ಸ್ವಾತಂತ್ರ್ಯ ದಿನಾಚರಣೆಗೆ ಉಗ್ರರ ಕರಿನೆರಳು: ಬೆಂಗಳೂರಿನಲ್ಲಿ ಪೊಲೀಸರು ಹೈಅಲರ್ಟ್
78ನೇ ಸ್ವಾತಂತ್ರ್ಯ ದಿನಾಚರಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದ್ದು, ಆಗಸ್ಟ್ 15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಮಾಣಿಕ್ ಶಾ ಮೈದಾನದಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಇದರ ಮಧ್ಯ ಬೆಂಗಳೂರಿಗೆ ಉಗ್ರರ ಕರಿನೆರಳು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸರು ಅಲರ್ಟ್ ಆಗಿದ್ದಾರೆ.
ಬೆಂಗಳೂರು, (ಆಗಸ್ಟ್ 08): ಸ್ವಾತಂತ್ರ್ಯ ದಿನಾಚರಣೆ ಅಂದ್ರೆ ತಕ್ಷಣ ನೆನಪಾಗೋದು ದೆಹಲಿಯ ಕೆಂಪುಕೋಟೆ. ಈ ಬಾರಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಾಗಿರುವ ಹಿನ್ನಲೆ ದೆಹಲಿಯ ಕೆಂಪುಕೋಟೆ ವಿಶೇಷವಾಗಿ ಸಿದ್ದವಾಗಿದೆ. ಇತ್ತ ರಾಜಧಾನಿ ಬೆಂಗಳೂರಿನಲ್ಲೂ ಸಹ ಸಿದ್ಧತೆಗಳು ನಡೆದಿವೆ. ಆಗಸ್ಟ್ 15ರಂದು ಬೆಂಗಳೂರಿನ ಮಾಣಿಕ್ ಶಾ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಧ್ವಜಾರೋಹಣ ಮಾಡಲಿದ್ದಾರೆ. ಆದ್ರೆ, ಬೆಂಗಳೂರು ನಗರವನ್ನು ಉಗ್ರರು ಟಾರ್ಗೆಟ್ ಮಾಡಿದ್ದಾರೆ ಎನ್ನುವ ಆಘಾತಕಾರಿ ಸುದ್ದಿಯೊಂದು ಬಂದಿದೆ. ಹೀಗಾಗಿ ಬೆಂಗಳೂರು ಪೊಲೀಸರು ಅಲರ್ಟ್ ಆಗಿದ್ದು, ಹೋಟೆಲ್ಗಳಲ್ಲಿ ತಂಗುವ ವಿದೇಶಿಗರು, ಸಂಶಯಾಸ್ಪದ ವ್ಯಕ್ತಿಗಳು ಹಾಗೂ ಅಪರಿಚಿತ ವ್ಯಕ್ತಿಗಳು ಕಂಡಲ್ಲಿ ಸ್ಥಳೀಯ ಠಾಣೆಗೆ ಮಾಹಿತಿ ನೀಡುವಂತೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಿಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಪತ್ರ ಬರೆದಿದ್ದಾರೆ.
ಬೆಂಗಳೂರು ನಗರವನ್ನು ಉಗ್ರರು ಟಾರ್ಗೆಟ್ ಮಾಡಿಟ್ಟುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ವಸತಿ ಸೌಕರ್ಯವುಳ್ಳ ಹೋಟೆಲ್ಗಳಲ್ಲಿ ಉಳಿದುಕೊಳ್ಳುವ ಪ್ರವಾಸಿಗರ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಅಲ್ಲದೇ ಯಾರೇ ಹೋಟೆಲ್ ವಾಸ್ತವ್ಯಕ್ಕೆ ಬಂದರೂ ಐಡಿ ಮತ್ತು ಫೋಟೋ ಕಡ್ಡಾಯವಾಗಿ ಸ್ವೀಕರಿಸಬೇಕು. ಹಾಗೇ ರಿಜಿಸ್ಟರ್ನಲ್ಲಿ ಉಲ್ಲೇಖ ಮಾಡುವುದು ಕಡ್ಡಾಯವೆಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜಧಾನಿಯಲ್ಲಿ ಯುವ ಮಹಿಳೆಯರು ಹೆಚ್ಚು ನಾಪತ್ತೆ! ಬೆಂಗಳೂರು ಪೊಲೀಸರು ಹೇಳೋದೇನು?
ಹೋಟೆಲ್ಗಳಲ್ಲಿ ತಂಗುವ ವಿದೇಶಿಗರು, ಸಂಶಯಾಸ್ಪದ ವ್ಯಕ್ತಿಗಳು ಹಾಗೂ ಅಪರಿಚಿತ ವ್ಯಕ್ತಿಗಳು ಕಂಡಲ್ಲಿ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು. ಅಲ್ಲದೇ ಭದ್ರತೆ ದೃಷ್ಟಿಯಿಂದ ಪೊಲೀಸರಿಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸುವಂತೆ ಹೋಟೆಲ್ ಸಂಘದ ಅಧ್ಯಕ್ಷರು, ಸದಸ್ಯರು, ಹೋಟೆಲ್ ಮಾಲೀಕರು ಹಾಗೂ ಹೋಟೆಲ್ ಮ್ಯಾನೇಜರ್ ಸೇರಿ ಇತರೆ ನೌಕರರಿಗೆ ಪತ್ರದ ಮೂಲಕ ಸೂಚಿಸಿದ್ದಾರೆ.
ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣದಿಂದಾಗಿ ಪೊಲೀಸರು ಎಚ್ಚೆತ್ತುಕೊಂಡಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ