7 ಕೋಟಿ ರೂ. ದರೋಡೆ ಪ್ರಕರಣಕ್ಕೆ ಹೊಸ ತಿರುವು; ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಕ್ಸೇವಿಯರ್ ಅಂದರ್
ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂ. ದರೋಡೆ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಬನಶಂಕರಿ ಪೊಲೀಸರ ವಿಶೇಷ ತಂಡ ಆರೋಪಿಯನ್ನು ಪತ್ತೆ ಹಚ್ಚಿದ್ದು, ಸದ್ಯ ಸಿದ್ದಾಪುರ ಠಾಣೆಯಲ್ಲಿ ವಿಚಾರಣೆ ಮುಂದುವರಿದಿದೆ. ಈ ಹಿಂದೆ 5.30 ಕೋಟಿ ರೂ. ವಶಪಡಿಸಿಕೊಳ್ಳಲಾಗಿದ್ದು, ಎಟಿಎಂ ವಾಹನದಿಂದ ದರೋಡೆ ನಡೆಸಿದ್ದ ಆರೋಪಿಗಳ ತೀವ್ರ ತನಿಖೆ ನಡೆಯುತ್ತಿದೆ.

ಬೆಂಗಳೂರು,ನವೆಂಬರ್ 22: ಬೆಂಗಳೂರಿನಲ್ಲಿ ಹಾಡಹಗಲೇ ನಡೆದ 7.11 ಕೋಟಿ ರೂಪಾಯಿ ದರೋಡೆ (Robbery) ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪ್ರಮುಖ ಆರೋಪಿಯೊಬ್ಬನನ್ನು ಪೊಲೀಸರು ತಮಿಳುನಾಡಿನಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ. ಬನಶಂಕರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೊಟ್ರೇಶಿ ನೇತೃತ್ವದ ವಿಶೇಷ ತಂಡ ತಮಿಳುನಾಡಿನಲ್ಲಿ ದಾಳಿ ನಡೆಸಿ ಆರೋಪಿಯನ್ನು ಹಿಡಿದು ತಂದಿದೆ.
ಬನಶಂಕರಿ ಪೊಲೀಸರ ವಿಶೇಷ ಪೊಲೀಸರ ತಂಡದ ಕಾರ್ಯಾಚರಣೆ
ಬೆಂಗಳೂರಿನ ಕಾಡುಗೊಂಡನಹಳ್ಳಿ ನಿವಾಸಿಯಾಗಿರುವ ಜೆ.ಕ್ಸೇವಿಯರ್ ದರೋಡೆಯ ನಂತರ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ. ಆರೋಪಿಯು ಕುಪ್ಪಂ ಪ್ರದೇಶದಲ್ಲಿ ಹಣದ ಬಾಕ್ಸ್‌ನ್ನು ತೆಗೆದು ನಗದನ್ನು ಚೀಲದಲ್ಲಿ ತುಂಬಿಕೊಂಡಿದ್ದಲ್ಲದೇ ದರೋಡೆಗೆ ಬಳಸಿದ್ದ ಇನ್ನೋವಾ ಕಾರನ್ನೂ ಅಲ್ಲಿಯೇ ಬಿಟ್ಟು, ಮತ್ತೊಂದು ವ್ಯಾಗನಾರ್ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ. ಚಿತ್ತೂರಿನ ಕುಪ್ಪಂ ಬಳಿ ಹಣದ ಪೆಟ್ಟಿಗೆಗಳು ಪತ್ತೆಯಾಗಿದ್ದು, ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬನಶಂಕರಿ ಠಾಣೆಯ ಇನ್ಸ್ಪೆಕ್ಟರ್ ಕೊಟ್ರೇಶಿ ನೇತೃತ್ವದ ವಿಶೇಷ ಪೊಲೀಸರ ತಂಡ ಸೆರೆಹಿಡಿದಿದೆ. ಆರೋಪಿಯನ್ನು ಸಿದ್ದಾಪುರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ.
ಕುಪ್ಪಂ ಬಳಿ ದೊರೆತ ಹಣದ ಪೆಟ್ಟಿಗೆಗಳ ದೃಶ್ಯ ಇಲ್ಲಿದೆ
ಇದನ್ನೂ ಓದಿ ಬೆಂಗಳೂರು 7 ಕೋಟಿ ರೂ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪ್ರಕರಣದ ಕಿಂಗ್ಪಿನ್ ಪತ್ನಿ
ದರೋಡೆಯಾಗಿದ್ದ 7 ಕೋಟಿ ರೂ.ಗಳಲ್ಲಿ 5 ಕೋಟಿ ವಶ
ನಗರದ ಡೈರಿ ಸರ್ಕಲ್ ಫ್ಲೈಓವರ್ ಮೇಲೆ ಎಟಿಎಂ ವಾಹನದಲ್ಲಿದ್ದ ಬರೋಬ್ಬರಿ 7.11 ಕೋಟಿ ರೂ. ದೋಚಿಕೊಂಡು ಗ್ಯಾಂಗ್ ಇನೋವಾ ಕಾರಿನಲ್ಲಿ ಪರಾರಿಯಾಗಿತ್ತು. ಈ ಸಂಬಂಧ ಕೃತ್ಯಕ್ಕೆ ಬಳಸಲಾಗಿದ್ದ ಇನ್ನೋವಾ ಕಾರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದರು. ದರೋಡೆ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರು 5.30 ಕೋಟಿ ರೂ. ಹಣವನ್ನು ಆಂಧ್ರದಲ್ಲಿ ವಶಪಡಿಸಿಕೊಂಡಿದ್ದರು. ಕೇಸ್ನ ಪ್ರಮುಖ ಆರೋಪಿಗಳಾದ ಗೋವಿಂದಪುರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಅಣ್ಣಪ್ಪ ಮತ್ತು ಕಿಂಗ್ಪಿನ್ ರವಿಯ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ವಿಕಾಸ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:37 am, Sat, 22 November 25




