
ಬೆಂಗಳೂರು, ಜೂನ್ 24: ಬೆಂಗಳೂರಿನ ಲಕ್ಷಾಂತರ ಮೆಟ್ರೋ (Namma Metro) ಪ್ರಯಾಣಿಕರ ಆತಂಕಕ್ಕೆ ಕೊನೆಗೂ ತೆರೆ ಬಿದ್ದಿದೆ. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಉಂಟಾಗಿದ್ದ ಗಂಭೀರ ತಾಂತ್ರಿಕ ದೋಷದಿಂದಾಗಿ ಮಂಗಳವಾರ ಸಂಜೆ ಸ್ಥಗಿತಗೊಂಡಿದ್ದ ನಮ್ಮ ಮೆಟ್ರೋ ನೇರಳೆ ಮಾರ್ಗದ (ಕಾಡುಗೋಡಿಯಿಂದ ಚಲ್ಲಘಟ್ಟ) ಸಂಚಾರ ಇಂದು ಮುಂಜಾನೆಯಿಂದ ಎಂದಿನಂತೆ ಯಥಾಸ್ಥಿತಿಗೆ ಮರಳಿದೆ. ಬಿಎಂಆರ್‌ಸಿಎಲ್‌ನ (BMRCL) ತಾಂತ್ರಿಕ ನಿರ್ವಹಣಾ ತಂಡಗಳು ಇಡೀ ರಾತ್ರಿ ಶ್ರಮಿಸಿ ಮುಂಜಾನೆ 3:30ರ ಸುಮಾರಿಗೆ ಸಮಸ್ಯೆಯನ್ನು ಪೂರ್ಣ ಪ್ರಮಾಣದಲ್ಲಿ ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ, ನಿಗದಿತ ವೇಳಾಪಟ್ಟಿಯಂತೆ ಬೆಳಗ್ಗೆ 5 ಗಂಟೆಯಿಂದಲೇ ರೈಲುಗಳ ಸಂಚಾರ ಆರಂಭವಾಗಿದ್ದು, ಸಾರ್ವಜನಿಕರು ನಿರಾಳರಾಗಿದ್ದಾರೆ.
ಮಂಗಳವಾರ ಸಂಜೆ 6:30ರ ಪೀಕ್ ಅವರ್‌ನಲ್ಲಿ ಕಬ್ಬನ್ ಪಾರ್ಕ್ ನಿಲ್ದಾಣದ ಬಳಿ ಮೆಟ್ರೋದ ‘ಥರ್ಡ್ ರೈಲ್ ಸಿಸ್ಟಮ್ನ ಕರೆಂಟ್ ಕಲೆಕ್ಟರ್ ಶೂ’ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದರಿಂದಾಗಿ ಮೆಜೆಸ್ಟಿಕ್‌ನಿಂದ ಎಂ.ಜಿ. ರಸ್ತೆ ನಡುವಿನ ಪ್ರಮುಖ ನಿಲ್ದಾಣಗಳ ಸಂಪರ್ಕ ಕಡಿತಗೊಂಡು ಸಾವಿರಾರು ಪ್ರಯಾಣಿಕರು ಲಾರಿ, ಗೂಡ್ಸ್ ವಾಹನಗಳನ್ನು ಹತ್ತಿ ತೆರಳುವಂತಾಗಿತ್ತು. ರೈಲಿನೊಳಗೆ ಸಿಲುಕಿದ್ದ ಜನರನ್ನು ಅರ್ಧ ಗಂಟೆಯ ಬಳಿಕ ಕೆಳಗಿಳಿಸಲಾಗಿತ್ತು. ರಾತ್ರಿ ಕೊನೆಯ ರೈಲಿನ ಸಮಯ ಮುಗಿದರೂ ದುರಸ್ತಿ ಕಾರ್ಯ ಮುಂದುವರಿದಿತ್ತು. ಪರಿಣಾಮವಾಗಿ ಸಾವಿರಾರು ಸಂಖ್ಯೆಯಲ್ಲಿ ಮೆಟ್ರೋ ಪ್ರಯಾಣಿಕರು ಬಸ್, ಆಟೋ ಮತ್ತು ಕ್ಯಾಬ್‌ಗಳು ಸುಲಭವಾಗಿ ಸಿಗದೆ, ರಸ್ತೆಯಲ್ಲಿ ಲಾರಿಗಳು ಮತ್ತು ಗೂಡ್ಸ್ ವಾಹನಗಳು ಸೇರಿದಂತೆ ಯಾವುದೇ ಲಭ್ಯ ವಾಹನಗಳನ್ನು ಏರಿ ಪ್ರಯಾಣಿಸುವ ದೃಶ್ಯಗಳು ಬೆಂಗಳೂರಿನಲ್ಲಿ ಕಂಡುಬಂದವು.
ನಿರಂತರ ಕಾರ್ಯಾಚರಣೆಯ ನಂತರ ಮುಂಜಾನೆ 3:30ಕ್ಕೆ ದೋಷ ಮುಕ್ತಗೊಳಿಸಲಾಯಿತು. ತದನಂತರ ಬೆಳಗ್ಗೆ 5 ಗಂಟೆಗೆ ಎಂದಿನಂತೆ ವೇಳಾಪಟ್ಟಿಯಂತೆ ರೈಲುಗಳು ಹಳಿಗೆ ಇಳಿದವು. ಮುಂಜಾನೆ 5:21ಕ್ಕೆ ಕಾಡುಗೋಡಿಯಿಂದ (ವೈಟ್‌ಫೀಲ್ಡ್) ಹೊರಟ ಮೊದಲ ಮೆಟ್ರೋ ರೈಲು ಕಬ್ಬನ್ ಪಾರ್ಕ್ ನಿಲ್ದಾಣಕ್ಕೆ ಯಶಸ್ವಿಯಾಗಿ ಆಗಮಿಸಿತು. ಪ್ರಸ್ತುತ ಕಾಡುಗೋಡಿಯಿಂದ ಚಲ್ಲಘಟ್ಟದವರೆಗಿನ ಇಡೀ ನೇರಳೆ ಮಾರ್ಗದಲ್ಲಿ ಯಾವುದೇ ವ್ಯತ್ಯಯವಿಲ್ಲದೆ ಮೆಟ್ರೋ ಸಂಚರಿಸುತ್ತಿದ್ದು, ಕಚೇರಿ ಹಾಗೂ ದೈನಂದಿನ ಕೆಲಸಗಳಿಗೆ ತೆರಳುವ ಸಾರ್ವಜನಿಕರು ನಿರಾತಂಕವಾಗಿ ಪ್ರಯಾಣಿಸುತ್ತಿದ್ದಾರೆ.
ಇದನ್ನೂ ಓದಿ: ನೇರಳೆ ಮಾರ್ಗದ ರೈಲುಗಳಲ್ಲಿ ತಾಂತ್ರಿಕ ದೋಷ; ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ 30 ನಿಮಿಷ ರೈಲಿನಲ್ಲೇ ಸಿಲುಕಿದ ಪ್ರಯಾಣಿಕರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ