ರೌಡಿಶೀಟರ್ಸ್​ ಮನೆ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಬೆಂಗಳೂರು ಪೊಲೀಸರು; 18 ಜನ ವಶಕ್ಕೆ

ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿರುವ ಪೊಲೀಸರು ಆ ಪೈಕಿ 18 ಜನರನ್ನು ವಶಕ್ಕೆ ಪಡೆದಿದ್ದಾರೆ. ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಷಿ ನೇತೃತ್ವದಲ್ಲಿ ಬೆಳ್ಳಂಬೆಳಗ್ಗೆ ದಾಳಿ ಮಾಡಲಾಗಿದ್ದು, ಪುಂಡಾಟ ನಡೆಸದಂತೆ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಪುಡಾರಿಗಳಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ.

ರೌಡಿಶೀಟರ್ಸ್​ ಮನೆ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಬೆಂಗಳೂರು ಪೊಲೀಸರು; 18 ಜನ ವಶಕ್ಕೆ
ಬೆಂಗಳೂರು ಪೊಲೀಸರು
Follow us
TV9 Web
| Updated By: Skanda

Updated on: Jul 31, 2021 | 7:37 AM

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅನ್​​ಲಾಕ್ ಬಳಿಕ ಮಿತಿಮೀರಿರುವ ಸಮಾಜಘಾತುಕ ಶಕ್ತಿಗಳನ್ನು (Anti Social Elements) ಹೆಡೆಮುರಿ ಕಟ್ಟಲು ಪಣತೊಟ್ಟಿರುವ ಪೊಲೀಸರು (Bengaluru Police) ಕಳೆದ ಕೆಲ ದಿನಗಳಿಂದ ಕಟ್ಟುನಿಟ್ಟಾಗಿ ಕಾರ್ಯಾಚರಣೆಗೆ ಇಳಿದು ಬಿಸಿ ಮುಟ್ಟಿಸುತ್ತಿದ್ದಾರೆ. ಇಂದು ಮುಂಜಾನೆಯೂ ಪುಡಾರಿಗಳ ಮನೆ ಮೇಲೆ ದಾಳಿ ಮಾಡಿರುವ ಆಗ್ನೇಯ ವಿಭಾಗ ಪೊಲೀಸರು ಒಟ್ಟು 18 ಜನರನ್ನು ವಶಕ್ಕೆ ಪಡೆದಿದ್ದಾರೆ. ಕುಖ್ಯಾತ ರೌಡಿಗಳಾದ (Rowdies) ಸುಜೀತ್, ತೇಜಸ್, ಕಿಶೋರ್, ಸುರೇಶ್, ಅತಾವುಲ್ಲಾ, ಆನಂದ್, ಗೌತಮ್, ಮಣಿಕಾಂತ್, ಆನಂದ್ ಅಲಿಯಾಸ್​ ಬ್ರಿಡ್ಜ್, ಶಿವ ಅಲಿಯಾಸ್ ಹಂದಿ ಶಿವ, ಅಂಬರೀಶ್, ಗೆಜ್ಜೆ ವೆಂಕಟೇಶ್ ಸೇರಿದಂತೆ 63 ರೌಡಿಶೀಟರ್ ಮನೆ ಮೇಲೆ ದಾಳಿ ಮಾಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿರುವ ಪೊಲೀಸರು ಆ ಪೈಕಿ 18 ಜನರನ್ನು ವಶಕ್ಕೆ ಪಡೆದಿದ್ದಾರೆ. ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಷಿ ನೇತೃತ್ವದಲ್ಲಿ ಬೆಳ್ಳಂಬೆಳಗ್ಗೆ ದಾಳಿ ಮಾಡಲಾಗಿದ್ದು, ಪುಂಡಾಟ ನಡೆಸದಂತೆ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಪುಡಾರಿಗಳಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಪುಡಾರಿಗಳ ಹಾವಳಿ ಹೆಚ್ಚಾಗುತ್ತಿರುವುದರಿಂದ ಎಚ್ಚೆತ್ತ ಪೊಲೀಸರು ಕಠಿಣ ಕ್ರಮಕ್ಕೆ ಸಿದ್ಧರಾಗಿದ್ದಾರೆ. ರೌಡಿಗಳನ್ನು ನಿಯಂತ್ರಿಸುವ ಸಲುವಾಗಿ ಸ್ಥಳೀಯವಾಗಿ ಖಾಕಿ ಪಡೆಗೆ ಚುರುಕು ಮುಟ್ಟಿಸಲು ಮುಂದಾದ ಪೊಲೀಸ್ ಕಮಿಷನರ್ (Bengaluru Police Commissioner) , ತಳಮಟ್ಟದಲ್ಲಿ ಪೊಲೀಸಿಂಗ್ ವ್ಯವಸ್ಥೆಯನ್ನು ಬಿಗಿಗೊಳಿಸಲು ಮುಂದಾಗಿದ್ದಾರೆ. ಸರಗಳ್ಳತನ, ಸುಲಿಗೆ, ದರೋಡೆ, ಪುಂಡರ ಹಾವಳಿ ತಪ್ಪಿಸಲು ಹೊಸ ಕ್ರಮ ರೂಪಿಸುತ್ತಿರುವ ಪೊಲೀಸ್ ಕಮಿಷನರ್ ಹೊಯ್ಸಳ ಮತ್ತು ಚೀತಾ ವಾಹನಗಳಿಗೆ ಚುರುಕು ಮುಟ್ಟಿಸಿ ಪ್ರತಿ ಏರಿಯಾದಲ್ಲೂ ಕಣ್ಗಾವಲಿಡಲು ಸೂಚಿಸಿದ್ದಾರೆ. ಹೊಯ್ಸಳ ಮತ್ತು ಚೀತಾ ರೌಂಡ್ಸ್ ಮಾಡುವ ಏರಿಯಾದಲ್ಲಿ ಏನೇ ಆದರೂ ಅವರೇ ಹೊಣೆಗಾರರು ಎಂದು ಎಚ್ಚರಿಕೆ ನೀಡಿದ್ದು, ಪೊಲೀಸರು (Bengaluru Police) ಶಿಸ್ತುಬದ್ಧ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ.

ಅನ್​ಲಾಕ್ ಬಳಿಕ ಬೆಂಗಳೂರಿನಲ್ಲಿ ಸಮಾಜ ಘಾತುಕ ಶಕ್ತಿಗಳ ಅಟ್ಟಹಾಸ ಹೆಚ್ಚಾಗಿರುವುದರಿಂದ ಪೊಲೀಸರು ಕಠಿಣ ಕ್ರಮದ ಮೊರೆ ಹೋಗಿದ್ದು, ಹೊಯ್ಸಳ ಮತ್ತು ಚೀತಾ ವಾಹನಗಳನ್ನು ಕಮಾಂಡ್ ಸೆಂಟರ್ ಮೂಲಕ ಅಪರೇಟ್ ಮಾಡಲು ನಿರ್ಧರಿಸಿದ್ದಾರೆ. ಠಾಣೆ ಸುಪರ್ದಿಯಿಂದ ಕಮಾಂಡ್‌ ಸೆಂಟರ್ ವ್ಯಾಪ್ತಿಗೆ ಹೊಯ್ಸಳ ಮತ್ತು ಚೀತಾ ವಾಹನಗಳನನ್ನು ಪಡೆಯಲು ಮುಂದಾದ ಕಮಿಷನರ್ ಕಮಲ್ ಪಂತ್, ಪುಂಡ ಪೋಕರಿಗಳ ಪುಂಡಾಟಕ್ಕೆ ಸಂಪೂರ್ಣ ತಡೆ ಒಡ್ಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.

BENGALURU POLICE RAID

ರೌಡಿ ಶೀಟರ್​ಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಕಮಾಂಡ್‌ ಸೆಂಟರ್ ಮೂಲಕ ಹೊಯ್ಸಳ ವಾಹನದ ಚಲನವಲನ ನಿಯಂತ್ರಣದಲ್ಲಿರಲಿದ್ದು, ಪ್ರತಿ ಐದು ಹತ್ತು ನಿಮಿಷಕ್ಕೊಮ್ಮೆ ಏರಿಯಾ ಬದಲು ಮಾಡಬೇಕು, ನಿಂತಲ್ಲಿ ನಿಲ್ಲದಂತೆ ಪ್ರತಿ ಏರಿಯಾದಲ್ಲಿ ಗಸ್ತು ಹೊಡೆಯಬೇಕು, ಪ್ರತಿ ಏರಿಯಾದ ಎಲ್ಲಾ ಆಗುಹೋಗುಗಳ ಬಗ್ಗೆ ನಿಗಾ ಇಡಬೇಕು ಎಂದು ಸೂಚಿಸಿದ್ದು, ಚೀತಾ ಸಿಬ್ಬಂದಿಗೂ ಇದೇ ರೀತಿ ಜವಾಬ್ದಾರಿ ವಹಿಸಲಾಗಿದೆ.

ಹೊಯ್ಸಳ, ಚೀತಾ ಸಿಬ್ಬಂದಿ ಸುಖಾಸುಮ್ಮನೆ ಗಾಡಿ ಒಂದೆಡೆ ನಿಲ್ಲಿಸಿ ಹರಟೆ ಹೊಡೆಯುವಂತಿಲ್ಲ. ಕಮಾಂಡ್‌ ಸೆಂಟರ್​ನಿಂದ ಪ್ರತಿ ವಾಹನದ ಮೇಲೆ ನಿಗಾ ಇರಲಿದ್ದು, ಅಪರಾಧ ಕೃತ್ಯ ನಡೆದ ಸ್ಥಳಕ್ಕೆ ಐದಾರು ನಿಮಿಷದಲ್ಲಿ ತಲುಪುವಂತೆ ತಯಾರಿ ನಡೆಸಿಕೊಳ್ಳಬೇಕು. ಹೊಯ್ಸಳ ಮತ್ತು ಚೀತಾ ಎಲ್ಲಿದೆ ಎಂದು ಪ್ರತಿ ಕ್ಷಣ ನಿಗಾ ವಹಿಸಲಾಗುವುದು ಎಂದು ತಿಳಿಸಿದ್ದಾರೆ. ಬೀಟ್ ಪೊಲೀಸ್ ವ್ಯವಸ್ಥೆ ಗಟ್ಟಿಯಾದಲ್ಲಿ ಅಪರಾಧ ಕೃತ್ಯಗಳನ್ನು ತಡೆಯಬಹುದು ಎಂದು ಈ ರೀತಿ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ, ಸೈಲೆಂಟ್ ಸುನಿಲ ಸೇರಿದಂತೆ 45 ರೌಡಿಶೀಟರ್ಸ್​ ಮನೆಗಳ ಮೇಲೆ ಸಿಸಿಬಿ ಪೊಲೀಸರ ರೇಡ್ 

ರೌಡಿ ಹಾವಳಿ ಹತ್ತಿಕ್ಕಲು ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ಸಂಚರಿಸಲಿವೆ ಚೀತಾ, ಹೊಯ್ಸಳ; 999 ಹೆಡ್​ಕಾನ್​ಸ್ಟೆಬಲ್ಸ್​​ ವರ್ಗಾವಣೆ

(Bengaluru Police Raid on Rowdy sheeter House 18 rowdies detained)