ಬೆಂಗಳೂರು: ರಿಜಿಸ್ಟರ್ ಹುದ್ದೆ ಕೊಡಿಸುವುದಾಗಿ ಪ್ರೊಫೆಸರ್​ಗೆ 35 ಲಕ್ಷ ರೂ ವಂಚಿಸಿದ ಸಿಂಡಿಕೇಟ್ ಸದಸ್ಯ

ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಹುದ್ದೆ ನೀಡುವುದಾಗಿ ನಂಬಿಸಿ ಓರ್ವ ನಿವೃತ್ತ ಪ್ರೊಫೆಸರ್​ಗೆ 35 ಲಕ್ಷ ರೂಪಾಯಿ ವಂಚನೆ ಮಾಡಿರುವಂತಹ ಘಟನೆ ನಡೆದಿದೆ. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಆರೋಪಿಯನ್ನು ವಿಚಾರಣೆಗೆ ಕರೆದಿದ್ದು, ಈ ಮಧ್ಯೆ ಸೋಮಶೇಖರ್ ಮತ್ತು ರವಿಕುಮಾರ್ ನಡುವಿನ ಆಡಿಯೋ ವೈರಲ್ ಆಗಿದೆ.

ಬೆಂಗಳೂರು: ರಿಜಿಸ್ಟರ್ ಹುದ್ದೆ ಕೊಡಿಸುವುದಾಗಿ ಪ್ರೊಫೆಸರ್​ಗೆ 35 ಲಕ್ಷ ರೂ ವಂಚಿಸಿದ ಸಿಂಡಿಕೇಟ್ ಸದಸ್ಯ
ರವಿಕುಮಾರ್
Updated By: ಗಂಗಾಧರ​ ಬ. ಸಾಬೋಜಿ

Updated on: May 16, 2025 | 12:23 PM

ಬೆಂಗಳೂರು, ಮೇ 16: ಬೆಂಗಳೂರು ವಿಶ್ವವಿದ್ಯಾಲಯದ (Bengaluru University) ರಿಜಿಸ್ಟರ್ ಹುದ್ದೆ ಕೊಡಿಸುವುದಾಗಿ ನಿವೃತ್ತ ಪ್ರೊಫೆಸರ್​​ಗೆ ಸಿಂಡಿಕೇಟ್ ಸದಸ್ಯನಿಂದ ಬರೋಬ್ಬರಿ 35 ಲಕ್ಷ ರೂ ವಂಚನೆ (Fraud) ಮಾಡಿರುವಂತಹ ಘಟನೆ ನಡೆದಿದೆ. ಪರಿಸರ‌ ವಿಜ್ಞಾನ ವಿಭಾಗದ ನಿವೃತ್ತ ಪ್ರೊಫೆಸರ್​ ಸೋಮಶೇಖರ್​​ ಎಂಬುವವರಿಗೆ ರವಿಕುಮಾರ್ ಎಂಬಾತನಿಂದ ವಂಚನೆ ಮಾಡಲಾಗಿದೆ. ಈ ಕುರಿತಾಗಿ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ BNS U/s 318 (4) 316(2) 352, 351 (2), 351 ( 3) ಅಡಿ‌ ಎಫ್​ಐಆರ್ ದಾಖಲಾಗಿದೆ.

1983ರಿಂದ ಸೋಮಶೇಖರ್ ಅವರು ಬೆಂಗಳೂರು ವಿಶ್ವ ವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನ ಪರಿಸರ ವಿಜ್ಞಾನ ವಿಭಾಗದಲ್ಲಿ ಪ್ರೊಫೆಸರ್​​ ಆಗಿ ಕೆಲಸ ಮಾಡುತ್ತಿದ್ದರು. 2019ರಲ್ಲಿ ನಿವೃತ್ತರಾಗಿದ್ದರು. ಈ ಮಧ್ಯೆ ವಂಚಕ ರವಿಕುಮಾರ್ 2015 ರಲ್ಲಿ ಸೋಮಶೇಖರ್​ಗೆ ಪರಿಚಯವಾಗಿದ್ದ. ನನಗೆ ಸರ್ಕಾರದ ಹಲವಾರು ಪ್ರಭಾವಿ ಸಚಿವರ ಪರಿಚಯವಿದೆ. ಜ್ಞಾನಭಾರತಿಯ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಹುದ್ದೆ ಕೊಡಿಸುವುದಾಗಿ ತಿಳಿಸಿದ್ದ.

ಇದನ್ನೂ ಓದಿ: ಬೆಂಗಳೂರು ತುಮಕೂರು ಮೆಟ್ರೋ ಸಂಚಾರ ಬಹುತೇಕ ಪಕ್ಕಾ: ಕಾರ್ಯಸಾಧ್ಯತಾ ಪರೀಕ್ಷಾ ವರದಿ ಸರ್ಕಾರಕ್ಕೆ ಸಲ್ಲಿಕೆ

ರವಿಕುಮಾರ್ ಮಾತು ನಂಬಿದ ಸೋಮಶೇಖರ್​​ ಲಕ್ಷಾಂತರ ರೂ ನೀಡಿದ್ದಾರೆ. ಮೊದಲಿಗೆ 50 ಲಕ್ಷ ರೂ ಎಂದಿದ್ದ ರವಿಕುಮಾರ್, ಮಾತುಕತೆ ಬಳಿಕ 35 ಲಕ್ಷ ರೂ.ಗೆ ನಿರ್ಧರಿಸಲಾಗಿತ್ತು. ಆದರೆ ಹಣ ಪಡೆದುಕೊಂಡಿದ್ದ ರವಿಕುಮಾರ್ ಕೆಲಸ ಕೊಡಿಸದೆ ವಂಚನೆ ಮಾಡಿದ್ದಾನೆ. ಸುಮಾರು ವರ್ಷಗಳು ಕಳೆದಿದ್ದು, ಅಷ್ಟರಲ್ಲಿ ಸೋಮಶೇಖರ್ ನಿವೃತ್ತರಾಗಿದ್ದಾರೆ. ಹಾಗಾಗಿ ಹಣ ವಾಪಸ್​ ನೀಡುವಂತೆ ಕೇಳಿದಾಗ ನಾಳೆ ನಾಳೆ ಎಂದು ಸತಾಯಿಸಿದ್ದಾನೆ. ಈ ಸಂಬಂಧ ಗೋವಿಂದರಾಜನಗರ ಪೋಲೀಸ್ ಠಾಣೆಗೆ ಸೋಮಶೇಖರ್ ಆಡಿಯೋ ಸಮೇತ ದೂರು ನೀಡಿದ್ದಾರೆ.

ಇದನ್ನೂ ಓದಿ: Liquor Price Hike: ಮದ್ಯಪ್ರಿಯರಿಗೆ 3ನೇ ಬಾರಿ ದರ ಏರಿಕೆ ಶಾಕ್: ಯಾವ ಎಣ್ಣೆ ಎಷ್ಟು ಹೆಚ್ಚಳ?

ಸದ್ಯ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ರವಿಕುಮಾರ್ ವಿರುದ್ದ ದೂರು ದಾಖಲಾಗಿದ್ದು, ವಂಚಕನಿಗೆ ನೋಟೀಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ. ಪೊಲೀಸರ ನೋಟಿಸ್ ಬೆನ್ನಲ್ಲೇ ಸೋಮಶೇಖರ್ ಹಾಗೂ ರವಿಕುಮಾರ್ ನಡುವಿನ ಆಡಿಯೋ ವೈರಲ್​ ಆಗಿದೆ.

ಸೋಮಶೇಖರ್ ಹಾಗೂ ರವಿಕುಮಾರ್ ನಡುವಿನ ಆಡಿಯೋದಲ್ಲಿ ಏನಿದೆ?

ರವಿಕುಮಾರ್: ಸರ್. ಈ ವಾರದಲ್ಲಿ ಬಿಯು (ಬೆಂಗಳೂರು ಯುನಿವರ್ಸಿಟಿ)ದು ಮಾಡಿಸುತ್ತೇನೆ.

ಸೋಮಶೇಖರ್: ಹೇಳಿ

ರವಿಕುಮಾರ್: ಸರ್. ಈ ವಾರದಲ್ಲಿ ಬಿಯು (ಬೆಂಗಳೂರು ಯುನಿವರ್ಸಿಟಿ) ದು ಫೈನಲ್ ಮಾಡಿಸುತ್ತೇನೆ.

ಸೋಮಶೇಖರ್: ಈ ವಾರದಲ್ಲಿ ಗ್ಯಾರಂಟಿನಾ?

ರವಿ ಕುಮಾರ್: ಹೌದು ಹೌದು ಕನ್ಫರ್ಮ್

ಸೋಮಶೇಖರ್: ತ್ರೇತಾಯುಗದಲ್ಲಿ ಆಗಿದ್ದನ್ನ ದ್ವಾಪರ ಯುಗದಲ್ಲಿ ಮಾಡಿಸಿದ ರೀತಿ ಮಾಡುತ್ತಿದ್ದಿರಲ್ಲ ರವಿ

ರವಿ ಕುಮಾರ್: ಸರ್. ನೀವು ಏನು ಮಾತನಾಡುತ್ತಿದ್ಧೀರಿ ಸರ್. ಮಾಡಿಸುತ್ತೇನೆ ಅಂದಮೇಲೆ ಮಾಡಿಸುತ್ತೇನೆ. ತಿರ್ಗ ನೀವು ಅದನ್ನೇ ಮಾತಾಡಿದರೆ ನಾನ್ ಏನ್ ಮಾಡ್ಲಿ ಹೇಳಿ. ಎಲೆಕ್ಷನ್ ಇದ್ದಿದ್ದಕ್ಕೆ ಮೊಮೆಂಟ್ ಆಗಿಲ್ಲ, ಇವಾಗ ಮೊಮೆಂಟ್ ಆಗಿದೆ ಕ್ಲಿಯರ್ ಮಾಡಿಸುತ್ತೇನೆ.

ಸೋಮಶೇಖರ್: ಮತ್ತೆ ಸಿಂಡಿಕೇಟ್​ದು?

ರವಿ ಕುಮಾರ್: ಸಿಂಡಿಕೇಟ್​ದು ಮಾಡಿಸುತ್ತೇನೆ ಸರ್.. ಮಾಡಿಕೊಡುತ್ತೇನೆ ನೋ ಪ್ರಾಬ್ಲಂ.

ಸೋಮಶೇಖರ್: ಅಲ್ಲ 10ನೇ ತಾರೀಕು ಒಳಗೆ ಆಗುತ್ತೆ ಅಂತ ಹೇಳಿದ್ರಿ ಮತ್ತೆ ಆಗಿಲ್ಲ?

ರವಿ ಕುಮಾರ್: ಇಲ್ಲ ಎಲೆಕ್ಷನ್ ಬಂದಿತ್ತಲ್ಲ ಅದಕ್ಕೆ, ಈಗ ಕೈಗೆ ಎತ್ಕೊತ್ತಾರೆ ಮಾಡ್ತಾರೆ ಈಗ.

ಸೋಮಶೇಖರ್ : ಸರಿ ನಾನು ಯಾವಾಗ ಕಾಲ್ ಮಾಡಲಿ?

ರವಿ ಕುಮಾರ್: ನಾನೇ ಫೋನ್ ಮಾಡುತ್ತೇನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:18 pm, Fri, 16 May 25