
ಬೆಂಗಳೂರು, ಸಪ್ಟೆಂಬರ್ 22: ಬೆಂಗಳೂರಿನ ಜನರಿಗೆ ವರುಣ ದೇವ ಸೋಮವಾರವೂ ತಂಪೆರೆದಿದ್ದಾನೆ. ನಗರದ ಹಲವು ಕಡೆಗಳಲ್ಲಿ ಸುರಿದ ಮಳೆಗೆ ವಾಹನ ಸವಾರರು ಹಾಗೂ ಪಾದಚಾರಿಗಳು ಹೈರಾಣಾದರು. ಸಂಜೆ ಸುರಿದ ಮಳೆಯಿಂದ ಹಲವೆಡೆ ಸಂಚಾರಕ್ಕೆ ಅಡ್ಡಿಯುಂಟಾಯಿತು. ನಗರದಲ್ಲಿ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆಗೆ ಮಳೆ ಸುರಿಯಿತು. ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸಿಟಿ ಮಂದಿ ಮಳೆಯಿಂದ ಪರದಾಡಿದರು.
ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಸಂಜೆ ಸುರಿಯುತ್ತಿರುವ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಸೋಮವಾರ ರಾತ್ರಿ ಮಳೆ ಅಬ್ಬರಿಸಿದ್ದು, ಮಂಜುನಾಥನಗರದ ಮೋದಿ ಆಸ್ಪತ್ರೆ ಬಳಿ ಬೃಹತ್ ಮರವೊಂದು ಉರುಳಿ ಬಿದ್ದಿದೆ. ಗಣೇಶೋತ್ಸವದ ಮಾರಾಟಕ್ಕೆ ಇಟ್ಟಿದ್ದ ಅಂಗಡಿಗಳಿಗೆ ಮರ ಬಿದ್ದ ಪರಿಣಾಮ ಹಾನಿಯಾಗಿದೆ.
ಪಿಂಗಾಣಿ, ಸ್ಟೀಲ್ ಹಾಗೂ ಬಳೆ ಅಂಗಡಿಗಳು ಸಂಪೂರ್ಣ ನಾಶವಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮರ ಬಿದ್ದಿದ್ದರಿಂದ ಕೆಲಕಾಲ ರಸ್ತೆ ಸಂಚಾರಕ್ಕೂ ಅಡ್ಡಿಯುಂಟಾಗಿತ್ತು.
ಇನ್ನು ಕಲಬುರಗಿ ಜಿಲ್ಲೆಯ ಕಮಲಾಪುರದ ನಾಗೂರಿನಲ್ಲಿ ಸಿಡಿಲು ಬಡಿದು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಮರದಡಿ ಕುಳಿತು ಊಟ ಮಾಡುತ್ತಿದ್ದ ವೇಳೆ ಸಿಡಿಲು ಬಡಿದ ಪರಿಣಾಮ ಲಕ್ಷ್ಮೀ ಗುತ್ತೇದಾರ್ ಮತ್ತು ಸೈಜಾದ್ ಮೃತಪಟ್ಟಿದ್ದಾರೆ.
ದಾಬಸ್‌ಪೇಟೆಯ ಶಿವಗಂಗೆ ಸರ್ಕಲ್‌ನಲ್ಲಿ ಒಂದು ಗಂಟೆ ನಿರಂತರವಾಗಿ ಸುರಿದ ಮಳೆಯಿಂದ ರಸ್ತೆ ಜಲಾವೃತಗೊಂಡಿದೆ. ರಸ್ತೆ ಕೆಸರು ಗದ್ದೆಯಂತಾಗಿದ್ದು, ಗುಂಡಿ ಹಾಗೂ ಹಂಪ್‌ಗಳು ಕಾಣದೆ ವಾಹನ ಸವಾರರು ಪರದಾಡಿದರು. ಪಾದಚಾರಿಗಳು ಕೂಡ ನಿಂತ ನೀರಿನಲ್ಲೇ ಸಂಚರಿಸುವಂತಾಯಿತು.
ಕೆ.ಆರ್. ಮಾರ್ಕೆಟ್‌ನ ಬಿಜಿಎಸ್ ಫ್ಲೈಓವರ್ ಮೇಲೂ ಮಳೆ ನೀರು ನಿಂತಿತ್ತು. ನೀರು ಸರಾಗವಾಗಿ ಹರಿದುಹೋಗಲು ಟ್ರಾಫಿಕ್ ಪೊಲೀಸರು ರಸ್ತೆ ಸ್ವಚ್ಛಗೊಳಿಸಿ ಅನುವು ಮಾಡಿಕೊಟ್ಟರು. ವಿಧಾನಸೌಧ, ಯಶವಂತಪುರ, ವಿಜಯನಗರ, ಶಿವಾನಂದ ಸರ್ಕಲ್, ಜಯನಗರ, ಶಾಂತಿನಗರ, ಕಾರ್ಪೊರೇಷನ್ ಹಾಗೂ ಲಾಲ್‌ಬಾಗ್ ಸುತ್ತಮುತ್ತಲೂ ಮಳೆಯಾಗಿದೆ. ಮಾಗಡಿ ರಸ್ತೆಯಲ್ಲಿ ನಿರಂತರ ಮಳೆಯಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ನಗರದ ಹಲವೆಡೆ ಟ್ರಾಫಿಕ್ ಜಾಮ್‌ನಿಂದ ಜನರು ಹೈರಾಣಾದರು.
ಇದನ್ನೂ ಓದಿ: ಬೀಸಿಲಿನ ಬೇಗೆಯ ನಡುವೆ ರಾಜ್ಯದ ಹಲವೆಡೆ ತಂಪೆರೆದ ವರುಣ: ಬೆಂಗಳೂರು, ಯಾದಗಿರಿಯಲ್ಲಿ ಭರ್ಜರಿ ಮಳೆ
ಭಾರತೀಯ ಹವಾಮಾನ ಇಲಾಖೆ ಸೆಪ್ಟೆಂಬರ್ 24ರವರೆಗೆ ರಾಜ್ಯಾದ್ಯಂತ ಮಳೆ ಮುನ್ಸೂಚನೆ ನೀಡಿದೆ. ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ತಜ್ಞ ಸಿಎಸ್ ಪಾಟೀಲ್ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ