ಇಂದಿನಿಂದ ಡಿಕೆ ಶಿವಕುಮಾರ್ ಸಿಎಂ: ಬೆಂಗಳೂರು ಟನಲ್ ರೋಡ್ ಯೋಜನೆಗೆ ಸಿಗುತ್ತಾ ಗ್ರೀನ್ ಸಿಗ್ನಲ್? ಹೆಚ್ಚಿದ ಕುತೂಹಲ

ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ, ಅವರ ಕನಸಿನ 17,698 ಕೋಟಿ ರೂ. ವೆಚ್ಚದ ಬೆಂಗಳೂರು ಟನಲ್ ರೋಡ್ ಯೋಜನೆಗೆ ಮೊದಲ ಕ್ಯಾಬಿನೆಟ್‌ನಲ್ಲೇ ಹಸಿರು ನಿಶಾನೆ ಸಿಗಲಿದೆಯೇ ಎಂಬ ಕುತೂಹಲ ಹೆಚ್ಚಾಗಿದೆ. ಹೆಚ್ಚುವರಿ ವೆಚ್ಚ ಹಾಗೂ ಅದಾನಿ ಗ್ರೂಪ್​ ಬಿಡ್ ಮಾಡಿರುವ ಕಾರಣಕ್ಕೆ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು.

ಇಂದಿನಿಂದ ಡಿಕೆ ಶಿವಕುಮಾರ್ ಸಿಎಂ: ಬೆಂಗಳೂರು ಟನಲ್ ರೋಡ್ ಯೋಜನೆಗೆ ಸಿಗುತ್ತಾ ಗ್ರೀನ್ ಸಿಗ್ನಲ್? ಹೆಚ್ಚಿದ ಕುತೂಹಲ
ಡಿಕೆ ಶಿವಕುಮಾರ್
Image Credit source: tv9
Edited By:

Updated on: Jun 03, 2026 | 8:10 AM

ಬೆಂಗಳೂರು, ಜೂನ್ 3: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಅವರು ಇಂದು ಅಧಿಕಾರ ವಹಿಸಿಕೊಳ್ಳುತ್ತಿರುವುದರಿಂದ, ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಬಲ್ಲ ಅವರ ಕನಸಿನ ‘ಟನಲ್ ರೋಡ್’ (ಸುರಂಗ ರಸ್ತೆ) ಯೋಜನೆಗೆ ಕೊನೆಗೂ ಚಾಲನೆ ಸಿಗಲಿದೆಯೇ ಎಂಬ ಭಾರಿ ಕುತೂಹಲ ಮೂಡಿದೆ. ಈ ಹಿಂದೆ ಬೆಂಗಳೂರು ನಗರಾಭಿವೃದ್ಧಿ ಮತ್ತು ಉಸ್ತುವಾರಿ ಸಚಿವರಾಗಿದ್ದಾಗಿನಿಂದಲೂ ಡಿಕೆ ಶಿವಕುಮಾರ್ ಅವರು ಈ ಬೃಹತ್ ಯೋಜನೆಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಸಾರ್ವಜನಿಕ ವಲಯದ ತೀವ್ರ ವಿರೋಧ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಬ್ರೇಕ್ ಬಿದ್ದಿದ್ದ ಈ ಮಹತ್ವಾಕಾಂಕ್ಷಿ ಯೋಜನೆಗೆ, ಈಗ ಅವರೇ ಮುಖ್ಯಮಂತ್ರಿಯಾಗುತ್ತಿರುವುದರಿಂದ ಹೊಸ ವೇಗ ಸಿಗುವ ಭರವಸೆ ಮೂಡಿದೆ.

ಮುಖ್ಯಾಂಶಗಳು

  • ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಸುಮಾರು 16.75 ಕಿಲೋಮೀಟರ್ ಉದ್ದದ ಸುರಂಗ ರಸ್ತೆ.
  • ಸರ್ಕಾರದ ಅಂದಾಜು ವೆಚ್ಚಕ್ಕಿಂತ ₹4,569 ಕೋಟಿ ಹೆಚ್ಚುವರಿ ಮೊತ್ತಕ್ಕೆ ಬಿಡ್ ಮಾಡಿದ್ದ ಅದಾನಿ ಗ್ರೂಪ್.
  • ಈ ಎರಡು ಕಾರಣಕ್ಕೆ ನೆನೆಗುದಿಗೆ ಬಿದ್ದಿದ್ದ ಯೋಜನೆ.

ಅದಾನಿ ಗ್ರೂಪ್ ಬಿಡ್ ಮತ್ತು ಬಜೆಟ್ ಲೆಕ್ಕಾಚಾರ

ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗಿನ 16.75 ಕಿಲೋಮೀಟರ್ ಉದ್ದದ ಈ ಸುರಂಗ ರಸ್ತೆ ಯೋಜನೆಗೆ ಮೊದಲ ಬಾರಿ ಟೆಂಡರ್ ಕರೆದಾಗ ಕಠಿಣ ಷರತ್ತುಗಳ ಕಾರಣಕ್ಕೆ ಯಾವುದೇ ಕಂಪನಿಗಳು ಮುಂದೆ ಬಂದಿರಲಿಲ್ಲ. ತದನಂತರ ಷರತ್ತುಗಳನ್ನು ಸಡಿಲಗೊಳಿಸಿ ಎರಡನೇ ಬಾರಿ ಮರು ಟೆಂಡರ್ ಕರೆದಾಗ ಅದಾನಿ ಗ್ರೂಪ್ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳು ಬಿಡ್ ಸಲ್ಲಿಸಿದ್ದವು. ಆದರೆ, ಸರ್ಕಾರದ ಅಂದಾಜು ವೆಚ್ಚಕ್ಕಿಂತ ಅದಾನಿ ಗ್ರೂಪ್ ಸಲ್ಲಿಸಿದ ಬಿಡ್ ಮೊತ್ತ ಭಾರಿ ಹೆಚ್ಚಾಗಿತ್ತು.

  • ಯೋಜನೆಯ ಒಟ್ಟು ಉದ್ದ: 16.75 ಕಿಲೋಮೀಟರ್ (ಹೆಬ್ಬಾಳ ಟು ಸಿಲ್ಕ್ ಬೋರ್ಡ್)
  • ಸರ್ಕಾರದ ಅಂದಾಜು ವೆಚ್ಚ: 17,698 ಕೋಟಿ ರೂ.
  • ಅದಾನಿ ಗ್ರೂಪ್ ಸಲ್ಲಿಸಿದ ಬಿಡ್: 22,267 ಕೋಟಿ ರೂ.
  • ಹೆಚ್ಚುವರಿ ವೆಚ್ಚದ: 4,569 ಕೋಟಿ ರೂ.

ಸಚಿವ ಸಂಪುಟದ ಒಪ್ಪಿಗೆ ಸಿಗುತ್ತಾ? ಅಥವಾ ಮರು ಟೆಂಡರ್?

ಸರ್ಕಾರದ ನಿಗದಿಪಡಿಸಿದ್ದಕ್ಕಿಂತ ಸುಮಾರು ನಾಲ್ಕೂವರೆ ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಮೊತ್ತದ ಬಿಡ್ ಆಗಿದ್ದರಿಂದ, ಈ ಯೋಜನೆಗೆ ಕಳೆದ ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟ (ಕ್ಯಾಬಿನೆಟ್) ಸಭೆಯಲ್ಲಿ ಅನುಮತಿ ಸಿಕ್ಕಿರಲಿಲ್ಲ. ಕಳೆದ ಡಿಸೆಂಬರ್‌ನಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಇದುವರೆಗೆ ಹಸಿರು ನಿಶಾನೆ ಸಿಕ್ಕಿರಲಿಲ್ಲ. ಇದರ ನಡುವೆ, ಕೆಲವು ನಾಗರಿಕ ಸಂಘಟನೆಗಳು ಹಾಗೂ ತಜ್ಞರು ಇಷ್ಟು ದೊಡ್ಡ ಮೊತ್ತವನ್ನು ಸುರಂಗ ರಸ್ತೆಗೆ ವ್ಯಯಿಸುವ ಬದಲು ಮೆಟ್ರೋ, ಸಬ್ ಅರ್ಬನ್ ರೈಲು ಮುಂತಾದ ಸಾರ್ವಜನಿಕ ಸಾರಿಗೆಗಳ ಅಭಿವೃದ್ಧಿಗೆ ಬಳಸುವಂತೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

ಇದನ್ನೂ ಓದಿ: ಲಾಲ್ ಬಾಗ್ ಮಾತ್ರವಲ್ಲ, ಸ್ಯಾಂಕಿ ಟ್ಯಾಂಕ್ ಕೆರೆಗೂ ಸುರಂಗ ರಸ್ತೆಯಿಂದ ಹಾನಿ ಎಂದ ತಜ್ಞರು

ಆದರೆ, ಈ ಸುರಂಗ ಮಾರ್ಗವೊಂದೇ ಬೆಂಗಳೂರಿನ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಎಂಬುದು ಡಿ.ಕೆ.ಶಿವಕುಮಾರ್ ಅವರ ವಾದವಾಗಿದೆ. ಈಗ ಅವರೇ ಮುಖ್ಯಮಂತ್ರಿಯಾಗಿ ಸಚಿವ ಸಂಪುಟದ ನೇತೃತ್ವ ವಹಿಸಲಿರುವುದರಿಂದ, ಈ ಯೋಜನೆಗೆ ನೇರ ಒಪ್ಪಿಗೆ ಸಿಗಲಿದೆಯೇ ಅಥವಾ ಸರ್ಕಾರ ಹೊಸದಾಗಿ ಮರು ಟೆಂಡರ್ ಪ್ರಕ್ರಿಯೆಗೆ ಮುಂದಾಗಲಿದೆಯೇ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Kiran Surya

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Follow Us