ಕಾರು ಖರೀದಿಸಿದ್ದು ಯಾರೋ, ನೋಂದಣಿ ಮಾಡಿಸಿದ್ದು ಇನ್ಯಾರದೋ ಹೆಸರಿಗೆ: ಲ್ಯಾಂಬೋರ್ಗಿನಿ ರಹಸ್ಯ ಬಯಲು

ನಕಲಿ ದಾಖಲೆಗಳನ್ನು ಸೃಷ್ಟಿಸಿ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸಿ ನೋಂದಣಿ ಮಾಡಿಸಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಸಹಕಾರ ನಗರದ ಎಚ್1 ಕಾರ್ ಕೇರ್ ಮೇಲೆ ಆರ್​ಟಿಓ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ. ಸದ್ಯ ಕಾರನ್ನು ಸೀಜ್​ ಮಾಡಲಾಗಿದ್ದು, ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಕಾರು ಖರೀದಿಸಿದ್ದು ಯಾರೋ, ನೋಂದಣಿ ಮಾಡಿಸಿದ್ದು ಇನ್ಯಾರದೋ ಹೆಸರಿಗೆ: ಲ್ಯಾಂಬೋರ್ಗಿನಿ ರಹಸ್ಯ ಬಯಲು
ಲ್ಯಾಂಬೋರ್ಗಿನಿ ಉರಾಖಾನ್ ಕಾರು
Image Credit source: tv9 kannada
Edited By:

Updated on: Feb 08, 2026 | 6:56 PM

ಬೆಂಗಳೂರು, ಫೆಬ್ರವರಿ 08: ನಕಲಿ ದಾಖಲೆ ಸೃಷ್ಟಿಸಿ ಖರೀದಿಸಿದ್ದ 3.5 ಕೋಟಿ ರೂ ಬೆಲೆಬಾಳುವ ಲ್ಯಾಂಬೋರ್ಗಿನಿ ಉರಾಖಾನ್​ ಕಾರನ್ನು (Lamborghini Huracan car) ಆರ್​ಟಿಓ (RTO) ಅಧಿಕಾರಿಗಳು ಸೀಜ್​ ಮಾಡಿದ್ದಾರೆ. ದೂರಿನ ಆಧಾರದ ಮೇಲೆ ಆರ್​ಟಿಓ ಅಧಿಕಾರಿಗಳು ಸಹಕಾರ ನಗರದಲ್ಲಿರುವ ಎಚ್1 ಕಾರ್ ಕೇರ್ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ.  ಈ ಬಗ್ಗೆ ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಚ್ 1 ಕಾರು ಮಾಲೀಕ ಹಾಗೂ ಹರ್ಷಾ ಇನ್ಫ್ರಾ ಕನ್ಸ್ಟ್ರಕ್ಷನ್ ಪ್ರೈ. ಲಿ ಮಾಲೀಕನ ಮೇಲೆ ಎಫ್​ಐಆರ್​​ ದಾಖಲಾಗಿದೆ.

ಏನಿದು ಪ್ರಕರಣ

ಹರ್ಷಾ ಇನ್ಫ್ರಾ ಕನ್ಸ್ಟ್ರಕ್ಷನ್ ಪ್ರೈ. ಲಿಮಿಟೆಡ್ ಮಾಲೀಕ ಹರ್ಷಾ ಮೊದಲು ಕಾರು ಖರೀದಿ ಮಾಡಿ ತೆಲಂಗಾಣ ಆರ್​ಟಿಓನಿಂದ ತಾತ್ಕಾಲಿಕವಾಗಿ ನೋಂದಣಿ ಮಾಡಿಸಿದ್ದರು. ಅನಂತರ ಮೂರು ವರ್ಷ ನೋಂದಣಿ ಮಾಡಿಸಿಲ್ಲ. ಬಳಿಕ ಕಾರನ್ನು ಎಚ್ 1 ಕಾರ್ ಕೇರ್​​ಗೆ ಮಾರಾಟ ಮಾಡಿದ್ದಾರೆ. ಎಚ್ 1 ಕಾರ್ ಕೇರ್ ಕಂಪನಿ ಹರ್ಷರಿಂದ ಕಾರಿನ ಮಾಲೀಕತ್ವ ವರ್ಗಾವಣೆ ಮಾಡಿಕೊಂಡಿಲ್ಲ. ಆದರೆ ಎಚ್ 1 ಕಾರ್​ ಕೇರ್​ ಕಂಪನಿ ಸುಳ್ಳು ದಾಖಲೆ ನೀಡಿ ಇಂದಿರಾನಗರ ಆರ್​ಟಿಓದಲ್ಲಿ ಕಾರು ನೋಂದಣಿ ಮಾಡಿಸಿದ್ದಾರೆ.

ಇದನ್ನೂ ಓದಿ: ಮೈಸೂರು ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಚಾಲಕನ ಹುಚ್ಚಾಟ: ವೈರಲ್ ವಿಡಿಯೋ ಆಧರಿಸಿ ಚಾಲಕನ ವಿರುದ್ಧ ಎಫ್‌ಐಆರ್

ಅತ್ತ ಈ ಕಾರಿಗಾಗಿ ಸತತ ಮೂರು ತಿಂಗಳಿನಿಂದ ಆರ್​ಟಿಓ ಅಧಿಕಾರಿಗಳು ಹುಡುಕಾಟ ನಡೆಸಿದ್ದರು. 2025ರ ಡಿಸೆಂಬರ್ 13ರಂದು ಕೂರ್ಗಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಹುಣಸೂರು, ಮಡಿಕೇರಿ, ಮೖಸೂರು ಪಶ್ಚಿಮ, ಜಯನಗರ ಸೌತ್ ಆರ್​ಟಿಓ ತಂಡದಿಂದ ಹುಡುಕಾಟ ಮಾಡಿದ್ದು, ಮೈಸೂರು ಹಾಗೂ ಕೂರ್ಗ್​ನ ಮಧ್ಯೆ ಕಾರು ನಿಲ್ಲಿಸಿ ತಪಾಸಣೆ ಮಾಡಿದ್ದಾರೆ. ಅಖಿಲ್ ಹೇಮಾದ್ರಿ ಎನ್ನುವ ವ್ಯಕ್ತಿ ಕಾರು ಮಾಲೀಕ ತಾವೇ ಎಂದು ಹೇಳಿದ್ದರು. ದಾಖಲಾತಿ ನೀಡುವಂತೆ ಕೇಳಿದಾಗ ಸರಿಯಾಗಿ ಸಹಕಾರ ನೀಡಿರಲಿಲ್ಲ. ಹೀಗಾಗಿ ಕಾರನ್ನು ಆರ್​ಟಿಓ ಕಚೇರಿಗೆ ತೆಗೆದುಕೊಂಡು ಹೋಗುವಾಗ ಎದೆನೋವಿನ ನಾಟಕವಾಡಿದ್ದ. ಇನ್ಸ್‌ಪೆಕ್ಟರ್​ ನೀರು ತರಲು ಹೋಗಿದ್ದ ವೇಳೆ ಕಾರು ತೆಗೆದುಕೊಂಡು ಅಲ್ಲಿಂದ ಪರಾರಿ ಆಗಿದ್ದ. ಅನಂತರ ಎರಡು ತಿಂಗಳಿಂದ ಎಚ್ 1 ಕಾರ್ ಕೇರ್ ಅಲ್ಲಿ ಕಾರನ್ನು ಮುಚ್ಚಿಟ್ಟಿದ್ದ. ಈ ವಿಚಾರ ತಿಳಿದು ನಿನ್ನೆ ಮಧ್ಯರಾತ್ರಿ ದಾಳಿ ಮಾಡಿದ ಆರ್​ಟಿಓ ಅಧಿಕಾರಿಗಳು ಕಾರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಸರ್ಕಾರಕ್ಕೆ 36 ಲಕ್ಷ ರೂ ತೆರಿಗೆ ವಂಚನೆ 

T0622 KA-2555AD ತಾತ್ಕಾಲಿಕವಾಗಿ ಈ ನಂಬರ್ ಪಡೆದುಕೊಳ್ಳಲಾಗಿತ್ತು. ಸದ್ಯ ಕಾರಿಗೆ KA-03-NX0016 ನಂಬರ್​ ಇದೆ. 3 ಕೋಟಿ 51 ಲಕ್ಷದ 25 ಸಾವಿರದ 640 ರೂ ಬೆಲೆಬಾಳುವ ಕಾರನ್ನು ಲ್ಯಾಂಬೋರ್ಗಿನಿ ಶೋರೂಂ ಅವರು 3 ಕೋಟಿ 68 ಲಕ್ಷದ 729 ರೂ ಎಂದು ಸರ್ಕಾರಕ್ಕೆ ಕಡಿಮೆ ತೆರಿಗೆ ಪಾವತಿ ಮಾಡುವಂತೆ ಇನ್ ವಾಯ್ಸ್ ನೀಡಿ, ಹರ್ಷ ಎಂಬ ವ್ಯಕ್ತಿಗೆ ಮಾರಾಟ ಮಾಡಿದ್ದರು. ಇದರಿಂದ ಸರ್ಕಾರಕ್ಕೆ 36 ಲಕ್ಷ ರೂ ತೆರಿಗೆ ವಂಚನೆ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:53 pm, Sun, 8 February 26