
ಬೆಂಗಳೂರು, ಆಗಸ್ಟ್ 20: ಬೆಂಗಳೂರು ನಮ್ಮ ಮೆಟ್ರೋದ (Namma Metro) ಹಳದಿ ಮಾರ್ಗ (Yellow Line Metro) ಪ್ರಾರಂಭವಾದಾಗಿನಿಂದ ಹೊಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ (Hosur Road Traffic) ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ವರದಿಯಾಗಿದೆ. ಆಗಸ್ಟ್ 10 ರಂದು ಯೆಲ್ಲೋ ಲೈನ್ ಕಾರ್ಯಾಚರಣೆ ಪ್ರಾರಂಭವಾಗಿದೆ. ಅದಾದ ಕೆಲವೇ ದಿನಗಳಲ್ಲಿ ಆ ಭಾಗದ ರಸ್ತೆಗಳಲ್ಲಿ ಒಟ್ಟಾರೆ ಸಂಚಾರ ದಟ್ಟಣೆ ಪ್ರಮಾಣ ಶೇ 10 ರಷ್ಟು ಇಳಿಕೆಯಾಗಿದೆ ಎಂಬುದು ತಿಳಿದುಬಂದಿದೆ. ಆರ್‌ವಿ ರಸ್ತೆಯನ್ನು ಬೊಮ್ಮಸಂದ್ರದೊಂದಿಗೆ ಸಂಪರ್ಕಿಸುವ 19 ಕಿ.ಮೀ. ಉದ್ದ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 10 ರಂದು ಚಾಲನೆ ನೀಡಿದ್ದಾರೆ.
ನಮ್ಮ ಮೆಟ್ರೋ ಜಾಲವನ್ನು ಒಟ್ಟಾರೆಯಾಗಿ 96 ಕಿ.ಮೀ.ಗೆ ವಿಸ್ತರಿಸುವ ಈ ಮಾರ್ಗವು ಬೆಂಗಳೂರು ದಕ್ಷಿಣದ ವಸತಿ ವಲಯಗಳನ್ನು ಎಲೆಕ್ಟ್ರಾನಿಕ್ ಸಿಟಿಯ ಐಟಿ ಮತ್ತು ಉತ್ಪಾದನಾ ಕೇಂದ್ರಗಳಿಗೆ ಸಂಪರ್ಕಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ವಿಶೇಷವಾಗಿ, ಇದು ಬೆಂಗಳೂರಿನ ಅತ್ಯಂತ ಟ್ರಾಫಿಕ್ ಹೊಂದಿರುವ ಪ್ರದೇಶಗಳಲ್ಲಿ ಒಂದಾದ ಸಿಲ್ಕ್ ಬೋರ್ಡ್ ಜಂಕ್ಷನ್ ಸಂಚಾರ ದಟ್ಟಣೆಗೆ ಪರಿಹಾರವನ್ನು ಒದಗಿಸುತ್ತದೆ.
ಯೆಲ್ಲೋ ಲೈನ್ ಮೆಟ್ರೋ ಕಾರ್ಯಾರಂಭ ಮಾಡಿದ ಒಂದು ದಿನದ ನಂತರ, ಹೊಸೂರು ರಸ್ತೆಯಲ್ಲಿನ ಸಂಚಾರ ದಟ್ಟಣೆಯು ಹಿಂದಿನ ಸೋಮವಾರಗಳಿಗೆ ಹೋಲಿಸಿದರೆ ಸರಾಸರಿ 11.5 ಕಿ.ಮೀನಷ್ಟು ಕಡಿಮೆಯಾಗಿದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಪೀಕ್ ಅವರ್ನಲ್ಲಿ (ಸಂಜೆ 4 ರಿಂದ ರಾತ್ರಿ 9 ರವರೆಗೆ) ಸಂಚಾರ ದಟ್ಟಣೆ ಪ್ರಮಾಣ ಶೇ 32 ರಷ್ಟು ಕಡಿಮೆಯಾಗಿದೆ. ಆಗಸ್ಟ್ 12 ರ ಹೊತ್ತಿಗೆ ಬೆಳಗ್ಗೆ ಟ್ರಾಫಿಕ್ ಹಿಂದಿನ ದಿನಗಳಿಗೆ ಹೋಲಿಸಿದರೆ ಶೇ 22 ರಷ್ಟು ಕಡಿಮೆಯಾಗಿತ್ತು. ಕಚೇರಿಗೆ ಹೋಗುವವರ ಪೈಕಿ ಹೆಚ್ಚಿನವರು ಮೆಟ್ರೋ ಪ್ರಯಾಣ ಆಯ್ಕೆ ಮಾಡಿದ್ದೇ ಇದಕ್ಕೆ ಕಾರಣ. ಒಟ್ಟಾರೆಯಾಗಿ ಶೇ 10 ರಷ್ಟು ಸಚಾರ ದಟ್ಟಣೆ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.
ಯೆಲ್ಲೋ ಲೈನ್ ಕಾರ್ಯಾಚರಣೆ ಶುರು ಮಾಡಿದ ಬೆನ್ನಲ್ಲೇ ನಮ್ಮ ಮೆಟ್ರೋ ದೈನಂದಿನ ಒಟ್ಟು ಪ್ರಯಾಣಿಕರ ಸಂಖ್ಯೆ 10 ಲಕ್ಷದ ಗಡಿ ದಾಟಿದೆ. 50,000 ಕ್ಕೂ ಹೆಚ್ಚು ಪ್ರಯಾಣಿಕರು ಹಳದಿ ಮಾರ್ಗವನ್ನು ಬಳಸುತ್ತಿದ್ದಾರೆ. ಸದ್ಯ ಹಳದಿ ಮಾರ್ಗದಲ್ಲಿ ಕೇವಲ ಮೂರು ರೈಲುಗಳು 25 ನಿಮಿಷಗಳ ಅಂತರದಲ್ಲಿ ಸಂಚರಿಸುತ್ತಿವೆ.
ಇದನ್ನೂ ಓದಿ: ಯೆಲ್ಲೋ ಲೈನ್ ಮೆಟ್ರೋ ನಿಲ್ದಾಣಗಳಲ್ಲಿ ಕುಳಿತುಕೊಳ್ಳಲು ಕುರ್ಚಿ ವ್ಯವಸ್ಥೆಯೇ ಇಲ್ಲ! ಪ್ರಯಾಣಿಕರ ಆಕ್ರೋಶ
ರೈಲುಗಳ ಸಂಖ್ಯೆಯನ್ನು ಕ್ರಮೇಣ ಹೆಚ್ಚಿಸಲು ಮತ್ತು ಪ್ರಯಾಣಿಕರ ಕಾಯುವ ಸಮಯವನ್ನು ಕಡಿಮೆ ಮಾಡಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚುತ್ತಿರುವ ಜನಸಂದಣಿ ನಿಯಂತ್ರಿಸಲು, ಹಳದಿ ಮಾರ್ಗದ ನಿಲ್ದಾಣಗಳಲ್ಲಿ ಬಿಎಂಆರ್‌ಸಿಎಲ್ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ.