ಬೆಳಗಾವಿ ಒಳಚರಂಡಿ ಕಾಮಗಾರಿ: ಮಣ್ಣಿನಡಿ ಸಿಲುಕಿ ಕಾರ್ಮಿಕರಿಬ್ಬರ ದುರ್ಮರಣ
ಬೆಳಗಾವಿಯಲ್ಲಿ ಒಳಚರಂಡಿ ಕಾಮಗಾರಿಯ ಸಂದರ್ಭದಲ್ಲಿ ಭೂಕುಸಿತ ಸಂಭವಿಸಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಬಸವರಾಜ್ ಮತ್ತು ಶಿವಲಿಂಗ ಎಂಬ ಕಾರ್ಮಿಕರು ಮಣ್ಣಿನಡಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಈ ದುರ್ಘಟನೆಯಲ್ಲಿ ಸುರಕ್ಷತಾ ಕ್ರಮಗಳ ನಿರ್ಲಕ್ಷ್ಯವೂ ಗಮನಕ್ಕೆ ಬಂದಿದೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ವ್ಯಕ್ತವಾಗಿವೆ.

ಬೆಳಗಾವಿ, ಏಪ್ರಿಲ್ 16: ಮಣ್ಣಿನಡಿ ಸಿಲುಕಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬೆಳಗಾವಿ (Belagavi) ನಗರದ ಕೋಟೆ ಕೆರೆ ಸಮೀಪ ನಡೆದಿದೆ. ಓರ್ವ ಕಾರ್ಮಿಕ (Worker) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಕೂಲಿ ಕಾರ್ಮಿಕರಾದ ಬಸವರಾಜ್, ಶಿವಲಿಂಗ ಮೃತ ದುರ್ದೈವಿಗಳು. ಬೆಳಗಾವಿ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 4 ಬೆಂಗಳೂರು-ಪುಣೆ ರಸ್ತೆಯ ಪಕ್ಕದ ಸರ್ವಿಸ್ ರಸ್ತೆಗೆ ಹೊಂದಿಕೊಂಡಂತೆ ಒಳಚರಂಡಿ ಕಾಮಗಾರಿ ನಡೆಯುತ್ತಿತ್ತು. ನಾಲ್ಕು ದಿನಗಳಿಂದ ಕೆಲಸ ನಡೆಯುತ್ತಿದ್ದು, ಈಗಾಗಲೇ ಪೈಪ್ಗಳನ್ನು ಅಳವಡಿಸಲು ದೊಡ್ಡ ಮಟ್ಟದ ಗುಂಡಿ ತೆಗೆಯಲಾಗಿತ್ತು.
ಬುಧವಾರ (ಏ.16) ಪೈಪ್ ಅಳವಡಿಸಲು ಗುಂಡಿ ಒಳಗೆ ಕಾರ್ಮಿಕರಾದ ಬಸವರಾಜ್ ಮತ್ತು ಶಿವಲಿಂಗ ಇಳಿದಿದ್ದಾರೆ. ಕೆಲಸ ಶುರು ಮಾಡಿದ ಕೆಲವೇ ಹೊತ್ತಿನಲ್ಲಿ ಮೇಲಿದ್ದ ಮಣ್ಣು ಏಕಾಏಕಿ ಕುಸಿದು ಕಾರ್ಮಿಕರಿಬ್ಬರ ಮೇಲೆಯೇ ಬಿದ್ದಿದೆ. ಇದನ್ನು ಗಮನಿಸಿದ ಸ್ಥಳೀಯರು ಹಾಗೂ ಜೊತೆಗೆ ಇದ್ದ ಕಾರ್ಮಿಕರು ಕೂಡಲೇ ಅವರನ್ನ ರಕ್ಷಣೆ ಮಾಡಲು ಮುಂದಾಗಿದ್ದಾರೆ. ಮಣ್ಣು ಹೆಚ್ಚಿನ ಪ್ರಮಾಣದಲ್ಲಿ ಬಿದ್ದಿದ್ದರಿಂದ ತಕ್ಷಣವೇ ಅವರನ್ನು ಹೊರ ತೆಗೆಯಲು ಆಗಿಲ್ಲ.
ಹೇಗೋ ಹರಸಾಹಸ ಪಟ್ಟು ಮೊದಲು ಬಸವರಾಜ್ ಅವರನನ್ನು ಹೊರ ತೆಗೆಯಲಾಯಿತು. ಕೂಡಲೇ ಅವರನ್ನು ಆ್ಯಂಬುಲೆನ್ಸ್ ಮೂಲಕ ಬಿಮ್ಸ್ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಬಸವರಾಜ್ ಮೃತಪಟ್ಟಿದ್ದಾರೆ. ಇನ್ನು ಒಳಗೆ ಸಿಲುಕಿದ್ದ ಮತ್ತೋರ್ವ ಕಾರ್ಮಿಕ ಶಿವಲಿಂಗ ಅವರನ್ನು ಕೂಡ ಹೊರ ತೆಗೆಯಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಶಿವಲಿಂಗ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇಬ್ಬರ ಮೇಲೆ ಮಣ್ಣು ಬೀಳುತ್ತಿದ್ದಂತೆ ಉಸಿರಾಟದ ಸಮಸ್ಯೆಯಿಂದ ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮದ ಬಸವರಾಜ್ ಸರವೆ (38) ಮತ್ತು ಶಿವಲಿಂಗ ಸರವೆ (20) ಮೃತಪಟ್ಟಿದ್ದಾರೆ.
ಮೃತದೇಹಗಳನ್ನ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಶಿಪ್ಟ್ ಮಾಡಲಾಯಿತು. ಆದರೆ, ಘಟನೆ ನಡೆದು ಇಡೀ ದಿನ ಕಳೆದರೂ ಪಾಲಿಕೆ ಆಯುಕ್ತರಾದ ಬಿ.ಶುಭಾ ಆಗಲಿ ಅವರ ಸಿಬ್ಬಂದಿಯಾಗಲಿ ಅಥವಾ ಗುತ್ತಿಗೆದಾರನಾಗಲಿ ಯಾರು ಕೂಡ ಆಸ್ಪತ್ರೆಯತ್ತ ಸುಳಿಯಲಿಲ್ಲ. ಮಾಳಮಾರುತಿ ಪೊಲೀಸ್ ಠಾಣೆಗೆ ಗುತ್ತಿಗೆದಾರರ ವಿರುದ್ದ ಮತ್ತು ಅಧಿಕಾರಿಗಳ ವಿರುದ್ದ ಮೃತರ ಕುಟುಂಬಸ್ಥರು ದೂರು ದಾಖಲಿಸುತ್ತಿದ್ದಾರೆ.
ಮೃತ ಬಸವರಾಜ್ ಅವರಿಗೆ ಮದುವೆಯಾಗಿ ಮೂರು ಜನ ಮಕ್ಕಳಿದ್ದು ಇವರೇ ಕುಟುಂಬಕ್ಕೆ ಆಧಾರವಾಗಿದ್ದಾರೆ. ಇತ್ತ, ಇನ್ನೂ ಮದುವೆಯಾಗದ ಶಿವಲಿಂಗ ಅವರ ಮೇಲೆ ಇಡೀ ಕುಟುಂಬ ಅವಲಂಬನೆಯಾಗಿತ್ತು. ಮಗನ ಕಳೆದುಕೊಂಡ ತಾಯಿಯ ಆಕ್ರಂದನ ಆಸ್ಪತ್ರೆ ಮುಂದೆ ಮುಗಿಲು ಮುಟ್ಟಿತ್ತು. ತಮಗೆ ನ್ಯಾಯ ಬೇಕು ಅಂತ ಕುಟುಂಬಸ್ಥರು ಗೋಗರೆದರು.
ಘಟನೆಯಿಂದ ಕಾರ್ಮಿಕರೆಲ್ಲರೂ ಬೆಚ್ಚಿ ಬಿದ್ದಿದ್ದಾರೆ, ಇತ್ತ ಘಟನೆಯಾಗಿ ಇಬ್ಬರ ಸಾವಾದರೂ ಅಧಿಕಾರಿಗಳ ಬೇಜವಾಬ್ದಾರಿತನ ತೋರಿದ್ದು ಕುಟುಂಬಸ್ಥರಿಗೆ ಅರಗಿಸಿ ಕೊಳ್ಳಲಾಗುತ್ತಿಲ್ಲ. ಘಟನೆಯಲ್ಲಿ ಕಾರ್ಮಿಕರಿಗೆ ಸುರಕ್ಷತೆ ಕಿಟ್ ಗಳನ್ನ ನೀಡದೇ ಕೆಲಸ ಮಾಡಿಸಿಕೊಳ್ಳುತ್ತಿರುವುದು ಮೇಲ್ನೊಟ್ಟಕ್ಕೆ ಕಂಡು ಬಂದಿದೆ.
ಇದನ್ನೂ ಓದಿ: ಬೆಳಗಾವಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು: ತಪ್ಪಿದ ಭಾರೀ ಅನಾಹುತ, 4 ಗಂಟೆ ಕಾಲ ರೈಲುಗಳ ಸಂಚಾರ ಸ್ಥಗಿತ
ಅದೇನೆ ಇರಲಿ ಹೊಟ್ಟೆ ತುಂಬಿಸಿಕೊಳ್ಳಲು ಊರು ಬಿಟ್ಟು ಬಂದವರು ಇಂದು ಹೆಣವಾಗಿ ಹೋಗಿದ್ದಾರೆ. ಅವರನ್ನೇ ನಂಬಿದ್ದ ಎರಡು ಕುಟುಂಬಗಳು ಬೀದಿಗೆ ಬಿದ್ದಿದ್ದು, ಆ ಕುಟುಂಬಗಳಿಗೆ ತಪ್ಪಿತಸ್ಥರ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ ಹಣ ವಸೂಲಿ ಮಾಡಿ ಪರಿಹಾರ ಕೊಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಜೊತೆಗೆ ಪ್ರಕರಣದಲ್ಲಿ ತಪ್ಪು ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ