
ಬೆಂಗಳೂರು, ಜೂನ್ 06: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ (Chinnaswamy stampede) ಪ್ರಕರಣ ಸಂಬಂಧ ರಾಜ್ಯ ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮತ್ತು ಗೃಹ ಸಚಿವ ಡಾ. ಜಿ ಪರಮೇಶ್ವರ್ ವಿರುದ್ಧ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಮಾಯಕರ ಸಾವಿಗೆ ಕಾರಣವಾಗಿದ್ದಾರೆ. ಅಲ್ಲದೆ, ಸಾರ್ವಜನಿಕ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಬರೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿಎಂ, ಡಿಸಿಎಂ, ಗೃಹ ಸಚಿವರ ವಿರುದ್ಧ ಕ್ರಮ ಜರುಗಿಸುವಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ದೂರು ನೀಡಿದ್ದಾರೆ. ಈ ವೇಳೆ ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥ್ ನಾರಾಯಣ ಉಪಸ್ಥಿತರಿದ್ದರು.
11 ಜನರ ಸಾವಿಗೆ ಸಿಎಂ ಮತ್ತು ಡಿಸಿಎಂ ನೇರ ಕಾರಣ. ಒತ್ತಡ ಹಾಕಿ ಕಾರ್ಯಕ್ರಮ ನಡೆಯುವ ರೀತಿ ಮಾಡಿದ್ದಾರೆ. ಸಂವಿಧಾನದ ಬಗ್ಗೆ ಗೌರವ ಇದ್ದರೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ರಾಜೀನಾಮೆ ಕೊಡಲಿ. ಸಿಎಂ, ಡಿಸಿಎಂ ಇಬ್ಬರ ವಿರುದ್ಧವೂ ಎಫ್ಐಆರ್ ದಾಖಲಿಸಬೇಕು. ಗೃಹಸಚಿವ ಪರಮೇಶ್ವರ್ ಕೂಡ ಇದರಲ್ಲಿ ಜವಾಬ್ದಾರರು ಎಂದು ಆರೋಪ ಮಾಡಿದರು.
ಯಾವ ಸರ್ಕಾರವಾದರೂ ಒಂದೇ ಸಲ ಮೂರು ಮೂರು ತನಿಖೆ ಮಾಡುತ್ತಾ? ಸರ್ಕಾರಕ್ಕೆ ನಾಚಿಕೆಯಾಗಬೇಕು ಅಕಸ್ಮಾತ್ ಬಿಜೆಪಿ ಸರ್ಕಾರ ಇರುತ್ತಿದ್ದರೆ ಸಿದ್ದರಾಮಯ್ಯ ಏನು ರಾದ್ಧಾಂತ ಮಾಡಿರೋರು? ದೂರು ಕೊಟ್ಟಿದ್ದೇವೆ, ಎಷ್ಟರಮಟ್ಟಿಗೆ ಎಫ್ಐಆರ್ ಮಾಡುತ್ತಾರೋ ನೋಡೋಣ ಎಂದರು.
ನಿರಂತರ 48 ಗಂಟೆ ಕರ್ತವ್ಯ ಮಾಡಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. 11 ಜನರು ಬಲಿಯಾದ ಘಟನೆಯ ಹಿಂದೆ ಸಿಎಂ ಮತ್ತು ಡಿಸಿಎಂ ಅವರಿಬ್ಬರಿಗೆ ಮಾತ್ರ ಮೋಟಿವ್ ಇತ್ತು. ಇಲ್ಲಿ ಅಮಾಯಕರ ನರಹತ್ಯೆ ನಡೆದಿದೆ. ಬಂದೋಬಸ್ತ್ ಮಾಡಲು ಸಾಧ್ಯವಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟವಾಗಿ ಹೇಳಿತ್ತು. ಇವರು ಅಧಿಕಾರದ ದುರ್ಬಳಕೆ ಮಾಡಿಕೊಂಡಿದ್ದಾರೆ. ಸಾರ್ವಜನಿಕರ ತೆರಿಗೆ ಹಣವನ್ನು ವಿಜಯೋತ್ಸವಕ್ಕೆ ಯಾಕೆ ದುರ್ಬಳಕೆ ಮಾಡಿದ್ದಾರೆ? ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಪ್ರಶ್ನಿಸಿದರು.
ಇದನ್ನೂ ಓದಿ: ವಿರಾಟ್ ಕೊಹ್ಲಿಯನ್ನು ಬಂಧಿಸಲು ಆಗ್ರಹ; ಸೋಶಿಯಲ್ ಮೀಡಿಯಾದಲ್ಲಿ #ArrestKohli ಟ್ರೆಂಡಿಂಗ್
ಗುಪ್ತಚರ ಇಲಾಖೆ ವರದಿ ಇದ್ದರೂ ನಿರ್ಲಕ್ಷ್ಯ ಮಾಡಿದ್ದಾರೆ. ಸಂಪೂರ್ಣ ನಿರ್ಲಕ್ಷ್ಯದ ಕಾರಣದಿಂದ ಘಟನೆ ನಡೆದಿದೆ ಪೊಲಿಟಿಕಲ್ ಕ್ರೆಡಿಟ್ಗಾಗಿ ಸರ್ಕಾರ ಕೊಲೆ ಮಾಡಿದೆ. ಎ1 ಸಿಎಂ, ಎ2 ಡಿಸಿಎಂ ಅವರಿಗೆ ರಾಜಕೀಯ ಲಾಭದ ಸ್ಪಷ್ಟತೆ ಇತ್ತು. ಎ3 ಗೃಹ ಸಚಿವರು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದರು. ಡಿ.ಕೆ. ಶಿವಕುಮಾರ್ ಸಂಪೂರ್ಣ ಹೊಣೆ ಹೊರಬೇಕು. ಸಿಎಂ ಸಾವಿಗೆ ನೈತಿಕ ಹೊಣೆ ಹೊರಬೇಕು. ರಾಜೀನಾಮೆ ಕೊಟ್ಟಾಗ ಮಾತ್ರ ಡಿಸಿಎಂ ಕಣ್ಣೀರಿಗೆ ಅರ್ಥ ಬರುತ್ತದೆ. ಸಿದ್ದರಾಮಯ್ಯ ಅವರೇ ಎ1 ಆಗಬೇಕು. ಡಿ.ಕೆ. ಶಿವಕುಮಾರ್ ನೇರ ಆರೋಪಿಯಾಗಬೇಕು. ಸರ್ಕಾರ ಸ್ವಾರ್ಥಕ್ಕಾಗಿ ಅಮಾಯಕರ ಕೊಲೆ ಮಾಡಿದೆ. ಎಫ್ಐಆರ್ ದಾಖಲಿಸುವಂತೆ ದೂರು ಸಲ್ಲಿಸಿದ್ದೇವೆ. ಸೂಕ್ತ ಕ್ರಮ ಆಗದಿದ್ದರೆ ನಾನು ಕೋರ್ಟ್ ಮೊರೆ ಹೋಗುತ್ತೇನೆ ಎಂದು ಹೇಳಿದರು.
Published On - 7:42 pm, Fri, 6 June 25