ಮಾಜಿ ಶಾಸಕರ ಸಂಬಂಧಿ, ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು: ಕಾರಣ ನಿಗೂಢ
2024-25ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳು ಫುಲ್ ಖುಷ್ ಆಗಿದ್ದಾರೆ. ಇನ್ನು ಅನುತೀರ್ಣ ಹಾಗೂ ಕಡಿಮೆ ಅಂಕಗಳು ಬಂದಿವೆ ಎಂದು ರಾಜ್ಯಾದ್ಯಂತ ಐವರು ಇದ್ಯಾರ್ಥಿಗಳು ಆತ್ಮಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ ಮಾಜಿ ಶಾಸಕ ಸಂಬಂಧಿ ಎಂಬಿಬಿಎಸ್ ವಿದ್ಯಾರ್ಥಿ ನೇಣಿಗೆ ಶರಣಾಗಿದ್ದಾನೆ. ಮತ್ತೊಂದೆಡೆ ಕಾಲೇಜಿಗೆ ಹೋಗು ಎಂದು ಪೋಷಕರು ಬೈದು ಬುದ್ಧಿವಾದ ಹೇಳಿದಕ್ಕೆ ವಿದ್ಯಾರ್ಥಿ ಸಾವಿಗೆ ಶರಣಾಗಿದ್ದಾನೆ. ಮತ್ತೊಂದೆಡೆ ವ್ಯಕ್ತಿಯೋರ್ವ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಮೂರು ಪ್ರತ್ಯೇಕ ಘಟನೆಗಳ ವಿವರ ಇಲ್ಲಿದೆ.

ಚಿಕ್ಕಬಳ್ಳಾಪುರ, (ಏಪ್ರಿಲ್ 09): ಸಣ್ಣ ಸಣ್ಣ ವಿಚಾರಕ್ಕೆ ಆತ್ಮಹತ್ಯೆ (Suicide) ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಿತ್ತಿವೆ. ಅದರಲ್ಲೂ ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳು (Students) ಸಾವಿನ ಹಾದಿ ಹಿಡಿಯುತ್ತಿದ್ದಾರೆ. ನಿನ್ನೆ ಅಷ್ಟೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಾಗೇ ಎಂಬಿಬಿಎಸ್ ವಿದ್ಯಾರ್ಥಿ (MBBS Student) ಸಹ ಸಾವಿನ ಹಾದಿ ತುಳಿದಿದ್ದಾನೆ. ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಸಂಬಂಧಿಯಾಗಿರುವ ಹೇಮಂತ್(18) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಪಟ್ರೇನಹಳ್ಳಿ ತೋಟದ ಮನೆಯಲ್ಲಿ ಇಂದು (ಏಪ್ರಿಲ್ 09) ನೇಣುಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ.
ಮುದ್ದೇನಹಳ್ಳಿಯ ಸತ್ಯಸಾಯಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿದ್ದ ಹೇಮಂತ್, ತಾಯಿ ವೈದ್ಯೆಯ ಜೊತೆ ಪ್ರವಾಸ ಮುಗಿಸಿ ಮನೆಗೆ ಬಂದಿದ್ದ. ಆದ್ರೆ, ಅದೇನಾಯ್ತೋ ಏನೋ ಸಂಜೆ ಸ್ನಾನ ಮುಗಿಸಿ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಹೇಮಂತ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಹೇಮಂತ್ ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ: ಕರ್ನಾಟಕದಲ್ಲಿ ಐವರು ವಿದ್ಯಾರ್ಥಿಗಳು ಆತ್ಮಹತ್ಯೆ
ಕಾಲೇಜಿಗೆ ಹೋಗು ಎಂದು ಬುದ್ಧಿ ಹೇಳಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ
ಬೆಳಗಾವಿ: ಕಾಲೇಜಿಗೆ ಹೋಗು ಎಂದು ಬೈದು ಬುದ್ಧಿವಾದ ಹೇಳಿದ್ದಕ್ಕೆ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೇಣು ಬಿಗಿದುಕೊಂಡು ಸಾಗರ್ ತುಕಾರಾಮ ಕುರಾಡೆ(19) ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನಾಗರಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಾಗರ್ ಚಿಕ್ಕೋಡಿಯಲ್ಲಿನ ಖಾಸಗಿ ಕಾಲೇಜಿನಲ್ಲಿ ಬಿಸಿಎ ಓದುತ್ತಿದ್ದ. ಕಾಲೇಜಿಗೆ ಹೋಗು ಎಂದು ಬೈಯ್ದು ಬುದ್ಧಿವಾದ ಹೇಳಿದ್ದಕ್ಕೆ ಈ ನಿರ್ಧಾರ ಕೈಗೊಂಡಿದ್ದಾನೆ.
ಕೃಷ್ಣಾ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
ವಿಜಯಪುರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿ ಲಮಾಣಿ (45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಮ್ ನ ಮುಂಭಾಗದ ಸೇತುವೆ ಮೇಲಿಂದ ನದಿಗೆ ಹಾರಿದ್ದಾನೆ.
ರವಿ ಬಾಗಲಕೋಟೆ ತಾಲುಕಿನ ಮುಚಖಂಡಿ ಗ್ರಾಮದ ನಿವಾಸಿಯಾಗಿದ್ದು, ಮನೆಯಲ್ಲಿ ಜಗಳ ಮಾಡಿಕೊಂಡು ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ನಿಡಗುಂದಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.