ಬೆಂಗಳೂರು-ಮುಂಬೈ ಮಾರ್ಗಕ್ಕೆ ವಂದೇ ಭಾರತ್ ಸ್ಲೀಪರ್ ಸಿದ್ಧ: ಬೆಂಗಳೂರಿನಲ್ಲೇ ತಯಾರಾದ ರೈಲಿನ ಪ್ರಾಯೋಗಿಕ ಸಂಚಾರ ಶೀಘ್ರ

Bengaluru-Mumbai Vande Bharat sleeper train: ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಸಿದ್ಧವಾಗಿದೆ. ಎರಡು 16 ಬೋಗಿಗಳ ರೈಲು ಸೆಟ್‌ಗಳನ್ನು ನೈಋತ್ಯ ರೈಲ್ವೆ ನಿಯೋಜನೆ ಮಾಡಿದ್ದು, ಶೀಘ್ರದಲ್ಲೇ ಟ್ರಯಲ್ ರನ್ ನಡೆಯಲಿದೆ. ಸುಮಾರು 16 ಗಂಟೆಗಳಲ್ಲಿ ಪ್ರಯಾಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಬೆಂಗಳೂರು-ಮುಂಬೈ ಮಾರ್ಗಕ್ಕೆ ವಂದೇ ಭಾರತ್ ಸ್ಲೀಪರ್ ಸಿದ್ಧ: ಬೆಂಗಳೂರಿನಲ್ಲೇ ತಯಾರಾದ ರೈಲಿನ ಪ್ರಾಯೋಗಿಕ ಸಂಚಾರ ಶೀಘ್ರ
ವಂದೇ ಭಾರತ್ ರೈಲು (ಸಾಂದರ್ಭಿಕ ಚಿತ್ರ)
Image Credit source: PTI

Updated on: Aug 10, 2026 | 10:49 AM

ಮುಖ್ಯಾಂಶಗಳು

  • ಬೆಂಗಳೂರು-ಮುಂಬೈ ಸ್ಲೀಪರ್ ರೈಲು ಸಿದ್ಧ
  • ಸುಮಾರು 16 ಗಂಟೆಯಲ್ಲಿ ಪ್ರಯಾಣ ಸಾಧ್ಯತೆ
  • ಶೀಘ್ರದಲ್ಲೇ ಟ್ರಯಲ್ ರನ್ ಆರಂಭ

ಬೆಂಗಳೂರು, ಆಗಸ್ಟ್ 10: ಬೆಂಗಳೂರು-ಮುಂಬೈ ನಡುವೆ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು (Bengaluru-Mumbai Vande Bharat Sleeper) ಸಂಚಾರಕ್ಕೆ ಸಿದ್ಧತೆ ಅಂತಿಮ ಹಂತ ತಲುಪಿದೆ. ನೈಋತ್ಯ ರೈಲ್ವೆ (SWR) ಎರಡು 16 ಬೋಗಿಗಳ ವಂದೇ ಭಾರತ್ ಸ್ಲೀಪರ್ ರೈಲು ಸೆಟ್‌ಗಳನ್ನು ಸ್ವೀಕರಿಸಿ ಅಧಿಕೃತವಾಗಿ ನಿಯೋಜನೆ ಮಾಡಿದೆ. ಶೀಘ್ರದಲ್ಲೇ ಟ್ರಯಲ್ ರನ್ (ಪ್ರಾಯೋಗಿಕ ಸಂಚಾರ) ನಡೆಸಿ, ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲೇ ತಯಾರಾದ ರೈಲು

ಬೆಂಗಳೂರಿನಲ್ಲೇ ಬಿಇಎಂಎಲ್ (BEML) ತಯಾರಿಸಿದ ಈ ಎರಡು ರೈಲು ಸೆಟ್‌ಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ನೇತೃತ್ವದ ಯೋಜನೆಯಡಿ ನಿರ್ಮಿಸಲಾಗಿದೆ. ವಿವಿಧ ಹಂತದ ಪರೀಕ್ಷೆ ಹಾಗೂ ಪರಿಶೀಲನೆಗಳ ಬಳಿಕ ರೈಲುಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ವಿಭಾಗದ ಡಿವಿಷನಲ್ ರೈಲ್ವೆ ಮ್ಯಾನೇಜರ್ ಆಶುತೋಷ್ ಕುಮಾರ್ ಸಿಂಗ್ ಅವರು ರೈಲು ಸೆಟ್‌ಗಳು ಕಮಿಷನ್ ಆಗಿರುವುದನ್ನು ಖಚಿತಪಡಿಸಿದ್ದಾರೆ. ರೈಲು ಸೇವೆ ಆರಂಭಕ್ಕೆ ಸಿದ್ಧತೆ ನಡೆಯುತ್ತಿದ್ದು, ಶೀಘ್ರದಲ್ಲೇ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ಸುಮಾರು 16 ಗಂಟೆಯಲ್ಲಿ ಬೆಂಗಳೂರು-ಮುಂಬೈ ಪ್ರಯಾಣ

ವಂದೇ ಭಾರತ್ ಸ್ಲೀಪರ್ ರೈಲು ರಾತ್ರಿ ಬೆಂಗಳೂರಿನಿಂದ ಹಾಗೂ ಮುಂಬೈನಿಂದ ಹೊರಡಲಿದೆ. ಎರಡೂ ನಗರಗಳ ನಡುವಿನ ಪ್ರಯಾಣದ ಅವಧಿ ಸುಮಾರು 16 ಗಂಟೆ ಆಗಿರಲಿದೆ. ವಿಮಾನ ಪ್ರಯಾಣಕ್ಕಿಂತ ಕಡಿಮೆ ದರದಲ್ಲಿ ಸೇವೆ ಲಭ್ಯವಾಗುವ ನಿರೀಕ್ಷೆಯಿದೆ.

ರೈಲು ಸಂಚಾರವನ್ನು KSR ಬೆಂಗಳೂರು-ಮುಂಬೈ CSMT ಮಾರ್ಗದಲ್ಲಿ ಆರಂಭಿಸುವ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯುತ್ತಿದೆ. ಇದೇ ವೇಳೆ, SMVT ಬೆಂಗಳೂರು ನಿಲ್ದಾಣದಿಂದ ಸೇವೆ ಆರಂಭಿಸುವ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಎರಡೂ ಆಯ್ಕೆಗಳನ್ನು ಪರಿಗಣಿಸಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

16 ಬೋಗಿಗಳ ರೈಲಿನಲ್ಲಿ ಏನೇನಿರಲಿದೆ ಸೌಲಭ್ಯ?

ಈ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಒಟ್ಟು 16 ಬೋಗಿಗಳಿರಲಿವೆ. ಇದರಲ್ಲಿ 11 ತ್ರೀ-ಟಯರ್ ಎಸಿ (3AC), ನಾಲ್ಕು 2-ಟಯರ್ ಎಸಿ (2AC) ಹಾಗೂ ಒಂದು ಫಸ್ಟ್ ಕ್ಲಾಸ್ ಎಸಿ (1AC) ಕೋಚ್ ಇರಲಿದೆ.

ಬೆಂಗಳೂರು – ಮುಂಬೈ ವಂದೇ ಭಾರತ್ ಸ್ಲೀಪರ್ ಟಿಕೆಟ್ ದರ ಎಷ್ಟು?

3AC ಟಿಕೆಟ್ ದರವು ಊಟ ಸೇರಿದಂತೆ ಸುಮಾರು 3,000 ರೂ. ಇರಬಹುದು ಎಂದು ನಿರೀಕ್ಷಿಸಲಾಗಿದೆ. ರೈಲಿನ ಪ್ರಾಯೋಗಿಕ ಸಂಚಾರದ ಬಳಿಕ ಪ್ರಯಾಣದ ಸಮಯ ಮತ್ತು ವೇಗಕ್ಕೆ ಸಂಬಂಧಿಸಿದ ಅಂತಿಮ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಕಲ್ಯಾಣ ಕರ್ನಾಟಕ ಭಾಗಕ್ಕೂ ರೈಲು ಸಂಪರ್ಕ

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಕಲ್ಯಾಣ ಕರ್ನಾಟಕ ಮಾರ್ಗವಾಗಿ ಸಂಚರಿಸುವ ನಿರೀಕ್ಷೆಯಿದೆ. ಈ ಮಾರ್ಗವು ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಲಿದೆ. ಸುಮಾರು 1,137 ಕಿ.ಮೀ. ಉದ್ದದ ಈ ಮಾರ್ಗ ಸಂಪೂರ್ಣ ವಿದ್ಯುದ್ದೀಕರಣಗೊಂಡಿದ್ದು, ಡಬ್ಲಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಹಲವು ಭಾಗಗಳಲ್ಲಿ ಗಂಟೆಗೆ 130 ಕಿ.ಮೀ. ವೇಗದಲ್ಲಿ ರೈಲು ಸಂಚರಿಸಲು ಸಾಧ್ಯವಿದೆ.

ಪ್ರಸ್ತುತ ಬೆಂಗಳೂರು-ಮುಂಬೈ ನಡುವೆ ಉದ್ಯಾನ್ ಎಕ್ಸ್‌ಪ್ರೆಸ್ ಹಾಗೂ SMVT ಬೆಂಗಳೂರು-ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ ಸೇರಿದಂತೆ ಪ್ರಮುಖ ರೈಲುಗಳು ಸಂಚರಿಸುತ್ತಿವೆ. ಇವುಗಳಿಗೆ ಸುಮಾರು 24 ಗಂಟೆಗಳ ಪ್ರಯಾಣದ ಅವಧಿ ಬೇಕಾಗುತ್ತದೆ. ಹೊಸ ವಂದೇ ಭಾರತ್ ಸ್ಲೀಪರ್ ಸೇವೆ ಆರಂಭವಾದರೆ ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆಯಾಗಲಿದೆ.

ಇದನ್ನೂ ಓದಿ: ಹಳಿಗಳ ಮೇಲೆ ಓಡೋ ಲಕ್ಸುರಿ ಹೋಟೆಲ್!: ವೈರಲ್ ಆಯ್ತು ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ‘ಫಸ್ಟ್ ಎಸಿ’ ಲುಕ್

ಹುಬ್ಬಳ್ಳಿ ಮಾರ್ಗವಾಗಿ ರೈಲು ಓಡಿಸಬೇಕು ಎಂಬ ಜನಪ್ರತಿನಿಧಿಗಳು ಹಾಗೂ ರೈಲ್ವೆ ಹೋರಾಟಗಾರರ ಬೇಡಿಕೆಯೂ ಇತ್ತು. ಆದರೆ ಆ ಮಾರ್ಗದ ಉದ್ದ, ಕೆಲವು ಭಾಗಗಳಲ್ಲಿನ ಸಿಂಗಲ್ ಟ್ರ್ಯಾಕ್ ಹಾಗೂ ವೇಗದ ನಿರ್ಬಂಧಗಳ ಹಿನ್ನೆಲೆಯಲ್ಲಿ ಆ ಆಯ್ಕೆಯನ್ನು ಪರಿಗಣಿಸಲಾಗಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us