
ಬೆಂಗಳೂರು, ಅಕ್ಟೋಬರ್ 12: ನಗರದಲ್ಲಿ ತ್ಯಾಜ್ಯ ನಿರ್ವಹಣೆಯೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದಕ್ಕೆ ಪರಿಹಾರವಾಗಿ ಜಿಬಿಎ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರ ಬೆನ್ನಲ್ಲೇ ಈಗ ಘನತ್ಯಾಜ್ಯ ನಿರ್ವಹಣೆ ಹಾಗೂ ಕಸ ವಿಲೇವಾರಿಗೆ ಸಂಬಂಧಿಸಿದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಬೆಂಗಳೂರು ಉತ್ತರ ಸಿಟಿ ಕಾರ್ಪೊರೇಷನ್ ವತಿಯಿಂದ ವಿಶೇಷ ಹೆಲ್ಪ್‌ಲೈನ್ ಹಾಗೂ ಫೋನ್-ಇನ್ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಪ್ರತಿ ವಾರದ ಮಂಗಳವಾರ ಬೆಳಿಗ್ಗೆ 7.30ರಿಂದ 9.30ರವರೆಗೆ ಈ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರು ತಮ್ಮ ವಾರ್ಡ್ ಅಥವಾ ಪ್ರದೇಶಗಳಲ್ಲಿ ಕಸ ಸಂಗ್ರಹಣೆಯ ಸಮಯ, ಪೌರಕಾರ್ಮಿಕರ ಸೇವೆಗಳು, ತ್ಯಾಜ್ಯ ವಿಲೇವಾರಿ ಹಾಗೂ ಇತರ ಕಸ ಸಂಗ್ರಹಣಾ ವ್ಯವಸ್ಥೆಗಳ ಕುರಿತು ಇರುವ ದೂರುಗಳು ಅಥವಾ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತರಬಹುದು. ಇದಕ್ಕಾಗಿ ನಾಗರಿಕರು 080-22975936 ಅಥವಾ 080-23636671 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು. ಇದರೊಂದಿಗೆ ಸಾರ್ವಜನಿಕರ ಅನುಕೂಲಕ್ಕಾಗಿ 9480685705 ವಾಟ್ಸಾಪ್ (WhatsApp) ಸಂಖ್ಯೆಗೂ ಸಂದೇಶ ಕಳುಹಿಸಿ ತಮ್ಮ ದೂರುಗಳನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಫೋನ್-ಇನ್ ಕಾರ್ಯಕ್ರಮವು ವಲಯ ಜಂಟಿ ಆಯುಕ್ತರ ನೇತೃತ್ವದಲ್ಲಿ ನಡೆಯಲಿದ್ದು, ಘನತ್ಯಾಜ್ಯ ನಿರ್ವಹಣೆಯ ಉಪ ಪ್ರಧಾನ ವ್ಯವಸ್ಥಾಪಕರು ದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಕಸದ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ದೊರೆಯುವಂತೆ ನೋಡಿಕೊಳ್ಳಲು ಇದು ಸಹಕಾರಿಯಾಗಲಿದೆ.
ಜೊತೆಗೆ, ನಗರದಾದ್ಯಂತ ತ್ಯಾಜ್ಯ ನಿರ್ವಹಣಾ ಸೇವೆಯ ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ನಿಗಮವು ತನ್ನ ವ್ಯಾಪ್ತಿಗೆ ಬರುವ ಎಲ್ಲಾ ಏಳು ವಿಭಾಗಗಳಿಗೂ ಬ್ಲಾಕ್-ವೈಸ್ ಸೂಕ್ಷ್ಮ ಯೋಜನೆಗಳನ್ನು ಸಿದ್ಧಪಡಿಸಿದೆ. ಮನೆಮನೆ ಕಸ ಸಂಗ್ರಹಣೆ, ರಸ್ತೆ ಸ್ವಚ್ಛತೆ, ಮತ್ತು ಬೃಹತ್ ಪ್ರಮಾಣದ ತ್ಯಾಜ್ಯ ಉತ್ಪಾದಕರ ನಿರ್ವಹಣೆಯನ್ನು ಈ ಯೋಜನೆ ಒಳಗೊಂಡಿದೆ. ವಸತಿ ಪ್ರದೇಶಗಳು, ವಾಣಿಜ್ಯ ಮಳಿಗೆಗಳು, ಕಸ ಸಂಗ್ರಹಣಾ ಮಾರ್ಗಗಳು, ಆಟೋ-ಟಿಪ್ಪರ್‌ಗಳು, ಮಾರುಕಟ್ಟೆಗಳು, ಉದ್ಯಾನವನಗಳು ಮತ್ತು ಗುರುತಿಸಲ್ಪಟ್ಟ ಕಸದ ಕಪ್ಪುಚುಕ್ಕೆಗಳನ್ನು ಸುಧಾರಿಸಲು ಈ ಯೋಜನೆ ವಿಶೇಷ ಗಮನಹರಿಸಲಿದೆ ಎಂದು ಕಾರ್ಪೊರೇಷನ್ ಮೂಲಗಳು ತಿಳಿಸಿವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ