1 ವರ್ಷದಲ್ಲಿ 15 ಬಾರಿ ತಾಂತ್ರಿಕ ದೋಷ: ನಮ್ಮ ಮೆಟ್ರೋ ವಿರುದ್ಧ ಪ್ರಯಾಣಿಕರ ಆಕ್ರೋಶ, ನಿರ್ವಹಣೆ ಇಲ್ಲ ಎಂದು ಅಸಮಾಧಾನ

ಬೆಂಗಳೂರು ನಮ್ಮ ಮೆಟ್ರೋದಲ್ಲಿ ಪದೇಪದೇ ತಾಂತ್ರಿಕ ದೋಷಗಳು ಕಾಣಿಸಿಕೊಳ್ಳುತ್ತಿದ್ದು, ಕಳೆದ ಒಂದು ವರ್ಷದಲ್ಲಿ 15 ಬಾರಿ ಸಮಸ್ಯೆ ಎದುರಾಗಿದೆ. ಇದರಿಂದಾಗಿ ಗ್ರೀನ್, ಪರ್ಪಲ್ ಹಾಗೂ ಯೆಲ್ಲೋ ಲೈನ್‌ಗಳಲ್ಲಿ ಪ್ರಯಾಣಿಕರು ಪರದಾಡುವಂತಾಗಿತ್ತು. ಸದ್ಯ, ಸಮಸ್ಯೆ ನಿವಾರಣೆಗೆ ಬಿಎಂಆರ್‌ಸಿಎಲ್ ಪರ್ಯಾಯ ಕ್ರಮಕ್ಕೆ ಮುಂದಾಗಿದೆ ಎಂಬ ವಿಚಾರ ಗೊತ್ತಾಗಿದೆ.

1 ವರ್ಷದಲ್ಲಿ 15 ಬಾರಿ ತಾಂತ್ರಿಕ ದೋಷ: ನಮ್ಮ ಮೆಟ್ರೋ ವಿರುದ್ಧ ಪ್ರಯಾಣಿಕರ ಆಕ್ರೋಶ, ನಿರ್ವಹಣೆ ಇಲ್ಲ ಎಂದು ಅಸಮಾಧಾನ
ನಮ್ಮ ಮೆಟ್ರೋ ಯೆಲ್ಲೋ ಲೈನ್ (ಸಂಗ್ರಹ ಚಿತ್ರ)
Image Credit source: PTI
Edited By:

Updated on: Aug 25, 2026 | 7:32 AM

ಮುಖ್ಯಾಂಶಗಳು

  • ಒಂದು ವರ್ಷದಲ್ಲಿ 15 ಬಾರಿ ತಾಂತ್ರಿಕ ದೋಷ
  • ಮೂರು ಮೆಟ್ರೋ ಮಾರ್ಗಗಳಲ್ಲೂ ಸಮಸ್ಯೆ
  • ಪ್ರಯಾಣಿಕರಿಂದ ಆಕ್ರೋಶ

ಬೆಂಗಳೂರು, ಆಗಸ್ಟ್ 25: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಲಕ್ಷಾಂತರ ಜನರ ನೆಚ್ಚಿನ ಸಾರ್ವಜನಿಕ ಸಾರಿಗೆಯಾಗಿರುವ ನಮ್ಮ ಮೆಟ್ರೋದಲ್ಲಿ (BMRCL Namma Metro) ಪದೇಪದೇ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿರುವುದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ. ಕಳೆದ ಒಂದು ವರ್ಷದಲ್ಲಿ ಮೆಟ್ರೋ ರೈಲುಗಳಲ್ಲಿ ಸುಮಾರು 15 ಬಾರಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಗಂಟೆಗಟ್ಟಲೆ ಪರದಾಡಿದ ಅನುಭವವಾಗಿದೆ. ಪ್ರತಿದಿನ ಸುಮಾರು 11 ಲಕ್ಷ ಪ್ರಯಾಣಿಕರು ನಮ್ಮ ಮೆಟ್ರೋ ಸೇವೆಯನ್ನು ಬಳಸುತ್ತಾರೆ. ವೇಗದ ಹಾಗೂ ಸಂಚಾರ ದಟ್ಟಣೆಯಿಂದ ಮುಕ್ತ ಪ್ರಯಾಣದ ನಿರೀಕ್ಷೆಯಲ್ಲಿ ಮೆಟ್ರೋ ಅವಲಂಬಿಸಿರುವ ಜನರಿಗೆ ರೈಲುಗಳಲ್ಲಿನ ತಾಂತ್ರಿಕ ದೋಷಗಳು ತೊಂದರೆ ಉಂಟುಮಾಡುತ್ತಿವೆ.

ಗ್ರೀನ್, ಪರ್ಪಲ್, ಯೆಲ್ಲೋ ಲೈನ್‌ಗಳಲ್ಲೂ ಸಮಸ್ಯೆ

ಬೆಂಗಳೂರು ಮೆಟ್ರೋದ ಗ್ರೀನ್, ಪರ್ಪಲ್ ಹಾಗೂ ಯೆಲ್ಲೋ ಲೈನ್‌ಗಳಲ್ಲಿ ತಾಂತ್ರಿಕ ಸಮಸ್ಯೆಗಳು ವರದಿಯಾಗಿವೆ. ಈ ಪೈಕಿ ಮಾದಾವರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೆ ಸಂಪರ್ಕ ಕಲ್ಪಿಸುವ ಗ್ರೀನ್ ಲೈನ್‌ನಲ್ಲಿ ಹೆಚ್ಚಿನ ಬಾರಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇನ್ನು ವೈಟ್‌ಫೀಲ್ಡ್‌ನಿಂದ ಚಲ್ಲಘಟ್ಟವರೆಗೆ ಸಂಪರ್ಕ ಕಲ್ಪಿಸುವ ಪರ್ಪಲ್ ಲೈನ್‌ ಹಾಗೂ ಆರ್.ವಿ. ರೋಡ್‌ನಿಂದ ಬೊಮ್ಮಸಂದ್ರವರೆಗೆ ಸಂಪರ್ಕ ಕಲ್ಪಿಸುವ ಯೆಲ್ಲೋ ಲೈನ್‌ನಲ್ಲೂ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿರುವ ಪ್ರಕರಣಗಳು ವರದಿಯಾಗಿವೆ.

ಪದೇಪದೇ ರೈಲುಗಳು ಮಾರ್ಗಮಧ್ಯೆ ನಿಂತುಕೊಳ್ಳುವುದರಿಂದ ಪ್ರಯಾಣಿಕರು ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ಕಾಯುವಂತಾಗುತ್ತಿದೆ. ಇದರಿಂದ ಕೆಲಸಕ್ಕೆ ತೆರಳುವವರು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿನಿತ್ಯದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ.

ಸಮಸ್ಯೆ ಎದುರಾದರೆ ಬಿಎಂಟಿಸಿ ಬಸ್‌ಗಳ ಮೊರೆ

ತಾಂತ್ರಿಕ ದೋಷಗಳಿಂದ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ಕಡಿಮೆ ಮಾಡಲು ಬಿಎಂಆರ್‌ಸಿಎಲ್ ಕ್ರಮಕ್ಕೆ ಮುಂದಾಗಿದೆ. ಈ ಸಂಬಂಧ ಬಿಎಂಟಿಸಿಯೊಂದಿಗೆ ಮಾತುಕತೆ ನಡೆಸಿದ್ದು, ಯಾವುದೇ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಅಡ್ಡಿಯಾದರೆ ಆ ಮಾರ್ಗದಲ್ಲಿ ಹೆಚ್ಚುವರಿ ಬಿಎಂಟಿಸಿ ಬಸ್‌ಗಳನ್ನು ನಿಯೋಜಿಸುವ ಕುರಿತು ಚರ್ಚೆ ನಡೆದಿದೆ.

ಮೆಟ್ರೋ ರೈಲು ನಿಂತಿರುವ ಮಾಹಿತಿ ದೊರೆತ ತಕ್ಷಣ ಬಿಎಂಟಿಸಿ ಅಧಿಕಾರಿಗಳಿಗೆ ತಿಳಿಸಿ, ಪ್ರಯಾಣಿಕರಿಗೆ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸುವ ಯೋಜನೆಯೂ ಇದೆ. ಅಗತ್ಯವಿದ್ದರೆ ಸಮಸ್ಯೆ ಎದುರಾದ ನಿಲ್ದಾಣವನ್ನು ಹೊರತುಪಡಿಸಿ ಇತರ ನಿಲ್ದಾಣಗಳ ನಡುವೆ ರೈಲು ಸಂಚಾರ ನಡೆಸುವ ಶಾರ್ಟ್ ಲೂಪ್ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆಯೂ ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ.

ಸ್ಪೇರ್ ಪಾರ್ಟ್ಸ್ ಬದಲಾವಣೆಗೆ ಸೂಚನೆ

ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು, ಅಗತ್ಯವಿರುವ ಬಿಡಿಭಾಗಗಳನ್ನು ಬದಲಾಯಿಸುವಂತೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಎದುರಾದಾಗ ಪ್ರಯಾಣಿಕರಿಗೆ ಸಾಧ್ಯವಾದಷ್ಟು ಕಡಿಮೆ ತೊಂದರೆಯಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣಿಕರ ಆಕ್ರೋಶ

ಆದರೆ, ಪದೇಪದೇ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿರುವುದಕ್ಕೆ ನಿರ್ವಹಣೆಯ ಕೊರತೆಯೇ ಕಾರಣ ಎಂದು ಕೆಲವು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೆಟ್ರೋ ನಗರದ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿರುವುದರಿಂದ ರೈಲುಗಳ ನಿರ್ವಹಣೆ ಹಾಗೂ ತಾಂತ್ರಿಕ ತಪಾಸಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ಇದನ್ನೂ ಓದಿ: Namma Metro: ನಮ್ಮ ಮೆಟ್ರೋ ಬ್ಲೂ ಲೈನ್ ಕಾರ್ಯಾಚರಣೆ ಮತ್ತಷ್ಟು ವಿಳಂಬ: 2027ಕ್ಕೆ ಗಡುವು!

ಒಟ್ಟಿನಲ್ಲಿ, ವೇಗದ ಪ್ರಯಾಣದ ಭರವಸೆ ನೀಡುವ ನಮ್ಮ ಮೆಟ್ರೋದಲ್ಲಿ ಪದೇಪದೇ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿರುವುದು ಪ್ರಯಾಣಿಕರಲ್ಲಿ ಅಸಮಾಧಾನ ಮೂಡಿಸಿದೆ. ಸಮಸ್ಯೆ ಎದುರಾದಾಗ ಪರ್ಯಾಯ ವ್ಯವಸ್ಥೆ ಮಾಡುವುದರ ಜೊತೆಗೆ, ದೋಷಗಳು ಮರುಕಳಿಸದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us