ಬೆಂಗಳೂರು: 4 ಕಿ.ಮೀ ಸಂಚಾರಕ್ಕೆ ಎರಡೂವರೆ ಗಂಟೆ! ವರ್ತೂರು ಟ್ರಾಫಿಕ್‌ನಿಂದ ವಿದ್ಯಾರ್ಥಿಗಳಿಗೆ ಸಂಕಷ್ಟ

ಬೆಂಗಳೂರು ಪೂರ್ವ ಭಾಗದ ವರ್ತೂರು-ಗುಂಜೂರು ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ತೀವ್ರಗೊಂಡಿದ್ದು, ನಾಲ್ಕು ಕಿಲೋಮೀಟರ್ ಸಂಚಾರಕ್ಕೆ ಎರಡೂವರೆ ಗಂಟೆ ಬೇಕಾಗುತ್ತಿದೆ. ಶಾಲಾ ಬಸ್‌ಗಳು ಟ್ರಾಫಿಕ್‌ನಲ್ಲಿ ಸಿಲುಕಿದ್ದರಿಂದ ವಿದ್ಯಾರ್ಥಿಗಳ ಪರೀಕ್ಷಾ ಸಂಚಾರಕ್ಕೂ ತೊಂದರೆಯಾಗಿದೆ. ರಸ್ತೆ ಗುಂಡಿ, ಅಗಲೀಕರಣ ಕಾಮಗಾರಿ ಹಾಗೂ ಧೂಳಿನಿಂದ ಸವಾರರ ಸಂಕಷ್ಟ ಹೆಚ್ಚಿದೆ.

ಬೆಂಗಳೂರು: 4 ಕಿ.ಮೀ ಸಂಚಾರಕ್ಕೆ ಎರಡೂವರೆ ಗಂಟೆ! ವರ್ತೂರು ಟ್ರಾಫಿಕ್‌ನಿಂದ ವಿದ್ಯಾರ್ಥಿಗಳಿಗೆ ಸಂಕಷ್ಟ
ವರ್ತೂರಿನಲ್ಲಿ ಸ್ಥಳೀಯರ ಸಹಕಾರದೊಂದಿಗೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೇ ರಸ್ತೆ ಸರಿಪಡಿಸುವ ಕಾಮಗಾರಿಯಲ್ಲಿ ನಿರತರಾಗಿರುವುದು
Image Credit source: Bangalore Traffic Police
Edited By:

Updated on: Sep 19, 2026 | 7:54 AM

ಮುಖ್ಯಾಂಶಗಳು

  • ನಾಲ್ಕು ಕಿ.ಮೀ ಸಂಚಾರಕ್ಕೆ ಎರಡೂವರೆ ಗಂಟೆ
  • ವರ್ತೂರು ಟ್ರಾಫಿಕ್‌ನಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಂಕಷ್ಟ
  • ಉದ್ಯಮಿ ಮೋಹನ್​ದಾಸ್ ಪೈ ಅಸಮಾಧಾನ

ಬೆಂಗಳೂರು, ಸೆಪ್ಟೆಂಬರ್ 19: ರಾಜಧಾನಿ ಬೆಂಗಳೂರಿನ ಪೂರ್ವ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದ್ದು, ವರ್ತೂರು-ಗುಂಜೂರು ಸುತ್ತಮುತ್ತಲಿನ ಸಂಚಾರ ದಟ್ಟಣೆಯಿಂದ ವಾಹನ ಸವಾರರು, ವಿದ್ಯಾರ್ಥಿಗಳು ಹಾಗೂ ಪೋಷಕರು ಪರದಾಡುವಂತಾಗಿದೆ. ಕೆಲ ದಿನಗಳಿಂದ ಈ ಭಾಗದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಕೇವಲ ನಾಲ್ಕು ಕಿಲೋಮೀಟರ್ ಸಂಚಾರಕ್ಕೆ ಎರಡೂವರೆ ಗಂಟೆ ಬೇಕಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಮಂಗಳವಾರ ವರ್ತೂರು-ಗುಂಜೂರು ರಸ್ತೆಯಲ್ಲಿ ಕೆಲ ಶಾಲಾ ಬಸ್‌ಗಳು ನಾಲ್ಕು ಕಿಲೋಮೀಟರ್‌ ದೂರ ಕ್ರಮಿಸಲು ಬರೋಬ್ಬರಿ ಎರಡೂವರೆ ಗಂಟೆ ತೆಗೆದುಕೊಂಡಿವೆ. ಇದರಿಂದ ಮಧ್ಯಂತರ ಪರೀಕ್ಷೆಗಳಿಗೆ ತೆರಳಬೇಕಿದ್ದ ವಿದ್ಯಾರ್ಥಿಗಳು ಕೂಡ ಟ್ರಾಫಿಕ್‌ನಲ್ಲಿ ಸಿಲುಕಿ ಸಂಕಷ್ಟ ಅನುಭವಿಸಿದ್ದಾರೆ. ಶಾಲಾ ಸಮಯದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುವುದರಿಂದ ಸಮಸ್ಯೆ ಮತ್ತಷ್ಟು ತೀವ್ರವಾಗುತ್ತಿದೆ.

ವರ್ತೂರು-ಗುಂಜೂರು ಸುತ್ತಮುತ್ತ 10ಕ್ಕೂ ಹೆಚ್ಚು ಪ್ರಮುಖ ಶಾಲೆಗಳಿದ್ದು, ಬೆಳಗ್ಗೆ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯುವ ಹಾಗೂ ಮಧ್ಯಾಹ್ನದ ವೇಳೆ ಮನೆಗೆ ಕರೆತರುವ ಸಮಯದಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕುತ್ತಿರುವುದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ತೊಂದರೆ ಅನುಭವಿಸುತ್ತಿದ್ದಾರೆ.

ವರ್ತೂರು ರಸ್ತೆಗಳ ಸ್ಥಿತಿಯೂ ಶೋಚನೀಯ

ಇದರ ನಡುವೆ ವರ್ತೂರು ಭಾಗದ ರಸ್ತೆಗಳ ಸ್ಥಿತಿಯೂ ವಾಹನ ಸವಾರರ ಅಸಮಾಧಾನಕ್ಕೆ ಕಾರಣವಾಗಿದೆ. ರಸ್ತೆಗಳಲ್ಲಿ ಗುಂಡಿಗಳು ಕಾಣಿಸಿಕೊಂಡಿದ್ದು, ಕೆಲವು ಗುಂಡಿಗಳನ್ನು ಸ್ಥಳೀಯರೇ ಕಲ್ಲುಗಳನ್ನು ಹಾಕಿ ತಾತ್ಕಾಲಿಕವಾಗಿ ಮುಚ್ಚಿರುವ ದೃಶ್ಯಗಳು ಕಂಡುಬಂದಿವೆ. ಕಳೆದ ನಾಲ್ಕು ವರ್ಷಗಳಿಂದ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯಿಂದಾಗಿ ರಸ್ತೆಯುದ್ದಕ್ಕೂ ಧೂಳು ಆವರಿಸಿದೆ ಎನ್ನಲಾಗುತ್ತಿದೆ.

ಟ್ರಾಫಿಕ್ ಪೊಲೀಸರಿಂದ ತಾತ್ಕಾಲಿಕ ಪರಿಹಾರ

ಸಂಚಾರ ಸಮಸ್ಯೆ ಹಿನ್ನೆಲೆಯಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಸ್ಥಳೀಯರ ಸಹಕಾರದೊಂದಿಗೆ ವರ್ತೂರು-ಗುಂಜೂರು ರಸ್ತೆಯ ಅಗತ್ಯವಿರುವ ಸ್ಥಳಗಳಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಟ್ರಾಫಿಕ್ ಪೊಲೀಸ್ ಎಕ್ಸ್ ಸಂದೇಶ


ಸ್ಥಳದ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸಲಾಗುತ್ತಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಹಾಗೂ ಸ್ಥಳದಲ್ಲಿರುವ ಸಿಬ್ಬಂದಿಗೆ ಸಹಕರಿಸುವಂತೆ ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.

ಜಿಬಿಎ ಕಾರ್ಯವೈಖರಿ ಬಗ್ಗೆ ಮೋಹನ್‌ದಾಸ್ ಪೈ ಅಸಮಾಧಾನ

ಟ್ರಾಫಿಕ್ ಪೊಲೀಸರ ಎಕ್ಸ್ ಸಂದೇಶಕ್ಕೆ ಉದ್ಯಮಿ ಮೋಹನ್‌ದಾಸ್ ಪೈ ಪ್ರತಿಕ್ರಿಯಿಸಿದ್ದು, ರಸ್ತೆ ಗುಂಡಿಗಳನ್ನು ಪೊಲೀಸರು ಮುಚ್ಚುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುಂಡಿ ಮುಚ್ಚುವುದು ಪೊಲೀಸರ ಕೆಲಸವೇ ಎಂದು ಪ್ರಶ್ನಿಸಿರುವ ಅವರು, ಕರ್ತವ್ಯ ಲೋಪ ಎಸಗಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರನ್ನು ಒತ್ತಾಯಿಸಿದ್ದಾರೆ.

ಮೋಹನ್‌ದಾಸ್ ಪೈ ಎಕ್ಸ್ ಸಂದೇಶ


ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಮೋಹನ್‌ದಾಸ್ ಪೈ ತಮ್ಮ ಎಕ್ಸ್ ಸಂದೇಶದಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿರುವ ಅವರು, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ವರ್ತೂರು-ಗುಂಜೂರು ಭಾಗದ ಟ್ರಾಫಿಕ್ ಸಮಸ್ಯೆ ಇದೀಗ ವಿದ್ಯಾರ್ಥಿಗಳ ಸಂಚಾರಕ್ಕೂ ತೊಂದರೆ ತಂದಿದ್ದು, ರಸ್ತೆ ಗುಂಡಿಗಳು, ಕಾಮಗಾರಿ ಮತ್ತು ವಾಹನ ದಟ್ಟಣೆಯಿಂದ ಸ್ಥಳೀಯರ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us