
ಬೆಂಗಳೂರು, ಆಗಸ್ಟ್ 04: ಬೆಂಗಳೂರಿನಲ್ಲಿ ‘ಸುರಕ್ಷಿತ ಪಾದಚಾರಿ ಮಾರ್ಗ’ (Safe Footpath) ಅಭಿಯಾನದಡಿ ಕಳೆದ ಒಂದು ತಿಂಗಳಲ್ಲಿ 750 ಕಿಲೋಮೀಟರ್‌ಗೂ ಹೆಚ್ಚು ಪಾದಚಾರಿ ಮಾರ್ಗದ ಅತಿಕ್ರಮಣವನ್ನು ಜಿಬಿಎ ಹಾಗೂ ನಗರಾಡಳಿತ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಮತ್ತೆ ಅತಿಕ್ರಮಣವಾಗದಂತೆ ತಡೆಯಲು ದಿಢೀರ್ ತಪಾಸಣೆ ನಡೆಸಲು ನಿರ್ಧರಿಸಲಾಗಿದೆ. ಇನ್ನೊಂದೆಡೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಡಾ. ಶ್ರೀ ಶಿವಕುಮಾರ ಸ್ವಾಮೀಜಿ (ಪೀಣ್ಯ) ಮೇಲ್ಸೇತುವೆಯ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಆಗಸ್ಟ್ 12 ರವರೆಗೆ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸಲಾಗಿದೆ.
ಜುಲೈ 1 ರಿಂದ ಜುಲೈ 31 ರವರೆಗೆ ನಡೆದ ತಿಂಗಳ ಅಭಿಯಾನದಲ್ಲಿ ನಗರದಾದ್ಯಂತ 750 ಕಿ.ಮೀಗೂ ಹೆಚ್ಚು ಪಾದಚಾರಿ ಮಾರ್ಗದಲ್ಲಿದ್ದ ಅಂಗಡಿಗಳು, ತಳ್ಳುಗಾಡಿಗಳು ಹಾಗೂ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಸಾರ್ವಜನಿಕರು, ಹಿರಿಯ ನಾಗರಿಕರು ಹಾಗೂ ಮಕ್ಕಳಿಗೆ ಸುರಕ್ಷಿತವಾಗಿ ಸಂಚರಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಮತ್ತೆ ಅತಿಕ್ರಮಣ ಮಾಡಿಕೊಳ್ಳುವುದನ್ನು ತಡೆಯಲು ಜಿಬಿಎ ವಲಯ ಅಧಿಕಾರಿಗಳು ಸಂಚಾರ ಮತ್ತು ಶಿಸ್ತು ಪಾಲನಾ ಪೊಲೀಸರೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಸೋಮವಾರ ಒಂದೇ ದಿನ 1.20 ಕಿ.ಮೀ ಅತಿಕ್ರಮಣ ತೆರವುಗೊಳಿಸಲಾಗಿದ್ದು, ಜಯನಗರದ 9 ಮತ್ತು 10ನೇ ಮುಖ್ಯ ರಸ್ತೆ ಹಾಗೂ ಎಚ್‌ಎಸ್‌ಆರ್ ಲೇಔಟ್‌ನ 31ನೇ ಮುಖ್ಯ ರಸ್ತೆಯಲ್ಲಿ ತಳ್ಳುಗಾಡಿಗಳು ಮತ್ತು ತಾತ್ಕಾಲಿಕ ಶೆಡ್‌ಗಳನ್ನು ಜಪ್ತಿ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪೀಣ್ಯ ಮೇಲ್ಸೇತುವೆಯ ರೀ-ಸರ್ಫೇಸಿಂಗ್ (ಡಾಂಬರೀಕರಣ) ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ, ಆಗಸ್ಟ್ 3 ರಿಂದ ಆಗಸ್ಟ್ 12 ರವರೆಗೆ ಪ್ರತಿ ರಾತ್ರಿ ಸಂಚಾರ ನಿಯಂತ್ರಣ ಹೇರಲಾಗಿದೆ. ಸೋಮವಾರದಿಂದ ಶುಕ್ರವಾರ) ರಾತ್ರಿ 10:00 ರಿಂದ ಬೆಳಗಿನ ಜಾವ 5:00 ರವರೆಗೆ ಸಂಚಾರ ನಿಷೇಧ. ಶನಿವಾರ ಮತ್ತು ಭಾನುವಾರ ಮಧ್ಯರಾತ್ರಿ 12:00 ರಿಂದ ಬೆಳಗಿನ ಜಾವ 5:00 ರವರೆಗೆ ಸಂಚಾರ ನಿಷೇಧ.
ತುಮಕೂರು/ನೆಲಮಂಗಲ ಕಡೆಗೆ ಸಂಚರಿಸುವ ವಾಹನಗಳು ಎಸ್‌ಆರ್‌ಎಸ್ ಅಪ್ಪರ್ ರಾಂಪ್ ಬಳಿ ಕೆಳಗಿಳಿದು ಎನ್‌ಎಚ್-4 ಸರ್ವೀಸ್ ರಸ್ತೆ, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ, 8ನೇ ಮೈಲಿ ಹಾಗೂ ಪಾರ್ಲೆ-ಜಿ ಟೋಲ್ ಮೂಲಕ ತೆರಳಲು ಸೂಚಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:55 am, Tue, 4 August 26