ಸಿದ್ದರಾಮಯ್ಯ ವಿರುದ್ಧದ ಮುಡಾ ಕೇಸ್: ಆದೇಶ ಕಾಯ್ದಿರಿಸಿದ ಕೋರ್ಟ್, ವಾದ-ಪ್ರತಿವಾದ ವಿವರ ಇಲ್ಲಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಮುಡಾ ಹಗರಣ ಪ್ರಕರಣ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಪ್ರಕರಣ ಸಂಬಂಧ ಲೋಕಾಯುಕ್ತ ತನಿಖೆ ನಡೆಸಿ ವರದಿ ನೀಡಿದೆ. ಆದ್ರೆ, ಬಿರಿಪೋರ್ಟ್ ಸಲ್ಲಿಸಿದ್ದಕ್ಕೆ ಇಡಿ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಇಡಿ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದೆ. ಹಾಗಾದ್ರೆ, ಎರಡೂ ಕಡೆಯಿಂದ ವಾದ ಪ್ರತಿವಾದ ಹೇಗಿತ್ತು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು, (ಏಪ್ರಿಲ್ 08): ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧದ ಮುಡಾ ಪ್ರಕರಣಕ್ಕೆ (Muda Scam Case) ಸಂಬಂಧಿಸಿದಂತೆ ಲೋಕಾಯುಕ್ತ (Lokayukta) ಸಲ್ಲಿಸಿರುವ ಬಿ ರಿಪೋರ್ಟ್ಗೆ ಇಡಿ(Enforcement Directorate) ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸಂಬಂಧ ಇಡಿ ಸಲ್ಲಿಸಿದ ತಕರಾರು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಆದೇಶ ಕಾಯ್ದಿರಿಸಿದೆ. ಇಡಿ ಪರ ವಕೀಲ ಮಧುಕರ್ ದೇಶಪಾಂಡೆ ಹಾಗೂ ಲೋಕಾಯುಕ್ತ ಪೊಲೀಸರ ಪರ ವಕೀಲ ವೆಂಕಟೇಶ್ ಅರಬಟ್ಟಿ ಅವರ ವಾದ ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಏಪ್ರಿಲ್ 15ಕ್ಕೆ ಆದೇಶ ಕಾಯ್ದಿರಿಸಿದೆ. ಇದರಿಂದ ಸಿಎಂ ಸಿದ್ದರಾಮಯ್ಯಗೆ ತೀರ್ಪು ಏನಾಗಲಿದೆಯೋ ಏನೋ ಎಂದು ಢವಢವ ಶುರುವಾಗಿದೆ.
ಲೋಕಾಯುಕ್ತ ಪರ ವಕೀಲರ ವಾದ ಏನು?
ಇಡಿ ಮಧ್ಯಂತರ ಅರ್ಜಿಗೆ ಲೋಕಾಯುಕ್ತ ಪೊಲೀಸರ ಪರ ವಕೀಲ ವೆಂಕಟೇಶ್ ಅರಬಟ್ಡಿ ಆಕ್ಷೇಪಿಸಿದ್ದು. ಇಡಿ ಅರ್ಜಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಇಡಿ ಅರ್ಜಿಯಲ್ಲಿ ತನಿಖೆ ಬಗ್ಗೆಯೂ ಸ್ಪಷ್ಟತೆಯಿಲ್ಲ. ಲೋಕಾಯುಕ್ತ ಪೊಲೀಸರಿಗೆ ಇಡಿ ಒಂದು ಪತ್ರ, 27 ದಾಖಲೆ ನೀಡಿತ್ತು. ಈ ದಾಖಲೆಗಳನ್ನು ಪರಿಗಣಿಸಿ ಲೋಕಾಯುಕ್ತ ತನಿಖಾಧಿಕಾರಿ ಬಿ ರಿಪೋರ್ಟ್ ಸಲ್ಲಿಸಿದ್ದಾರೆ ಎಂದು ವಾದ ಮಂಡಿಸಿದರು.
ಇದನ್ನೂ ಓದಿ: ರಾಜಕೀಯದಲ್ಲಿ ಮತ್ತೆ ಗರಿಗೆದರಿದ ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಇಡಿ ಸಂಕಷ್ಟ ತಂದಿಡುತ್ತಾ?
ಇಡಿಯ ಪತ್ರ ಮಾಧ್ಯಮಗಳಿಗೂ ಸೋರಿಕೆಯಾಗಿತ್ತು. ಇಡಿ ಪತ್ರ , ದಾಖಲೆಗಳನ್ನು ಆರೋಪಪಟ್ಡಿಯ ಪೇಜ್ ನಂಬರ್ 646 ರಿಂದ ಸಲ್ಲಿಸಲಾಗಿದೆ. ಅಲ್ಲದೇ ಲೋಕಾಯುಕ್ತ ತನಿಖಾಧಿಕಾರಿಯ ಅಭಿಪ್ರಾಯವನ್ನೂ ದಾಖಲಿಸಲಾಗಿದೆ. ಇಡಿ ಬಿ ರಿಪೋರ್ಟ್ ಪ್ರಶ್ನಿಸಲು ಅರ್ಹನಾದ ನೊಂದ ವ್ಯಕ್ತಿಯಲ್ಲ. ಇಡಿಗೆ ಈ ರೀತಿಯ ಮಧ್ಯಂತರ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ವೆಂಕಟೇಶ್ ಅರಬಟ್ಡಿ ಅವರು ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿದರು.
ತನಿಖಾಧಿಕಾರಿ ಕಲೆ ಹಾಕಿದ ದಾಖಲೆಗಳು, ಇತರರು ನೀಡಿದ ದಾಖಲೆ ಎಲ್ಲವನ್ನೂ ಪರಿಶೀಲಿಸಿ ಲೋಕಾಯುಕ್ತ ತನಿಖಾಧಿಕಾರಿ ಅಭಿಪ್ರಾಯ ನೀಡಿದ್ದಾರೆ. 3ನೇ ವ್ಯಕ್ತಿಯಾದ ಇಡಿಗೆ ಅವಕಾಶ ನೀಡಿದರೆ ಸಮಸ್ಯೆ ಆಗಲಿದೆ. ಹೀಗಾಗಿ ಇಡಿ ಅರ್ಜಿ ಪರಿಗಣಿಸದಂತೆ ಲೋಕಾಯುಕ್ತ ಎಸ್ ಪಿಪಿ ಕೋರ್ಟ್ಗೆ ಮನವಿ ಮಾಡಿದರು.
ಇಡಿ ಪರ ವಕೀಲ ಮಧುಕರ್ ದೇಶಪಾಂಡೆ ವಾದ
ಇನ್ನು ಇಡಿ ಪರ ವಕೀಲ ಮಧುಕರ್ ದೇಶಪಾಂಡೆ ವಾದ ಮಾಡಿದ್ದು, ಪಿಎಂಎಲ್ ಎ ಕಾಯ್ದೆಯ 66(2) ಅಡಿ ಇಡಿ ಶಾಸನಬದ್ದ ಮಾಹಿತಿದಾರ. ವಿಜಯ್ ಮದನ್ ಲಾಲ್ ಚೌಧರಿ ಕೇಸ್ ನಲ್ಲಿ ಇಡಿ ಅಧಿಕಾರ ಸ್ಪಷ್ಟಪಡಿಸಲಾಗಿದೆ. 2022 ರಲ್ಲಿಯೂ ಮಾರ್ಟಿನ್ ತೀರ್ಪು, ನಾಗರಾಜ್ ತೀರ್ಪುಗಳಿವೆ.. ಇಡಿ ಅಧಿಕಾರ ಸಮರ್ಥಿಸುವ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ. ಇಡಿ, ಸ್ಥಳೀಯ ಪೊಲೀಸರ ತನಿಖೆ ಪರಸ್ಪರ ಪೂರಕವಾಗಿರಬೇಕೆಂದು ತೀರ್ಪಿದೆ. ಈ ಕೇಸ್ ಗಳಲ್ಲಿ ನೊಂದ ವ್ಯಕ್ತಿಗಳಿಗೆ ಮುಖವಿರಬೇಕೆಂದಿಲ್ಲ. ಇಡಿ ಕೂಡಾ ಬಿ ರಿಪೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಬಹುದೆಂದು ವಾದ ಮಂಡಿಸಿದರು.
ಲೋಕಾಯುಕ್ತ ಮೇಲೂ ಕ್ರಮಕ್ಕೆ ಸ್ನೇಹಮಯಿ ಕೃಷ್ಣ ಮನವಿ
ಯಾವುದೇ ವ್ಯಕ್ತಿ ಮಾಹಿತಿ ನೀಡಿದರೆ ಅವರನ್ನು ಸಾಕ್ಷಿಯಾಗಿ ಪರಿಗಣಿಸಬೇಕು. ಆದರೆ ಲೋಕಾಯುಕ್ತ ಪೊಲೀಸರು ಒಂದು ರೀತಿ, ಇಡಿ ಮತ್ತೊಂದು ರೀತಿ ವರದಿ. ಇಡಿಯ ವರದಿಯನ್ನು ಲೋಕಾಯುಕ್ತ ಪೊಲೀಸರು ಪರಿಗಣಿಸಿಲ್ಲ. ಲೋಕಾಯುಕ್ತ ಅಧಿಕಾರಿಗಳ ಮೇಲೂ ಕ್ರಮಕ್ಕೆ ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದು, ಅಂತಿಮ ವರದಿಗೂ ಮುನ್ನ ತನಗೆ ನೋಟಿಸ್ ನೀಡಿಲ್ಲ. ನಷ್ಟ ಆಗಿದೆ ಎನ್ನುತ್ತಾರೆ. ಆರೋಪ ಸಾಬೀತಾಗಿಲ್ಲ ಎನ್ನುತ್ತಾರೆ. ಹೀಗಾದರೆ ಹೋರಾಟಗಾರರು ಏನು ಮಾಡಬೇಕು ಎಂದು ಪ್ರಶ್ನಿಸಿದ್ದು, ಲೋಕಾಯುಕ್ತ ತನಿಖಾಧಿಕಾರಿ ಮೇಲೆ ಕ್ರಮಕ್ಕೆ ಮನವಿ ಮಾಡಿದರು.
ಈ ಎಲ್ಲಾ ವಾದ ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಏಪ್ರಿಲ್ 15ಕ್ಕೆ ಆದೇಶವನ್ನು ಕಾಯ್ದಿರಿಸಿದ್ದು, ಆದೇಶ ಏನು ಬರಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:41 pm, Wed, 9 April 25