
ಬೆಂಗಳೂರು, ಫೆಬ್ರವರಿ 06: ಬೆಂಗಳೂರಿಗರ ಜೀವನಾಡಿ ಮೆಟ್ರೋ (Metro) ಪ್ರಯಾಣ ದರ ಫೆಬ್ರವರಿ 9ರಿಂದ ಶೇಕಡಾ 5ರಷ್ಟು ಏರಿಕೆ ಆಗಲಿದೆ. ಜನರ ವಿರೋಧದ ನಡುವೆ ಟಿಕೆಟ್ ದರ ಹೆಚ್ಚಿಸಲಾಗಿದ್ದು, BMRCL ವಿರುದ್ಧ ಆಕ್ರೋಶದ ಕಟ್ಟೆಯೊಡಿದಿದೆ. ಸಾಮಾಜಿಕ ಜಾಲತಾಣದಲ್ಲಿ ಮೆಟ್ರೋ ಬಾಯ್ಕಾಟ್ ಕ್ಯಾಂಪೇನ್ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೆ ಈ ವಿಚಾರ ರಾಜ್ಯ ಸರ್ಕಾರ ಮತ್ತು ಬಿಜೆಪಿ ಮಧ್ಯೆ ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಇದೆಲ್ಲದರ ಮಧ್ಯೆ ಕೇಂದ್ರ ಸರ್ಕಾರದ ಜೊತೆ ಚರ್ಚಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಮೆಟ್ರೋ ಟಿಕೆಟ್ ದರ ಏರಿಕೆ ಬಗ್ಗೆ ಕೇಂದ್ರದ ಜತೆ ಚರ್ಚಿಸುವುದಾಗಿ ಸಿಎಂ ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಮೆಟ್ರೋ ದರಗಳನ್ನು ರಾಜ್ಯ ಸರ್ಕಾರ ನಿರ್ಧರಿಸುವುದಿಲ್ಲ. ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ರಚಿಸಿರುವ ಸ್ವತಂತ್ರ ದರ ನಿಗದಿ ಕಮಿಟಿ ನಿರ್ಧರಿಸುತ್ತದೆ. ದರ ನಿಗದಿ ಸಮಿತಿ ನಿಗದಿತ ಅವಧಿಯೊಳಗೆ ಶಿಫಾರಸು ಸಲ್ಲಿಸಬೇಕು. ಸೆಕ್ಷನ್ 37ರ ಅಡಿಯಲ್ಲಿ ಈ ಶಿಫಾರಸುಗಳನ್ನ ಮೆಟ್ರೋ ಆಡಳಿತ ಶಿಫಾರಸು ಒಪ್ಪಿ ಜಾರಿ ಮಾಡಬೇಕಿದೆ ರಾಜ್ಯ ಸರ್ಕಾರಕ್ಕೆ ಅಥವಾ ಬಿಎಂಆರ್ಸಿಎಲ್ಗೆ ಅಧಿಕಾರವಿಲ್ಲ. ಶಿಫಾರಸು ರದ್ದುಗೊಳಿಸುವ, ಉಲ್ಲಂಘಿಸುವ ಅಧಿಕಾರವಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರು ಮೆಟ್ರೋ ಕೇವಲ ಒಂದು ಸಾರಿಗೆ ವ್ಯವಸ್ಥೆಯಲ್ಲ, ಅದು ನಮ್ಮ ನಗರದ ಲಕ್ಷಾಂತರ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಕುಟುಂಬಗಳ ಕನಸುಗಳನ್ನು ಹೊತ್ತೊಯ್ಯುವ, ಪ್ರಗತಿಯತ್ತ ಮುನ್ನಡೆಸುವ ಮತ್ತು ಈ ಎಲ್ಲರ ದೈನಂದಿನ ಜೀವನಾಡಿಯ ಸಂಕೇತವಾಗಿದೆ. ಇತ್ತೀಚಿನ ಮೆಟ್ರೋ ದರ ಪರಿಷ್ಕರಣೆಯ ನಂತರ ಪ್ರಯಾಣಿಕರಿಂದ ವ್ಯಕ್ತವಾದ ಆತಂಕ ಮತ್ತು… pic.twitter.com/ErF8XEv8ZL
— CM of Karnataka (@CMofKarnataka) February 6, 2026
ಈ ದರ ನಿಗದಿ ಕಮಿಟಿಯನ್ನು ಕೇಂದ್ರ ಸರ್ಕಾರ ರಚಿಸುತ್ತದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವ ವಹಿಸಿರುತ್ತಾರೆ. ಕೇಂದ್ರದ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತೆ. ಸಂಸತ್ತಿನಲ್ಲಿ ತಾವೇ ಈ ಶಿಫಾರಸುಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಮಾಡಿ ಈಗ ನಮ್ಮ ಸರ್ಕಾರದ ಮೇಲೆ ಬೆಲೆ ಏರಿಕೆ ನಿರ್ಧಾರದ ಆರೋಪ ಹೊರಿಸುವುದು ಅಪ್ರಾಮಾಣಿಕ ನಡೆ ಮಾತ್ರವಲ್ಲ, ಜನರನ್ನು ಉದ್ದೇಶಪೂರ್ವಕವಾಗಿ ತಪ್ಪುದಾರಿಗೆಳೆಯುವ ಪ್ರಯತ್ನವಾಗಿದೆ. ದರ ಪರಿಷ್ಕರಣೆಯ ಹೊಣೆಯನ್ನು ನಮ್ಮ ಸರ್ಕಾರದ ತಲೆಗೆ ಕಟ್ಟುವುದು ದುಷ್ಟತನ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ಕೇಂದ್ರವೇ ಮೆಟ್ರೋ ದರ ಏರಿಸಿದ್ದಾದ್ರೆ ರಾಜ್ಯ ಇವತ್ತೇ ಪತ್ರ ಬರೆಯಲಿ, ತೇಜಸ್ವಿ ಸೂರ್ಯ ಸವಾಲ್
ಕಾನೂನು ದರ ಪರಿಷ್ಕರಣೆಯ ಎಲ್ಲಾ ಪ್ರಕ್ರಿಯೆಗಳನ್ನು ನಿಗದಿಪಡಿಸುತ್ತದೆಯಾದರೂ, ಜನಹಿತದ ವಿಚಾರದಲ್ಲಿ ನಮ್ಮ ಬದ್ಧತೆಯೂ ಕಾನೂನಿನ ಗಡಿಗಳನ್ನು ಮೀರಿದೆ. ನಾವು ನಿಮ್ಮೊಂದಿಗೆ ದೃಢವಾಗಿ ಇರುತ್ತೇವೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಎಲ್ಲರಿಗೂ ಲಭ್ಯವಾಗುವಂತೆ ಕೈಗೆಟುಕುವ ದರದಲ್ಲಿರಬೇಕು. ದೈನಂದಿನ ಬದುಕಿಗೆ ಬಲ ತುಂಬುವಂತಿರಬೇಕು. ಬೆಂಗಳೂರಿನ ಬೆಳವಣಿಗೆಯೂ ಪ್ರಯಾಣಿಕರಿಗೆ ಹೊರೆಯಾಗಬಾರದು. ನಾನು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಿದ್ದೇನೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.