ಹೆಚ್ಚಾಗಲಿದೆ ಬೆಂಗಳೂರಿನ ತಾಪಮಾನ: 39 ಡಿಗ್ರಿ ಸೆಲ್ಸಿಯಸ್ ತಲಪುವ ಸಾಧ್ಯತೆ, ಬೀಸಲಿದೆ ಬಿಸಿ ಗಾಳಿ
ಬೇಸಿಗೆ ಶುರುವಾಗಿದೆ. ದಿನನಿತ್ಯ ಬಿಸಿಲ ಧಗೆ ಹೆಚ್ಚುತ್ತಲೇ ಇದೆ. ಬೆಂಗಳೂರಿನ ಬಿಸಿಲಿಗೆ ಜನರು ತತ್ತರಿಸಿದ್ದಾರೆ. ಮನೆಗಳಲ್ಲಿ, ಕಚೇರಿಗಳಲ್ಲಿ ಏರ್ ಕೂಲರ್‌ಗಳನ್ನ ಹಾಕೊಂಡು ಕೂರುವ ಪರಿಸ್ಥಿತಿ ಇದೆ ಬೆಂಗಳೂರಿನಲ್ಲಿ. ಹೀಗಿರುವಾಗ ಮುಂದಿನ ದಿನಗಳಲ್ಲಿ ಬಿಸಿಲು ಇನ್ನೂ ಹೆಚ್ಚಾಗಲಿದ್ದು, ಹವಾಮಾನ ಇಲಾಖೆ ಅಲರ್ಟ್ ನೀಡಿದೆ. ಕೂಲ್ ಸಿಟಿ ಇನ್ಮುಂದೆ ಹಾಟ್ ಸಿಟಿಯಾಗಲಿದೆ.

ಬೆಂಗಳೂರು, ಮಾರ್ಚ್ 17: ಬೇಸಿಗೆ ಕಾಲ (Summer) ಆರಂಭವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru) ಈಗಾಗಲೇ ಬಿಸಲ ಧಗೆ ಹೆಚ್ಚಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಸೂರ್ಯ ಮತಷ್ಟು ಸುಡಲಿದ್ದಾನೆ. ಹೀಗಂತ ಹವಾಮಾನ ಇಲಾಖೆ ಅಲರ್ಟ್ ನೀಡಿದೆ. ಮುಂದಿನ ವಾರ ಗರಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಸಹಜ ತಾಪಮಾನಕ್ಕಿಂತ 6 ರಿಂದ 8 ಡಿಗ್ರಿ ಸೆಲಿಸ್ಸಿಯಸ್ ಹೆಚ್ಚು ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಗರದಲ್ಲಿ ಈಗಾಗಲೇ 32 ರಿಂದ 34 ಡಿಗ್ರಿ ತಾಪಮಾನ ದಾಖಲಾಗುತ್ತಿದೆ. ಮುಂದಿನ ಎರಡೂ ದಿನಗಳಲ್ಲಿ 36-38 ಡಿಗ್ರಿ ತಾಪಮಾನಕ್ಕೆ ಏರಿಕೆಯಾಗಲಿದೆ. ಈ ತಿಂಗಳ ಅಂತ್ಯಕ್ಕೆ 39 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಹವಮಾನ ಇಲಾಖೆ ಗರಿಷ್ಠ ತಾಪಮಾನದ ಅಲರ್ಟ್ ನೀಡಿದ್ದು, ಕಳೆದ ವರ್ಷವೂ ನಗರದಲ್ಲಿ 39 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಈ ವರ್ಷವೂ 39 ರಿಂದ 40 ಡಿಗ್ರಿಯಷ್ಟು ತಾಪಮಾನದ ಎಚ್ಚರಿಕೆಯನ್ನ ಹವಮಾನ ಇಲಾಖೆ ನೀಡಿದೆ. ಜನರು ಹೆಚ್ಚು ಬಿಸಿಲಿನಲ್ಲಿ ಓಡಾಡದಂತೆ ಹವಾಮಾನ ಇಲಾಖೆ ಸಲಹೆ ನೀಡಿದ್ದು ಬಿಸಿ ಗಾಳಿ ಬಗ್ಗೆಯೂ ಎಚ್ಚರಿಕೆ ನೀಡಿದೆ.
ಈಗಾಗಲೇ ರಾಜ್ಯದ ಎರಡೂ ಜಿಲ್ಲೆಗಳಾದ ಮಂಗಳೂರು ಹಾಗೂ ಕಲಬುರಗಿಯಲ್ಲಿ ಬಿಸಿ ಗಾಳಿ ಬೀಸುತ್ತಿದೆ. ಹೀಗಾಗಿ ಬೆಂಗಳೂರಿಗೂ ಈ ಟೆನ್ಷನ್ ಶುರುವಾಗಿದ್ದು ಹವಮಾನ ಇಲಾಖೆ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದೆ.
ಇದನ್ನೂ ಓದಿ: Summer Pregnancy Care: ಗರ್ಭಿಣಿಯರು ಬೇಸಿಗೆ ಕಾಲದಲ್ಲಿ ಈ ಸಲಹೆಗಳನ್ನು ಪಾಲಿಸಿ
ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ವೈದ್ಯರ ಸಲಹೆ
ಈಗಾಗಲೇ ನಗರದಲ್ಲಿ ಬಿಸಿಲು ಹೆಚ್ಚಳವಾಗಿರುವುದರಿಂದ, ಜನರು ಎಳನೀರು, ಮಜ್ಜಿಗೆ, ಹಣ್ಣುಗಳು ಮತ್ತು ತಂಪು ಪಾನಿಯಗಳ ಮೊರೆ ಹೋಗಿದ್ದಾರೆ. ಈ ಬೇಸಿಗೆ ವೇಳೆ ಸಾಮಾನ್ಯವಾಗಿ ಮಕ್ಕಳು ಹಾಗೂ ವೃದ್ಧರಿಗೆ ಹೆಚ್ಚು ಆರೋಗ್ಯದ ಸಮಸ್ಯೆ ಕಾಡಲಿದೆ. ಈ ಹಿನ್ನೆಲೆ ಜನರು ಹೆಚ್ಚು ನೀರು ಕುಡಿಯಬೇಕು. ಹಣ್ಣುಗಳನ್ನು ಸೇವಿಸಬೇಕು. ಜನರು ಬಿಸಿಲಿಗೆ ಹೆಚ್ಚು ಮೈ ಒಡ್ಡಬಾರದು ಹಾಗೂ ಮೈ ತುಂಬ ಬಟ್ಟೆ ಧರಿಸಬೇಕು ಅಂತ ವೈದ್ಯರು ಸಲಹೆ ನೀಡುತ್ತಿದ್ದಾರೆ.
ಒಟ್ಟಿನಲ್ಲಿ ನಗರದಲ್ಲಿ ಈಗಿರುವ ಬಿಸಿಲಿನ ತಾಪಕ್ಕೆನೇ ಜನರು ಬಸವಳಿದಿದ್ದಾರೆ. ಯಾವಾಗ ಬೇಸಿಗೆ ಕಾಲ ಮುಗಿಯುತ್ತೋ ಅಂತ ಕಾಯ್ತಿದ್ದಾರೆ. ಈ ಮಧ್ಯೆ ಮುಂದಿನ ದಿನದಲ್ಲಿ ಮತ್ತಷ್ಟು ಬಿಸಿಲಿನ ಪ್ರಮಾಣ ಹೆಚ್ಚಾಗಲಿದ್ದು, ಆರೋಗ್ಯ ಇಲಾಖೆ ನೀಡಿರೋ ಮಾರ್ಗಸೂಚಿಗಳನ್ನು ಜನರು ಪಾಲಿಸಿದರೆ ಬಿಸಿ ಗಾಳಿ ಸಮಸ್ಯೆಯಿಂದ ಜನರು ಪಾರಾಗಬಹುದು.