ಬೆಂಗಳೂರಿನಲ್ಲಿ ನಿಲ್ಲದ ರೋಡ್ರೇಜ್: ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಅಧ್ಯಕ್ಷನ ಮೇಲೆ ಹಲ್ಲೆ
ಬೆಂಗಳೂರಿನಲ್ಲಿ ರೋಡ್ರೇಜ್ ಪ್ರಕರಣಗಳು ಹೆಚ್ಚುತ್ತಿವೆ. ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಸ್. ಉಮೇಶ್ ಅವರ ಮೇಲೆ ಹಲ್ಲೆ ನಡೆದಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಮತ್ತು ಪೊಲೀಸರು ಇನ್ನೂ ಬಂಧಿಸಿಲ್ಲ. ಈ ಘಟನೆಯಿಂದ ಸಾರ್ವಜನಿಕರ ಸುರಕ್ಷತೆಗೆ ಅಪಾಯವಿದೆ ಎಂದು ಕಾಳಜಿ ವ್ಯಕ್ತವಾಗಿದೆ. ಆರೋಪಿಗಳನ್ನು ಬಂಧಿಸುವಂತೆ ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಎನ್. ಶಿವಕುಮಾರ್ ಒತ್ತಾಯಿಸಿದ್ದಾರೆ.

ಬೆಂಗಳೂರು, ಮೇ 27: ಬೆಂಗಳೂರಿನಲ್ಲಿ (Bengaluru) ರೋಡ್ರೇಜ್ (Road Rage) ಪ್ರಕರಣಗಳು ಹತೋಟಿಗೆ ಬರುತ್ತಿಲ್ಲ. ಬದಲಿಗೆ ದಿನೇ ದಿನೇ ರೋಡ್ರೇಜ್ ಕೇಸ್ಗಳು ಹೆಚ್ಚುತ್ತಿವೆ. 10 ದಿನಗಳ ಹಿಂದೆ ನಡೆದ ರೋಡ್ರೇಜ್ ಪ್ರಕರಣವೊಂದರಲ್ಲಿ ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಸ್. ಉಮೇಶ್ ಎಂಬುವರ ಮೇಲೆ ನಡೆದ ಬರ್ಬರವಾಗಿ ಹಲ್ಲೆ ಮಾಡಿರುವುದುನ್ನು ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ತೀವ್ರವಾಗಿ ಖಂಡಿಸಿದೆ. ಎಸ್. ಉಮೇಶ್ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಈವರೆಗೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎಂದು ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಎನ್ ಶಿವಕುಮಾರ್ ಆರೋಪಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪ್ರಕರಣದ ಓರ್ವ ಆರೋಪಿ ಸ್ಥಳದಲ್ಲಿದ್ದನು. ಎಸ್. ಉಮೇಶ್ ಅವರು ಆರೋಪಿಯನ್ನು ಗುರುತಿಸಿದರೂ, ಪೊಲೀಸರು ಆತನನ್ನು ಬಂಧಿಸಲಿಲ್ಲ ಎಂದು ಎನ್ ಶಿವಕುಮಾರ್ ಹೇಳಿದ್ದಾರೆ.
ಎಸ್. ಉಮೇಶ್ ಅವರು 40 ವರ್ಷಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಈ ಘಟನೆಯು ಸಾಮಾನ್ಯ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಇದನ್ನೂ ನೋಡಿ: ಬೆಂಗಳೂರಿನಲ್ಲಿ ಹತೋಟಿಗೆ ಬಾರದ ರೋಡ್ರೇಜ್: ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದನೆ
ಪೊಲೀಸ್ ಆಯುಕ್ತರು ತಕ್ಷಣ ಮಧ್ಯಪ್ರವೇಶಿಸಿ ಆರೋಪಿಗಳನ್ನು ಕೂಡಲೆ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಎಸ್. ಉಮೇಶ್ ಅವರಿಗೆ ನ್ಯಾಯ ಒದಗಿಸಬೇಕು. ಮತ್ತು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.








