
ಬೆಂಗಳೂರು, ಜುಲೈ 25: ನಗರದಲ್ಲಿ ಕ್ರಿಮಿನಲ್ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದು, ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುತ್ತಿದ್ದ ಕುಖ್ಯಾತ ರೌಡಿಶೀಟರ್ ವಿಘ್ನೇಶ್ ಅಲಿಯಾಸ್ ವಿಕ್ಕಿ ಎಂಬಾತನನ್ನು ಕೆಂಗೇರಿ ಪೊಲೀಸ್ ಠಾಣೆ ಸಿಬ್ಬಂದಿ ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದಾರೆ.
ಬಂಧಿತ ರೌಡಿಶೀಟರ್ ವಿಘ್ನೇಶ್ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆಯತ್ನ, ಅತ್ಯಾಚಾರ, ದರೋಡೆ, ಭೀಕರ ಹಲ್ಲೆ ಸೇರಿದಂತೆ ಸುಮಾರು 11ಕ್ಕೂ ಹೆಚ್ಚು ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಮುಂಚೆ ಹಲವು ಪ್ರಕರಣಗಳಲ್ಲಿ ಬಂಧಿತನಾಗಿದ್ದ ಈತ, ಜಾಮೀನಿನ ಮೇಲೆ ಹೊರಬಂದ ನಂತರವೂ ತನ್ನ ಪುಂಡಾಟಿಕೆಯನ್ನು ಮುಂದುವರಿಸಿದ್ದ ಎನ್ನಲಾಗಿದೆ.
ಸಾಮಾನ್ಯ ಜನರ ಮೇಲೆ ಹಲ್ಲೆ ನಡೆಸುವುದು, ಜೀವ ಬೆದರಿಕೆ ಹಾಕುವುದು ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ಮೂಲಕ ಕೆಂಗೇರಿ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಭಯದ ವಾತಾವರಣ ನಿರ್ಮಿಸಿದ್ದ. ಈತನ ನಿರಂತರ ಅಪರಾಧ ಕೃತ್ಯಗಳಿಂದಾಗಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಧಕ್ಕೆಯುಂಟಾಗಿತ್ತು.
ಸಮಾಜದ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ಈತನ ಪುಂಡಾಟಿಕೆಗೆ ಸಂಪೂರ್ಣವಾಗಿ ಬ್ರೇಕ್ ಹಾಕಲು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಅವರು ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು. ಕಮಿಷನರ್ ಆದೇಶದನ್ವಯ ಕಾರ್ಯಪ್ರವೃತ್ತರಾದ ಕೆಂಗೇರಿ ಪೊಲೀಸರು ರೌಡಿಯನ್ನು ಬಂಧಿಸಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಅಟ್ಟಿದ್ದಾರೆ.
ಇದನ್ನೂ ಓದಿ ಸರ್ಕಾರಿ ಕೆಲಸದ ಆಮಿಷ ಒಡ್ಡಿ ಬೆಂಗಳೂರಿನ ವ್ಯಕ್ತಿಗೆ 26 ಲಕ್ಷ ರೂ. ವಂಚನೆ: ನಾಲ್ವರ ವಿರುದ್ಧ ಎಫ್‌ಐಆರ್!
ನಗರದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವ, ರೌಡಿಸಂ ಪ್ರದರ್ಶಿಸುವ ಮತ್ತು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ವ್ಯಕ್ತಿಗಳ ವಿರುದ್ಧ ಇಂತಹ ಕಠಿಣ ಕಾನೂನು ಕ್ರಮಗಳು ಮುಂದುವರೆಯಲಿವೆ ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ