ಲಾಭದ ಹಾದಿಗೆ ಮರಳಿದ ನಮ್ಮ ಮೆಟ್ರೋ: 9 ತಿಂಗಳಲ್ಲಿ ಬರೋಬ್ಬರಿ 450 ಕೋಟಿ ರೂ. ಆದಾಯ
ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ ವರೆಗೆ 4 ತಿಂಗಳಿನಲ್ಲಿ ನಮ್ಮ ಮೆಟ್ರೋಗೆ ಬರೋಬ್ಬರಿ 8 ಕೋಟಿ ರೂಪಾಯಿ ನಷ್ಟವಾಗಿತ್ತು. ಆದರೆ, ಅಕ್ಟೋಬರ್ ಬಳಿಕ ಬಿಎಂಆರ್ಸಿಎಲ್ ನಷ್ಟದಿಂದ ಲಾಭಕ್ಕೆ ಮರಳಿದೆ. ಅಕ್ಟೋಬರ್ನಲ್ಲಿ 6.8 ಕೋಟಿ ರೂ., ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ತಲಾ 4 ಕೋಟಿ ರೂ. ಲಾಭ ಆಗಿದೆ.
ಬೆಂಗಳೂರು, ಜನವರಿ 11: ನಷ್ಟದಲ್ಲಿ ಸಾಗುತ್ತಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ನಡುವೆ ನಮ್ಮ ಮೆಟ್ರೋ ಲಾಭದ ಹಳಿಗೆ ಮರಳಿದೆ. ಮೊದಲ ಬಾರಿಗೆ ನಷ್ಟದ ಹಾದಿಯಿಂದ ಲಾಭದ ಹಾದಿಗೆ ಬಂದಿರುವ ನಮ್ಮ ಮೆಟ್ರೋ, ಕಳೆದ 9 ತಿಂಗಳಿನಲ್ಲಿ ಬಿಎಂಆರ್ಸಿಎಲ್ಗೆ (BMRCL) ಬರೊಬ್ಬರಿ 450 ಕೋಟಿ ರೂ. ಆದಾಯ ಗಳಿಸಿಕೊಟ್ಟಿದೆ. ಮೆಟ್ರೋ ಜಾಲ ವಿಸ್ತರಣೆ, ನಿಲ್ದಾಣ ಹಾಗೂ ರೈಲಿನ ಒಳಗೆ ಜಾಹೀರಾತಿಗೆ ಅವಕಾಶ ನೀಡಿರುವುದು ಆದಾಯ ಏರಿಕೆಗೆ ನೆರವಾಗಿದೆ ಎನ್ನಲಾಗಿದೆ.
ನಮ್ಮ ಮೆಟ್ರೋ ಏಪ್ರಿಲ್ನಿಂದ ಡಿಸೆಂಬರ್ವರೆಗೆ ಜಾಹೀರಾತಿನ ಮೂಲಕ ಬರೊಬ್ಬರಿ 50 ಕೋಟಿ ರೂ. ಆದಾಯ ಗಳಿಸಿದೆ. ಮೆಟ್ರೋ ಜಾಲ ವಿಸ್ತರಣೆಯಿಂದ ಟಿಕೆಟ್ ಮೂಲಕ ಸಿಗುವ ಆದಾಯವೂ ಹೆಚ್ಚಾಗಿದೆ. ಕೇವಲ ಟಿಕೆಟ್ ಮಾರಾಟದಿಂದಲೇ ನಮ್ಮ ಮೆಟ್ರೋಗೆ 9 ತಿಂಗಳಿನಲ್ಲಿ 400 ಕೋಟಿ ಆದಾಯ ದೊರೆತಿದೆ.
ಕಳೆದ ಮಾರ್ಚ್ನಲ್ಲಿ ಐಟಿ ಕಾರಿಡರ್ಗೆ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಕೆ.ಆರ್. ಪುರದಿಂದ ವೈಟ್ ಫಿಲ್ಡ್ ಮಾರ್ಗಕ್ಕೆ ಚಾಲನೆ ನೀಡಲಾಗಿತ್ತು. ಪ್ರಯಾಣಿಕರ ಸಂಖ್ಯೆ ಹೆಚ್ಚಳವಾದರೂ, ಬೈಯಪ್ಪನಹಳ್ಳಿಯಿಂದ ಕೆ.ಆರ್ ಪುರಕ್ಕೆ ಕನೆಕ್ಟಿವಿಟಿ ಇಲ್ಲದೆ ತೊಂದರೆ ಆಗುತ್ತಿತ್ತು. ಆದರೆ, ಅಕ್ಟೋಬರ್ನಲ್ಲಿ ಬೈಯಪ್ಪನಹಳ್ಳಿಯಿಂದ ಕೆ.ಆರ್ ಪುರ ಮೆಟ್ರೋ ಮಾರ್ಗಕ್ಕೆ ಚಾಲನೆ ದೊರೆತಿದೆ. ನಂತರ ಐಟಿ ಕಾರಿಡಾರ್ನಲ್ಲಿ ಪ್ರಯಾಣಿಕರ ಓಡಾಟ ಹೆಚ್ಚಳವಾಗಿದೆ.
ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ ವರೆಗೆ 4 ತಿಂಗಳಿನಲ್ಲಿ ನಮ್ಮ ಮೆಟ್ರೋಗೆ ಬರೋಬ್ಬರಿ 8 ಕೋಟಿ ರೂಪಾಯಿ ನಷ್ಟವಾಗಿತ್ತು. ಆದರೆ, ಅಕ್ಟೋಬರ್ ಬಳಿಕ ಬಿಎಂಆರ್ಸಿಎಲ್ ನಷ್ಟದಿಂದ ಲಾಭಕ್ಕೆ ಮರಳಿದೆ. ಅಕ್ಟೋಬರ್ನಲ್ಲಿ 6.8 ಕೋಟಿ ರೂ., ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ತಲಾ 4 ಕೋಟಿ ರೂ. ಲಾಭ ಆಗಿದೆ.
ಇದನ್ನೂ ಓದಿ: ಬೆಂಗಳೂರಿಗರೇ ಹುಷಾರ್, ನೀವು ಓಡಾಡ್ತಿರುವ ಜಾಗ ಎಷ್ಟು ಸೇಫ್? ಬೆಸ್ಕಾಂ ವ್ಯಾಪ್ತಿಯಲ್ಲಿವೇ 30,243 ಅಪಾಯಕಾರಿ ಸ್ಥಳಗಳು
ಮೆಟ್ರೋ ಫಿಡರ್ ಬಸ್ ಹೆಚ್ಚಳ ಮಾಡಿದ್ದು ಕೂಡ ಪ್ರಯಾಣಿಕರ ಹೆಚ್ಚಳಕ್ಕೆ ಕಾರಣವಾಗಿದೆ. 2023ರ ಜನವರಿಯಲ್ಲಿ ಪ್ರತಿ ನಿತ್ಯ ಸುಮಾರು 5.32 ಲಕ್ಷ ಜನರು ಪ್ರಯಾಣ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆ ಆಗುತ್ತಿದೆ. ಪ್ರಯಾಣಿಕರ ಸಂಖ್ಯೆಯಲ್ಲಿ ಕಳೆದ ಒಂದೇ ವರ್ಷದಲ್ಲಿ ಸುಮಾರು ಶೇಕಡಾ 30 ರಷ್ಟು ಏರಿಕೆಯಾಗಿದೆ. ಈಗ ಪ್ರತಿನಿತ್ಯ ಸರಾಸರಿ 6.88 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ