
ಬೆಂಗಳೂರು, ಅ.13: ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಹಾಗೂ ಯಾರಿಗೂ ಅನುಮಾನ ಬರದಂತೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಫೋಟೋವನ್ನು ಕಾರಿನ ಮೇಲೆ ಅಂಟಿಸಿಕೊಂಡು ಕ್ವಿಂಟಲ್ ಗಟ್ಟಲೆ ಗಾಂಜಾ ಸಾಗಿಸುತ್ತಿದ್ದ ಕಳ್ಳರ ಜಾಲವನ್ನು ಬೆಂಗಳೂರು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಒಡಿಶಾದಿಂದ ಕೇರಳಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದ ಬೃಹತ್ ಪ್ರಮಾಣದ ಗಾಂಜಾವನ್ನು ಕುಂಬಳಗೋಡು ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಡಿಶಾದಿಂದ ಟೊಯೋಟಾ ಇನೋವಾ ಕ್ರಿಸ್ಟಾ ಕಾರಿನಲ್ಲಿ ಕೇರಳಕ್ಕೆ ಗಾಂಜಾ ಸಾಗಿಸಲಾಗುತ್ತಿತ್ತು.
ಮಾರ್ಗಮಧ್ಯೆ ಯಾರೂ ಅನುಮಾನ ಪಡಬಾರದು ಮತ್ತು ತಪಾಸಣೆ ವೇಳೆ ಪೊಲೀಸರು ಸುಲಭವಾಗಿ ಬಿಟ್ಟುಬಿಡಲಿ ಎಂಬ ದುರುದ್ದೇಶದಿಂದ ಕಾರಿನ ಮೇಲೆ ಭಗತ್ ಸಿಂಗ್ ಅವರ ಫೋಟೋವನ್ನು ಅಂಟಿಸಿಕೊಂಡು ಕಿಲಾಡಿಗಳು ವೇಷಮರೆಸಿದ್ದರು. ಕಾರಿನ ಸೀಟ್ಗಳ ಒಳಗೆ ಮತ್ತು ಇತರೆ ಗುಪ್ತ ಜಾಗಗಳಲ್ಲಿ ಗಾಂಜಾದ ಮೂಟೆಗಳನ್ನು ಅಡಗಿಸಿ ನಗರದ ಮೂಲಕ ಸಾಗಿಸುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಕುಂಬಳಗೋಡು ಪೊಲೀಸರು ಕಾರನ್ನು ಅಡ್ಡಗಟ್ಟಿ ಪರಿಶೀಲನೆ ನಡೆಸಿದ್ದಾರೆ. ಆರಂಭದಲ್ಲಿ ಕಾರಿನಲ್ಲಿ ಮೂರ್ನಾಲ್ಕು ಕೆಜಿ ಗಾಂಜಾ ಮಾತ್ರ ಇರಬಹುದು ಎಂದು ಪೊಲೀಸರು ಭಾವಿಸಿದ್ದರು. ಆದರೆ ಕಾರಿನ ಒಳಗೆ ಬಟ್ಟೆ ಹಾಗೂ ಸೀಟ್ಗಳ ಕೆಳಗೆ ಪರಿಶೀಲಿಸಿದಾಗ ಮೂಟೆ ಮೂಟೆಯಾಗಿ ಗಾಂಜಾ ತುಂಬಿರುವುದು ಕಂಡುಬಂದು ಪೊಲೀಸರೇ ದಂಗಾಗಿದ್ದಾರೆ. ಒಟ್ಟು 317 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು, ಇದರ ಅಂದಾಜು ಮೌಲ್ಯ 1.5 ರಿಂದ 1.70 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಅಂತರ್ಜಾತಿ ಮದುವೆಗೆ ಯುವಕನ ಪೋಷಕರ ವಿರೋಧ: ಪ್ರಿಯಕರ ಪರಾರಿ, ಲಿವ್-ಇನ್ ಸಂಬಂಧದಲ್ಲಿದ್ದ ಯುವತಿಯಿಂದ ದೂರು ದಾಖಲು!
ಈ ಕೃತ್ಯಕ್ಕೆ ಸಂಬಂಧಿಸಿದಂತೆ ವಿಷ್ಣುಮಣಿ (30) ಹಾಗೂ ಚಾನ್ ಪಾಷಾ (31) ಎಂಬ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಕುಂಬಳಗೋಡು ಠಾಣೆಯ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ಮುಂದುವರೆಸಿದ್ದಾರೆ ಹಾಗೂ ಈ ಜಾಲದ ಹಿಂದೆ ಇನ್ಯಾರ ಕೈವಾಡವಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Tue, 13 October 26