
ಬೆಂಗಳೂರು, ಅಕ್ಟೋಬರ್ 13: ಬೆಂಗಳೂರಿನಲ್ಲಿ ಅಂತರ್ಜಾತಿ ಪ್ರೇಮ ಮತ್ತು ಲಿವ್-ಇನ್ ಸಂಬಂಧದ ವಿವಾದವೊಂದು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮದುವೆಯಾಗುವುದಾಗಿ ನಂಬಿಸಿದ್ದ ಪ್ರಿಯಕರ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ನೊಂದ ಯುವತಿಯೊಬ್ಬಳು ದೂರು ನೀಡಿರುವ ಘಟನೆ ನಡೆದಿದೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಹಾಗೂ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಿವಾಸಿ ಸೂರ್ಯ ಎಂಬಾತ ಕಳೆದ ಐದು ತಿಂಗಳುಗಳಿಂದ ಬೆಂಗಳೂರಿನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದರು. ಆರಂಭದಲ್ಲಿ ಸೂರ್ಯನ ಪೋಷಕರಾದ ರಾಜ್ ಕುಮಾರ್ ಮತ್ತು ಪ್ರೇಮ್ ಕುಮಾರಿ ಈ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದು, ತಂಗಿಯ ಮದುವೆಯ ನಂತರ ಇವರಿಬ್ಬರ ವಿವಾಹ ಮಾಡಿಸುವುದಾಗಿ ಭರವಸೆ ನೀಡಿದ್ದರು. ಮೊದಲ ಮೂರು ತಿಂಗಳು ಸೂರ್ಯನ ತಂಗಿಯೂ ಇವರೊಂದಿಗಿದ್ದಳು ಎನ್ನಲಾಗಿದೆ.
ಆದರೆ, ಸೂರ್ಯನ ಸ್ನೇಹಿತ ಪ್ರವೀಣ್ ಎಂಬಾತ ಯುವತಿಯ ಬಗ್ಗೆ ಯುವಕನ ಪೋಷಕರ ಬಳಿ ಚಾಡಿ ಹೇಳಿದ್ಧಾನೆ. ಆತನ ಮಾತು ನಂಬಿ, ಅಂತರ್ಜಾತಿ ಮದುವೆ ಎಂಬ ಕಾರಣಕ್ಕೆ ಪೋಷಕರು ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪೋಷಕರ ಪ್ರಚೋದನೆಗೆ ಒಳಗಾದ ಸೂರ್ಯ, ಸೆಪ್ಟೆಂಬರ್ 24ರಂದು ಆಫೀಸ್‌ಗೆ ಹೋದವನು ವಾಪಸ್ ಬಾರದೆ ತಲೆಮರೆಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರಿಯಕರ ಕಾಣೆಯಾದ ನಂತರ ಆತನ ಪೋಷಕರನ್ನು ಸಂಪರ್ಕಿಸಿದಾಗ ತನಗೆ “ನೀನು ಜಾಸ್ತಿ ಮಾತನಾಡಿದರೆ ಕೊಲೆ ಮಾಡುತ್ತೇವೆ” ಎಂದು ಜೀವ ಬೆದರಿಕೆ ಹಾಕಿ, ಕೆಟ್ಟ ಪದಗಳಿಂದ ನಿಂದಿಸಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ. ಪ್ರಕರಣ ಸಂಬಂಧ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ