ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ವಿಭಾಗೀಯ ಪೀಠ ನೋಟಿಸ್
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸಿದ್ದರಾಮಯ್ಯ, ಅವರ ಪತ್ನಿ, ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ. ಏಪ್ರಿಲ್ 28ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿದೆ. ಇನ್ನು ಮುಡಾ ಹಗರಣದ ಪ್ರಕರಣವನ್ನು ಲೋಕಾಯುಕ್ತ ಮುಂದುವರೆಸಿದೆ.

ಬೆಂಗಳೂರು, ಏಪ್ರಿಲ್ 16: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ (Muda Scam) ತನಿಖೆಯನ್ನು ಸಿಬಿಐಗೆ (CBI) ನೀಡುವಂತೆ ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಅವರ ಪತ್ನಿ ಬಿ.ಎಂ.ಪಾರ್ವತಿ, ಭಾವಮೈದ ಮಲ್ಲಿಕಾರ್ಜುನ ಸ್ವಾಮಿ ಮತ್ತು ಭೂಮಾಲೀಕ ದೇವರಾಜುಗೆ ನೋಟಿಸ್ ಜಾರಿ ಮಾಡಿದೆ.
ಮುಡಾ ಹಗರಣದ ತನಿಖೆಯನ್ನು ಲೋಕಾಯುಕ್ತ ನಡೆಸುತ್ತಿದ್ದು, ಆ ಸಂಸ್ಥೆಯಿಂದ ಪಾರದರ್ಶಕ ತನಿಖೆಯಾಗುತ್ತಿಲ್ಲ. ಹೀಗಾಗಿ, ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ದೂರುದಾರ, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ಏಕ ಸದಸ್ಯ ಪೀಠ ನಿರಾಕರಿಸಿತ್ತು.
ನಂತರ, ಸ್ನೇಹಮಯಿ ಕೃಷ್ಣ ಹೈಕೋರ್ಟ್ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಬುಧವಾರ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಅರ್ಜಿಯ ಸಂಬಂಧ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಭಾವಮೈದ ಮಲ್ಲಿಕಾರ್ಜನ ಸ್ವಾಮಿ, ಭೂಮಾಲೀಕ ದೇವರಾಜು, ಸಿಬಿಐ, ಕೇಂದ್ರ ಗೃಹ ಇಲಾಖೆ, ಲೋಕಾಯುಕ್ತ ಪೊಲೀಸರಿಗೂ ನೋಟಿಸ್ ನೀಡಿದೆ. ಏಪ್ರಿಲ್ 28ಕ್ಕೆ ವಿಚಾರಣೆ ಮುಂದೂಡಿದೆ.
ಲೋಕಾಯುಕ್ತ ತನಿಖೆ ಮತ್ತೆ ಆರಂಭ
ಮುಡಾದಲ್ಲಿ 130ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ಹೀಗಾಗಿ, ಈ ಎಲ್ಲ ಪ್ರಕರಣಗಳ ತನಿಖೆ ನಡೆಸಿ ಮೇ 7ರೊಳಗೆ ಅಂತಿಮ ವರದಿ ಸಲ್ಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಇಂದಿನಿಂದ ಮತ್ತೆ ವಿಚಾರಣೆ ಆರಂಭಿಸಿದೆ. ಲೋಕಾಯುಕ್ತ ಪೊಲೀಸರು ಸಿಎಂ ಮತ್ತು ಅವರ ಪತ್ನಿ ಪಾರ್ವತಿಗೆ ಕ್ಲೀನ್ಚಿಟ್ ನೀಡಿತ್ತು.
ಇದನ್ನೂ ಓದಿ: ರಾಜಕೀಯದಲ್ಲಿ ಮತ್ತೆ ಗರಿಗೆದರಿದ ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಇಡಿ ಸಂಕಷ್ಟ ತಂದಿಡುತ್ತಾ?
ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್
ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ಪೀಠ ವಜಾ ಗೊಳಿಸಿತ್ತು. ಲೋಕಾಯುಕ್ತ ಪೊಲೀಸರ ತನಿಖೆ ಅಸಮರ್ಪಕ ಎನ್ನುವುದಕ್ಕೆ ಕಾರಣಗಳಿಲ್ಲ, ಲೋಕಾಯುಕ್ತ ತನಿಖೆ ತಾರತಮ್ಯಪೂರಿತ ಎಂಬುದಕ್ಕೆ ಆಧಾರಗಳಿಲ್ಲ. ಲೋಕಾಯುಕ್ತ ಸ್ವತಂತ್ರ ತನಿಖಾ ಸಂಸ್ಥೆಯಾಗಿದೆ ಎಂದು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಪ್ರಕರಣವನ್ನು ಸಿಬಿಐಗೆ ನೀಡಲು ನಿರಾಕರಿಸಿ ಆದೇಶ ಹೊರಡಿಸಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:26 pm, Wed, 16 April 25