ಬೆಂಗಳೂರು, ಜನವರಿ 19: ಮೂರು ದಿನಗಳ ಲೋಡ್ ಟೆಸ್ಟಿಂಗ್ ನಂತರ ಡಾ. ಶಿವಕುಮಾರ ಸ್ವಾಮೀಜಿ (ಪೀಣ್ಯ) ಫ್ಲೈಓವರ್ (Dr. Shivakumara Swamiji Flyover) ರಿ ಓಪನ್ ಆಗಿದೆ. ಇಂದು (ಜ.19) ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಫ್ಲೈ ಓವರ್ ಮೇಲೆ ವಾಹನಗಳು ಸಂಚರಿಸಲು ಆರಂಭಿಸಿದವು. ಇನ್ನು ಈ ಮೇಲ್ಸೇತುವೆ (Flyover) ಮೇಲೆ ಲಘು ಗೂಡ್ಸ್ ವಾಹನಗಳ ಸಂಚಾರಕ್ಕೂ ಅವಕಾಶ ನೀಡಲಾಗಿದೆ. ಈ ಮೂಲಕ ಲಘು ಗಾತ್ರದ ವಾಹನಗಳ ಚಾಲಕರು ಮತ್ತು ಮಾಲಿಕರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಲೋಡ್ ಟೆಸ್ಟಿಂಗ್ನಲ್ಲಿ ಪಾಸಿಟಿವ್ ರಿಪೋರ್ಟ್ ಬಂದಿರುವ ಹಿನ್ನೆಲೆಯಲ್ಲಿ ಮುಂದಿನ 20-30 ದಿನಗಳ ಅಂತರದಲ್ಲಿ ಮೇಲ್ಸೇತುವೆಯಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೂ ಅವಕಾಶ ನೀಡುವ ಸಾಧ್ಯತೆ ಇದೆ.
ಪೀಣ್ಯ ಎಲಿವೇಟೆಡ್ ಹೈವೆಯಲ್ಲಿ ಅಳವಡಿಸಲಾಗಿದ್ದ ವಯಾಡಕ್ಟ್ನಲ್ಲಿ ದೋಷ ಕಂಡು ಬಂದಿದ್ದರಿಂದ ಪೀಣ್ಯ ಮೇಲ್ಸೇತುವೆಯಲ್ಲಿ ಲಘು ಗಾತ್ರದ ವಾಹನ ಹೊರತುಪಡಿಸಿ, ಭಾರಿ ಗಾತ್ರದ ವಾಹನಗಳನ್ನ ನಿಷೇಧಿಸಲಾಗಿತ್ತು. 2021 ರಿಂದ ಇಲ್ಲಿ ದುರಸ್ತಿ ಕಾರ್ಯ ನಡೆಯುತಿತ್ತು. ಭಾರತೀಯ ವಿಜ್ಞಾನ ಸಂಸ್ಥೆ (ಐಎಎಸ್ಸಿ) ನೀಡಿದ ಸಲಹೆ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಾಮಗಾರಿ ನಡೆಸುತ್ತಿತ್ತು. ಸದ್ಯ ಕಾಮಗಾರಿ ಪೂರ್ಣಗೊಂಡಿದೆ.
ಇದನ್ನೂ ಓದಿ: ಪೀಣ್ಯ ಫ್ಲೈಓವರ್ ಬಂದ್: ಪೀಣ್ಯ ರಸ್ತೆಯಲ್ಲಿ ಟ್ರಾಫಿಕ್ನಲ್ಲಿ ಸಿಲುಕಿರುವ ಆ್ಯಂಬುಲೆನ್ಸ್
ಈ ಹಿನ್ನೆಲೆಯಲ್ಲಿ ಲೋಡ್ ಟೆಸ್ಟಿಂಗ್ ಮಾಡಬೇಕಾಗಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಜನವರಿ 16 ರ ರಾತ್ರಿ 11 ಗಂಟೆಯಿಂದ ಮೂರು ದಿನ ಸ್ಟ್ರಕ್ಚರಲ್ ಇಂಟಿಗ್ರಿಟಿ ಟೆಸ್ಟ್ ನಡೆಸಿದರು. ಇದೀಗ ಲೋಡ್ ಟೆಸ್ಟಿಂಗ್ ಮುಗಿದಿದ್ದು, ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ