ಮತದಾರರಿಗೆ ಬೆದರಿಕೆ ಆರೋಪ: ಡಿಕೆ ಶಿವಕುಮಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

|

Updated on: Apr 19, 2024 | 8:02 AM

ಲೋಕಸಭೆ ಚುನಾವಣೆಯಲ್ಲಿ ಡಿಕೆ ಸುರೇಶ್​ಗೆ ಮತ ನೀಡಬೇಕೆಂದು ಮತದಾರರನ್ನು ಡಿಸಿಎಂ ಡಿಕೆ ಶಿವಕುಮಾರ್ ಬ್ಲ್ಯಾಕ್​ಮೇಲ್ ಮಾಡಿದ್ದಾರೆ ಎಂದು ಇತ್ತೀಚೆಗೆ ಆರೋಪಿಸಿದ್ದ ಬಿಜೆಪಿ ಆ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಕ್ರಮಕ್ಕೆ ಆಗ್ರಹಿಸಿದೆ. ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಿಸಲಾಗಿದೆ.

ಮತದಾರರಿಗೆ ಬೆದರಿಕೆ ಆರೋಪ: ಡಿಕೆ ಶಿವಕುಮಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ಡಿಕೆ ಶಿವಕುಮಾರ್
Follow us on

ಬೆಂಗಳೂರು, ಏಪ್ರಿಲ್ 19: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತಮ್ಮ ಸಹೋದರ ಡಿಕೆ ಸುರೇಶ್​ಗೆ (DK Suresh) ಮತ ನೀಡುವಂತೆ ಮತದಾರರಿಗೆ ಬೆದರಿಕೆ ಹಾಕಿರುವ ಆರೋಪದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಬಿಜೆಪಿ (BJP) ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಬೆಂಗಳೂರು ದಕ್ಷಿಣ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಕಾವೇರಿ ನೀರು ಸಂಪರ್ಕ, ಸಿಎ ನಿವೇಶನ ಮತ್ತು ಹಕ್ಕುಪತ್ರ ಹಸ್ತಾಂತರಿಸಬೇಕಾದರೆ ಸುರೇಶ್‌ಗೆ ಮತ ನೀಡಬೇಕು ಎಂದು ಶಿವಕುಮಾರ್‌ ಹೇಳಿದ್ದಾರೆ ಎಂದು ಬಿಜೆಪಿ ದೂರಿನಲ್ಲಿ ಉಲ್ಲೇಖಿಸಿದೆ. ಎರಡು ವಿಧಾನಸಭಾ ಕ್ಷೇತ್ರಗಳು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.

ಶಿವಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ಕಾಂಗ್ರೆಸ್​​ನ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಅವರನ್ನು ತೆಗೆದುಹಾಕಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಇನ್ನೊಂದು ದೂರಿನಲ್ಲಿ, ಚಿಕ್ಕರಾಜೇನಹಳ್ಳಿ (ಕುಣಿಗಲ್) ನಲ್ಲಿರುವ ಪ್ರೇಮ್ ಕುಮಾರ್ / ಪಿ.ಜಿ.ರಾಮಯ್ಯ ಎಂಬುವರಿಗೆ ಸೇರಿದ ಜಮೀನಿಗೆ ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯದ ಮೇರೆಗೆ ಬೆಂಕಿ ಹಚ್ಚಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಳ್ಳದ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಬಿಜೆಪಿ ಒತ್ತಾಯಿಸಿದೆ.

ಕುಣಿಗಲ್ ವಿಧಾನಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆಗಳನ್ನು ಅತ್ಯಂತ ಸೂಕ್ಷ್ಮ ಎಂದು ಪರಿಗಣಿಸಬೇಕು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅರೆಸೇನಾ ಪಡೆಯನ್ನು ನಿಯೋಜಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಮತದಾರರ ಬ್ಲ್ಯಾಕ್​ಮೇಲ್ ಮಾಡಿದ್ದ ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್ ಮತದಾರರನ್ನು ಬ್ಲ್ಯಾಕ್​ಮೇಲ್ ಮಾಡಿದ್ದಾರೆ ಎಂದು ಬಿಜೆಪಿ ಕೆಲವು ದಿನಗಳ ಹಿಂದೆ ಟ್ವೀಟ್ ಮಾಡಿತ್ತು. ಅದರಲ್ಲಿ ಡಿಕೆಶಿ ಮಾತನಾಡುತ್ತಿರುವ ವಿಡಿಯೋವನ್ನೂ ಪೋಸ್ಟ್ ಮಾಡಿತ್ತು.

‘ನಾನು ಇಲ್ಲಿಗೆ ವ್ಯವಹಾರಕ್ಕಾಗಿ ಬಂದಿದ್ದೇನೆ. ಈ ಅಪಾರ್ಟ್ಮೆಂಟ್​​ನಲ್ಲಿ 2510 ಮನೆಗಳಿವೆ. 6424 ಮತಗಳಿವೆ. ನಿಮ್ಮ ಎರಡು ಸಮಸ್ಯೆಗಳೆಂದರೆ ಹಕ್ಕುಪತ್ರ ನಿಮಗೆ ಹಸ್ತಾಂತರವಾಗದಿರುವುದು. ಎರಡನೇಯದ್ದು ಕಾವೇರಿ ನೀರು ಸಂಪರ್ಕ ದೊರೆಯದೇ ಇರುವುದು. ಒಂದು ವೇಳೆ ಈ ಎರಡನ್ನೂ ನಾನು ನಿಮಗೆ ನೀಡಿದರೆ ನೀವು ನನಗೆ ಏನು ಕೊಡುತ್ತೀರಿ? ನಿಮ್ಮ ಬೂತ್​ ಆರ್​ಆರ್​ ನಗರದಲ್ಲಿದೆ. 2-3 ಬೂತ್​ನಲ್ಲಿ ನಮ್ಮ ಪರವಾದ ಮತಗಳಿವೆ. ಪ್ರಶ್ನಾರ್ಥಕವಾಗಿ ಉಳಿದಿರುವುದು ನಿಮ್ಮ ಬೂತ್​ ಮಾತ್ರ. ಈಗ ಹೇಳಿ ಏನು ಮಾಡುತ್ತೀರಿ’ ಎಂದು ಡಿಕೆಶಿ ಕೇಳುತ್ತಿರುವುದು ಬಿಜೆಪಿ ಟ್ವೀಟ್ ಮಾಡಿದ ವಿಡಿಯೋದಲ್ಲಿತ್ತು.

ಇದನ್ನೂ ಓದಿ: ಬೇಡಿಕೆ ಇಡೇರಬೇಕಾದರೆ ನಮಗೆ ಮತ ನೀಡಿ, ಅಪಾರ್ಟ್ಮೆಂಟ್​ ನಿವಾಸಿಗಳಿಗೆ ಡಿಕೆಶಿ ಬ್ಲ್ಯಾಕ್​ಮೇಲ್: ಬಿಜೆಪಿ ಆಕ್ರೋಶ

ಪ್ರಿಯಾಂಕ್ ಖರ್ಗೆ ವಿರುದ್ಧವೂ ದೂರು

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ಬಿಜೆಪಿ ದೂರು ದಾಖಲಿಸಿದೆ. ಕಲಬುರಗಿಯಲ್ಲಿ 39 ಕೋಟಿ ರೂಪಾಯಿ ವೆಚ್ಚದ ಕೃಷಿ ಕೇಂದ್ರವನ್ನು ಸ್ಥಾಪಿಸುವುದಾಗಿ ಚುನಾವಣಾ ಪ್ರಚಾರದ ವೇಳೆ ಪ್ರಿಯಾಂಕ್ ಘೋಷಿಸಿದ್ದಾರೆ ಎಂದು ದೂರಿನಲ್ಲಿ ಬಿಜೆಪಿ ಆರೋಪಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ