ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 3 ಪಟ್ಟು ಹೆಚ್ಚಳ: ಪಾಸಿಟಿವಿಟಿ ಪ್ರಮಾಣ ಶೇ 2.9, ಮಹದೇವಪುರದಲ್ಲೇ ಹೆಚ್ಚು
ನಗರದ 10 ವಾರ್ಡ್ಗಳಲ್ಲಿ ಪಾಸಿಟಿವಿಟಿ ಪ್ರಮಾಣವೂ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಪೈಕಿ 8 ವಾರ್ಡ್ಗಳು ಮಹದೇವಪುರ ವ್ಯಾಪ್ತಿಯಲ್ಲಿಯೇ ಇವೆ.
ಬೆಂಗಳೂರು: ನಗರದಲ್ಲಿ ಕಳೆದ 10 ದಿನಗಳಲ್ಲಿ ಕೊವಿಡ್ ಪ್ರಕರಣಗಳು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿವೆ. 10 ದಿನಗಳ ಹಿಂದೆ ಶೇ 1.1ರಷ್ಟಿದ್ದ ಪಾಸಿಟಿವಿಟಿ ಪ್ರಮಾಣ ಇದೀಗ ಶೇ 2.9ಕ್ಕೆ ಹೆಚ್ಚಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (Bruhat Bengaluru Mahanagara Palike – BBMP) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಮೇ 31ರಂದು 178 ಪ್ರಕರಣಗಳು ವರದಿಯಾಗಿದ್ದರೆ, ಜೂನ್ 10ರಂದು ವರದಿಯಾಗಿರುವ ಪ್ರಕರಣಗಳ ಸಂಖ್ಯೆ 494 ದಾಟಿದೆ. ನಗರದ 10 ವಾರ್ಡ್ಗಳಲ್ಲಿ ಪಾಸಿಟಿವಿಟಿ ಪ್ರಮಾಣವೂ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಪೈಕಿ 8 ವಾರ್ಡ್ಗಳು ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಇರುವುದು ಗಮನಾರ್ಹ ಅಂಶ. ಇತರ ಎರಡು ವಾರ್ಡ್ಗಳು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿವೆ.
ಈ ಎಲ್ಲ 10 ವಾರ್ಡ್ಗಳಲ್ಲಿಯೂ ಜನಸಂದಣಿ ಗಮನಾರ್ಹ ಪ್ರಮಾಣದಲ್ಲಿದೆ. ಬೆಳ್ಳಂದೂರು ವಾರ್ಡ್ನ ಜನಸಂಖ್ಯೆ 1,30,000 ಇದೆ. ಅದೇ ರೀತಿ ಹಗದೂರು ಮತ್ತು ವರ್ತೂರು ವಾರ್ಡ್ಗಳ ಜನಸಂಖ್ಯೆ 60,000 ದಾಟಿದೆ. ಜನಸಾಂದ್ರತೆ ಹೆಚ್ಚಾಗಿರುವ ಕಾರಣ ಈ ವಾರ್ಡ್ಗಳಲ್ಲಿ ಕೊರೊನಾ ಪ್ರಕರಣಗಳೂ ಹೆಚ್ಚಾಗಿವೆ ಎಂದು ಮಹದೇವಪುರದ ಬಿಬಿಎಂಪಿ ಆರೋಗ್ಯ ಅಧಿಕಾರಿ ಡಾ ಆರ್.ಸುರೇಂದ್ರ ಅಭಿಪ್ರಾಯಪಟ್ಟಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಈ ಪ್ರದೇಶದಲ್ಲಿ ಗಮನಾರ್ಹ ಪ್ರಮಾಣದಲ್ಲಿರುವ ವಲಸೆ ಕಾರ್ಮಿಕರು ಮತ್ತು ಕಟ್ಟಡ ಕಾರ್ಮಿಕರು ಸಹ ಕೊರೊನಾ ಸೋಂಕು ಹೆಚ್ಚಳಕ್ಕೆ ಕಾರಣ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. ಈ ಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ (Information Technology – IT) ಸಂಬಂಧಿಸಿದ ಕಂಪನಿಗಳ ಕಚೇರಿಗಳು ಸಹ ಗಮಾರ್ಹ ಪ್ರಮಾಣದಲ್ಲಿವೆ. ಸಾಕಷ್ಟು ಜನರು ದೇಶೀಯ ಮತ್ತು ಅಂತರರಾಷ್ಟ್ರೀಯ ಯಾನಗಳನ್ನು ಕೈಗೊಳ್ಳುತ್ತಾರೆ. ಸೋಂಕು ಹೆಚ್ಚಾಗಲು ಈ ಎಲ್ಲ ಅಂಶಗಳೂ ಕಾರಣ ಇರಬಹುದು ಎಂದು ಹೇಳಲಾಗಿದೆ.
ಸೋಂಕು ಬಿಗಡಾಯಿಸಿರುವ ಕ್ಲಸ್ಟರ್ಗಳು
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕೊವಿಡ್ ಹೆಚ್ಚಾಗಿ ಕಾಣಿಸಿಕೊಂಡಿರುವ ಕ್ಲಸ್ಟರ್ಗಳ ಸಂಖ್ಯೆಯು ಕಳೆದ 10 ದಿನಗಳಲ್ಲಿ 5ರಿಂದ 12ಕ್ಕೆ ಹೆಚ್ಚಾಗಿದೆ. ಶುಕ್ರವಾರ ಒಂದೇ ದಿನ ಐದು ಹೊಸ ಕ್ಲಸ್ಟರ್ಗಳು ವರದಿಯಾಗಿವೆ. 12 ಕ್ಲಸ್ಟರ್ಗಳ ಪೈಕಿ 11 ಮಹದೇವಪುರ ವಾರ್ಡ್ನಲ್ಲಿಯೇ ಇವೆ.
ಒಂದು ವ್ಯಕ್ತಿಯಲ್ಲಿ ಕೊವಿಡ್ ಸೋಂಕು ದೃಢಪಟ್ಟ ನಂತರ ಇಡೀ ಕುಟುಂಬದ ಎಲ್ಲರೂ ಪಾಸಿಟಿವ್ ಆಗುತ್ತಿದ್ದಾರೆ. 11 ಕ್ಲಸ್ಟರ್ಗಳ ಪೈಕಿ 10 ಕ್ಲಸ್ಟರ್ಗಳು ಅಪಾರ್ಟ್ಮೆಂಟ್ಗಳೇ ಆಗಿವೆ. ನಗರದ ವಿವಿಧೆಡೆ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವವರ ಆರೋಗ್ಯದ ಮೇಲೆಯೂ ನಿಗಾ ಇರಿಸಲಾಗಿದೆ. ಮಹಾದೇವಪುರ ವಾರ್ಡ್ನಲ್ಲಿ ಈ ಮೊದಲು ಒಂದು ದಿನಕ್ಕೆ 1,400 ಮಂದಿಗೆ ತಪಾಸಣೆ ಮಾಡಲಾಗುತ್ತಿತ್ತು. ಪ್ರಸ್ತುತ ಈ ಪ್ರಮಾಣವನ್ನು 2,000ಕ್ಕೆ ಹೆಚ್ಚಿಸಲಾಗಿದೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:16 am, Sun, 12 June 22