದಾಯಗಳನ್ನು ಒಟ್ಟುಗೂಡಿಸಿದೆ. ಅನೌಪಚಾರಿಕ, ಅಂತರ್ಗತ ವಾತಾವರಣಕ್ಕೆ ಹೆಸರುವಾಸಿಯಾದ ಈ ವೇದಿಕೆಯು ಸಮಕಾಲೀನ ಕಲೆಯನ್ನು ಪ್ರೋತ್ಸಾಹಿಸುತ್ತದೆ” ಎಂದು ಹೇಳಿದರು.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರ್ಟ್ ಪಾರ್ಕ್‌ನ್ನು ಪ್ರಯಾಣಿಕರು, ಸಾರ್ವಜನಿಕ ಜೊತೆಗೆ ಕಲಾವಿದರು ಬೆರೆಯುವ ಅನುಭವವನ್ನಾಗಿ ಮರುರೂಪಿಸಲಾಯಿತು. ಕಲಾವಿದರು ಸ್ಥಳದಲ್ಲೇ ಚಿತ್ರಗಳನ್ನು ರಚಿಸಿದ್ದಲ್ಲದೇ, ಆಸಕ್ತರ ಜೊತೆಗೆ ವಿಚಾರ ವಿನಿಮಯ ನಡೆಸಿದರು.
ಈ ವಿಶಿಷ್ಟ ಉಪಕ್ರಮದ ಕುರಿತು ಮಾತನಾಡಿದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಎಂಡಿ ಮತ್ತು ಸಿಇಒ ಹರಿ ಮಾರಾರ್, “ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರನ್ನು ಕೇವಲ ಪ್ರಯಾಣದ ತಾಣವಾಗಿಸದೇ, ಪ್ರಯಾಣಿಕರ ಮನಸೂರೆಗೊಳಿಸುವ ತಾಣವನ್ನಾಗಿಸುವುದು ನಮ್ಮ ಆಶಯವಾಗಿದೆ.
ಅಂತೆಯೇ, ಕಲಾಸಕ್ತರಿಗಾಗಿ ಕಲೆಯನ್ನು ಕಣ್ತುಂಬಿಕೊಳ್ಳಲು ಈ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಕಲೆಯನ್ನು ಒಳಗೊಳ್ಳಲು ಕಲಾವಿದರನ್ನು ಆಹ್ವಾನಿಸಿದ್ದೇವೆ. ವಿಶಿಷ್ಟ ಸಾಂಸ್ಕೃತಿಕ ಅನುಭವಗಳ ಮೂಲಕ ಪ್ರಯಾಣಿಕರ ಪ್ರಯಾಣವನ್ನು ಇನ್ನಷ್ಟು ಸುಂದರಗೊಳಿಸುವ ಆಶಯವನ್ನು ನಾವು ಹೊಂದಿದ್ದೇವೆ” ಎಂದು ಹೇಳಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು, ಕಲೆಯನ್ನು ತನ್ನ ಗುರುತಿನ ಆಧಾರಸ್ತಂಭವಾಗಿ ರೂಪಿಸಿಕೊಂಡಿದೆ. ಮುಖ್ಯವಾಗಿ ಟರ್ಮಿನಲ್ 2 ತನ್ನ ಕಲಾ ಕಾರ್ಯಕ್ರಮದ ಮೂಲಕ ಮನೆಮಾತಾಗಿದೆ. ಪ್ರಸಿದ್ಧ ಕಲಾವಿದ ವಾಸುದೇವ್ ಎಸ್‌ಜಿ ಸೇರಿದಂತೆ ವಿಶ್ವದ 67 ಕಲಾವಿದರ 210 ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಅಲ್ಲದೇ, ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಮತ್ತು ಸಮಕಾಲೀನ ಧ್ವನಿಗಳನ್ನು ಕಲಾ ಪ್ರಕಾರಗಳ ಮೂಲಕ ಬಿಂಬಿಸಲಾಗಿದೆ.
ಇದನ್ನೂ ಓದಿ: ಬೀದರ್ ಬೆಂಗಳೂರು ವಿಮಾನ ಹಾರಾಟ ಇಂದಿನಿಂದ ಶುರು: ಇಲ್ಲಿದೆ ವೇಳಾಪಟ್ಟಿ
ಆರ್ಟ್ ಪಾರ್ಕ್‌ನಂತಹ ಉಪಕ್ರಮಗಳೊಂದಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು, ಪ್ರಯಾಣಿಕರು ಮತ್ತು ಸಂದರ್ಶಕರಿಗೆ ಹೆಚ್ಚು ಅರ್ಥಪೂರ್ಣ ಅನುಭವವನ್ನು ನೀಡುವ ಆಶಯವನ್ನು ಮುಂದುವರೆಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:47 pm, Wed, 16 April 25