ಬೆಂಗಳೂರು ಜಂಗಲ್ ರಾಜ್ ಆಗಿ ಬದಲಾಗುತ್ತಿದೆ?: ಶಾಲೆಯ ಮುಂದೆಯೇ ಲಾಂಗ್ ಬೀಸಿದ ಪುಂಡರು!; ವಿಡಿಯೋ ವೈರಲ್!
ಬೆಂಗಳೂರಿನ ಡೇನಿಸ್ ರಸ್ತೆಯ ಸೇಂಟ್ ಅಲ್ಫೋನ್ಸಸ್ ಶಾಲಾ ಜಂಕ್ಷನ್ ಬಳಿ ಯುವಕರ ಗುಂಪೊಂದು ಮಾರಕಾಸ್ತ್ರ ಪ್ರದರ್ಶಿಸಿ ಸಾರ್ವಜನಿಕವಾಗಿ ದಾದಾಗಿರಿ ನಡೆಸಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಹೆಲ್ಮೆಟ್ ಧರಿಸದೆ ಬಂದ ಎಂಟು ಯುವಕರು ಚಾಕು ಪ್ರದರ್ಶಿಸಿ ಶಾಲಾ ಮಕ್ಕಳು, ಪೋಷಕರು ಮತ್ತು ಸವಾರರಲ್ಲಿ ಭೀತಿ ಮೂಡಿಸಿದ್ದಾರೆ. ಸಿಸಿಟಿವಿ ಆಧರಿಸಿ ತಕ್ಷಣ ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬೆಂಗಳೂರು, ಮೇ,31: ಕಾನೂನು ಸುವ್ಯವಸ್ಥೆಗೆ ಹೆಸರಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಪುಂಡರ ಅಡ್ಡೆಯಾಗುತ್ತಿದೆಯೇ ಎಂಬ ಅನುಮಾನ ಮೂಡಲಾರಂಭಿಸಿದೆ. ನಗರದ ಡೇನಿಸ್ ರಸ್ತೆಯ (Davis Road) ಸೆಂಟ್ ಅಲ್ಫೋನ್ಸಸ್ ಶಾಲೆಯ (St. Alphonsus School) ಜಂಕ್ಷನ್ ಬಳಿ, ಸಾರ್ವಜನಿಕವಾಗಿ ಯುವಕರ ಗುಂಪೊಂದು ಮಾರಕಾಸ್ತ್ರ ಪ್ರದರ್ಶಿಸಿ ದಾದಾಗಿರಿ ನಡೆಸಿರುವ ಬೆಚ್ಚಿಬೀಳಿಸುವ ಘಟನೆ ಶನಿವಾರ ಮುಂಜಾನೆ ನಡೆದಿದೆ. ಈ ಕುರಿತಾದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿ ನಾಗರಿಕರು ಆತಂಕಗೊಂಡಿದ್ದಾರೆ.
ಲಕ್ಕಿ ಜಂಕ್ಷನ್‌ನ ಗೌಸಿಯಾ ಟೀ ಹೋಟೆಲ್ ಎದುರು ಶನಿವಾರ ಬೆಳಿಗ್ಗೆ ಸುಮಾರು 7:30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಈ ಬಗ್ಗೆ ಸ್ಥಳೀಯ ನಿವಾಸಿಯೊಬ್ಬರು ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಎರಡು ಸ್ಕೂಟರ್‌ಗಳಲ್ಲಿ ಹೆಲ್ಮೆಟ್ ಧರಿಸದೆ, ಟ್ರಾಫಿಕ್ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಿ ಒಂದೊಂದು ದ್ವಿಚಕ್ರ ವಾಹನದಲ್ಲಿ ತಲಾ ನಾಲ್ಕು ಜನರಂತೆ ಒಟ್ಟು ಎಂಟು ಜನ ಯುವಕರು ಬಂದಿದ್ದರು. ಅಲ್ಲಿ ಸಣ್ಣ ವಿಷಯಕ್ಕೆ ಪರಸ್ಪರ ತೀವ್ರ ಜಗಳ ಆರಂಭಿಸಿದ್ದಾರೆ.
ಇಲ್ಲಿದೆ ನೋಡಿ ಎಕ್ಸ್ ವಿಡಿಯೋ:
Lawless Bengaluru? Goons Wave Knife in Public While Traffic Rules Take a Back Seat
A concerned citizen shared this video and stated that the incident occurred on Davis Road at around 7:30 AM on Saturday, near the junction of St. Alphonsus School, opposite Ghousia Tea Hotel.… pic.twitter.com/5eNxSFUTdF
— Karnataka Portfolio (@karnatakaportf) May 31, 2026
ಯುವಕರ ನಡುವಿನ ಮಾತಿನ ಚಕಮಕಿ ತೀವ್ರಗೊಳ್ಳುತ್ತಿದ್ದಂತೆ, ಆ ಗುಂಪಿನಲ್ಲಿದ್ದ ಒಬ್ಬ ಪುಂಡ ಸಾರ್ವಜನಿಕ ರಸ್ತೆಯಲ್ಲೇ ದೊಡ್ಡ ಲಾಂಗ್ ಹೊರತೆಗೆದು ಬೀಸುತ್ತಾ ಎದುರಾಳಿಗಳಿಗೆ ಮತ್ತು ಸಾರ್ವಜನಿಕರಿಗೆ ಬೆದರಿಕೆ ಹಾಕಿದ್ದಾನೆ. ಈ ಘಟನೆ ನಡೆದ ಸ್ಥಳದ ಅಕ್ಕಪಕ್ಕದಲ್ಲೇ ಶಾಲೆ, ಟೀ ಸ್ಟಾಲ್ ಹಾಗೂ ಸಿಗರೇಟ್ ಅಂಗಡಿಗಳಿರುವುದರಿಂದ, ಮುಂಜಾನೆ ಶಾಲೆಗೆ ತೆರಳುತ್ತಿದ್ದ ಸಣ್ಣ ಸಣ್ಣ ಮಕ್ಕಳು, ಪೋಷಕರು ಹಾಗೂ ಸವಾರರು ಈ ರೌಡಿಸಂ ನೋಡಿ ತೀವ್ರ ಭಯಭೀತರಾಗಿದ್ದಾರೆ. ಇತ್ತೀಚೆಗೆ ಈ ಭಾಗದಲ್ಲಿ ಇಂತಹ ಗಾಂಜಾ ಪುಂಡರ ಮತ್ತು ರೌಡಿಗಳ ಹಾವಳಿ ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ: ‘ನಿನ್ನ ಜೀವನ ನಡೆಯೋದೇ ನಮ್ಮಿಂದ!’: ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ
ಘಟನೆ ನಡೆದ ಜಂಕ್ಷನ್‌ನಲ್ಲಿ ಬೆಂಗಳೂರು ನಗರ ಪೊಲೀಸರ ಅಧಿಕೃತ ಸಿಸಿಟಿವಿ (CCTV) ಕ್ಯಾಮೆರಾಗಳು ಹಾಗೂ ಖಾಸಗಿ ಅಂಗಡಿಗಳ ಕಣ್ಗಾವಲು ಕ್ಯಾಮೆರಾಗಳಿದ್ದು, ಇಡೀ ಕೃತ್ಯದ ದೃಶ್ಯಾವಳಿಗಳು ಅದರಲ್ಲಿ ಸೆರೆಯಾಗಿವೆ. “ಇಂತಹ ರೌಡಿಸಂ ಮತ್ತು ಮಾರಕಾಸ್ತ್ರ ಪ್ರದರ್ಶನವನ್ನು ಸಣ್ಣ ಗಲಾಟೆ ಎಂದು ನಿರ್ಲಕ್ಷಿಸದೆ, ಪೊಲೀಸರು ತಕ್ಷಣವೇ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಬೇಕು” ಎಂದು ಸಾರ್ವಜನಿಕರು ಸಿಟಿ ಪೊಲೀಸ್ ಕಮಿಷನರ್‌ಗೆ ಜಾಲತಾಣಗಳ ಮೂಲಕ ಒತ್ತಾಯಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





