
ಬೆಂಗಳೂರು, ಜೂನ್ 09: ವಿಧಾನಸೌಧವನ್ನು ಸಿಎಂ ಸಿದ್ದರಾಮಯ್ಯ (Siddaramaiah), ಸ್ಟೇಡಿಯಂ ಅನ್ನು ಡಿಕೆ ಶಿವಕುಮಾರ್ ಹಂಚಿಕೊಂಡಂತೆ ಕಾಣುತ್ತಿದೆ. ಏಕೆಂದರೆ ಸ್ಟೇಡಿಯಂ ಘಟನೆ ಡಿಕೆ ಶಿವಕುಮಾರ್ ತಲೆಗೆ ಕಟ್ಟಲು ಸಿಎಂ ಪ್ಲ್ಯಾನ್ ಮಾಡುತ್ತಿದ್ದರೆ, ಇತ್ತ ವಿಧಾನಸೌಧ ವಿಚಾರವನ್ನು ಸಿಎಂ ತಲೆಗೆ ಕಟ್ಟಲು ಡಿಸಿಎಂ ಪ್ಲ್ಯಾನ್ ಇದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ (R Ashoka) ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಟೇಡಿಯಂನಲ್ಲಿ ನಡೆದ ಘಟನೆಗೂ ನನಗೂ ಸಂಬಂಧವಿಲ್ಲ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಸರ್ಕಾರದ ಭಾಗವಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಡಿಕೆ ಶಿವಕುಮಾರ್ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿದ್ದರು. ಇವರಲ್ಲಿರುವ ಅಧಿಕಾರದ ಜಗಳ, ಕುರ್ಚಿ ಕಿತ್ತಾಟ ಬೀದಿಗೆ ಬಂದಿದೆ. ಈ ಘಟನೆಯಿಂದ ಸರ್ಕಾರ ಸಿಲುಕಿಕೊಂಡಿದೆ, ಹೊರ ಬರಲು ಆಗುತ್ತಿಲ್ಲ. ಹೀಗಾಗಿ ಸ್ಟೇಡಿಯಂಗೂ ನನಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಶಾಸಕರ 1 ತಿಂಗಳ ಸಂಬಳ ನೀಡುತ್ತೇವೆ: ಆರ್ ಅಶೋಕ್
ಸ್ಟೇಡಿಯಂಗೆ ಪರ್ಮಿಷನ್ ಕೊಟ್ಟವರು ಪೊಲೀಸರು ಮತ್ತು ಡಿಪಿಎಆರ್ನವರು. ಪೊಲೀಸ್ ಇಲಾಖೆ, ಇಂಟೆಲಿಜೆನ್ಸ್ ಸಿಎಂ ಅಧೀನದಲ್ಲೇ ಬರುತ್ತದೆ. ಅವರ ಪಾಡಿಗೆ ಅವರನ್ನು ಸ್ಟೇಡಿಯಂಗೆ ಬಿಟ್ಟಿದ್ದರೆ ತೊಂದರೆ ಆಗುತ್ತಿರಲಿಲ್ಲ. ನಿಮ್ಮ ತಪ್ಪೇ ಇಲ್ಲ ಅಂದರೆ ಹಾಲಿ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಿ. ಇದರಲ್ಲಿ 11 ಜನ ಅಮಾಯಕರು ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಸುಹಾಸ್ ಶೆಟ್ಟಿ ಹತ್ಯೆ ಕೇಸ್ ವಿಚಾರವಾಗಿ ಮಾತನಾಡಿದ ಅವರು, NIAಗೆ ಕೊಟ್ಟಿದ್ದನ್ನು ಸ್ವಾಗತ ಮಾಡುತ್ತೇನೆ. ಪ್ರಕರಣದ ತನಿಖೆ NIAಗೆ ವಹಿಸಬೇಕೆಂದು ನಾವೂ ಒತ್ತಾಯಿಸಿದ್ದೆವು. ಹೊರ ರಾಜ್ಯದವರು, PDI ಸಂಘಟನೆ ಭಾಗಿಯಾದ ಮಾಹಿತಿ ಇತ್ತು. ಹೀಗಾಗಿ ಎನ್ಐಎ ತನಿಖೆಗೆ ಒತ್ತಾಯ ಮಾಡಿದ್ದೆವು ಎಂದಿದ್ದಾರೆ.
ಇದನ್ನೂ ಓದಿ: RCB ಅಂದ್ರೆ ರಿಯಲ್ ಕಲ್ಪ್ರಿಟ್ ಆಫ್ ಬೆಂಗಳೂರು: ಅಶೋಕ್ ಲೇವಡಿ
ಕರಾವಳಿ ಭಾಗದಲ್ಲಿ ಕೇರಳದವರು, ಪಿಎಫ್ಐನವರು ಬಂದು ಸೇರ್ತಿದ್ದಾರೆ. ದಿನ ನಿತ್ಯ ಕೋಮುಗಲಭೆ ಉಂಟಾಗುವಂತಹ ಕೆಲಸ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಮುಸ್ಲಿಮರ ಪರವಾಗಿ ಇದ್ದಾರೆ. ಮುಸ್ಲಿಂ ಓಲೈಕೆ ಮಾಡಲು ಬಂಧಿಸುವುದು, ಗಡಿಪಾರು ಮಾಡುವುದು ಮತ್ತು ಹಿಂದೂಗಳಿಗೆ ಟಾರ್ಚರ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:29 am, Mon, 9 June 25