ಬೆಂಗಳೂರಿನ 6,900 ಬೋರ್ ವೆಲ್ನಲ್ಲಿ ನೀರು ಬರುತ್ತಿಲ್ಲ, ಸ್ಲಂಗಳಿಗೆ ಪೂರೈಕೆ ಮಾಡುವ ನೀರಿಗೂ ದರ ನಿಗದಿ: ಡಿಕೆ ಶಿವಕುಮಾರ್
ಸ್ಲಂಗಳಿಗೆ ಪೂರೈಕೆ ಮಾಡುವ ನೀರಿಗೂ ದರ ನಿಗದಿ ಮಾಡಲಾಗುತ್ತಿದೆ. ಬೆಂಗಳೂರು ನಗರದಲ್ಲಿ ನೀರಿನ ಮಾಫಿಯಾ ನಿಲ್ಲಿಸಿದ್ದೇವೆ. ನಮಗೆ ಮುಂದಿನ ಎರಡು ತಿಂಗಳು ಹೆಚ್ಚು ಮುಖ್ಯವಾಗಿದೆ ಎಂದು ಬೆಂಗಳೂರು ನಿಗಮ ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರು, ಮಾರ್ಚ್ 11: ಕಳೆದ 30-40 ವರ್ಷಗಳಲ್ಲಿ ಇಂತಹ ಬರ (Drought) ನೋಡಿರಲಿಲ್ಲ. 6,900 ಬೋರ್ ವೆಲ್ನಲ್ಲಿ ನೀರು ಬರುತ್ತಿಲ್ಲ. ಕುಡಿಯುವ ನೀರಿಗಾಗಿ ಸಾಕಷ್ಟು ತೊಂದರೆಯಾಗುತ್ತಿದೆ. ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಕುಡಿಯುವ ನೀರಿನ ದಂಧೆ ಮಾಡಲಾಗುತ್ತಿತ್ತು, ಅದಕ್ಕೆ ಕಡಿವಾಣ ಹಾಕಲಾಗಿದೆ ಎಂದು ಬೆಂಗಳೂರು ನಿಗಮ ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ (DK Shivakumar) ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಲಂಗಳಿಗೆ ಪೂರೈಕೆ ಮಾಡುವ ನೀರಿಗೂ ದರ ನಿಗದಿ ಮಾಡಲಾಗುತ್ತಿದೆ. ಬೆಂಗಳೂರು ನಗರದಲ್ಲಿ ನೀರಿನ ಮಾಫಿಯಾ ನಿಲ್ಲಿಸಿದ್ದೇವೆ. ನಮಗೆ ಮುಂದಿನ ಎರಡು ತಿಂಗಳು ಹೆಚ್ಚು ಮುಖ್ಯವಾಗಿದೆ. ಪೊಲೀಸನವರಿಗೆ, ಆರ್ಟಿಒ ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ಗೊತ್ತಾಗುವಂತೆ ರಿಜಿಸ್ಟರ್ ನಂಬರ್ ಹಾಕಿಸಲಾಗಿದೆ. ಬೆಂಗಳೂರು ರಾಮನಗರ ಮಾಗಡಿ ದೊಡ್ಡಬಳ್ಳಾಪುರ ಎಲ್ಲೆಲ್ಲಿ ಬೋರ್ವೆಲ್ ಬಗ್ಗೆ ಲೆಕ್ಕಾಚಾರ ಹಾಕಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿಳಿಸಿದರು.
ಇನ್ನು ತಮಿಳುನಾಡಿಗೆ ನೀರು ಬಿಡುವ ಮಾತೇ ಇಲ್ಲ. ತೊರೆಕಾಡನಹಳ್ಳಿಯಲ್ಲಿ ನೀರಿನ ಮಟ್ಟ ಕಡಿಮೆ ಆಗಿತ್ತು. ಆ ನೀರನ್ನು ಅನಿವಾರ್ಯವಾಗಿ ತುಂಬಿಸಬೇಕಿತ್ತು. ಅದಕ್ಕೆ ಪ್ರತ್ಯೇಕ ಲೇನ್ ಇದೆ, ಹೋಗಿ ನೋಡಿದರೆ ಗೊತ್ತಾಗುತ್ತೆ. ನೀರು ಬಿಡುವುದು, ಎಲ್ಲೆಲ್ಲಿಗೆ ನೀರು ಹೋಗುತ್ತಿದೆ ಎಲ್ಲದಕ್ಕೂ ಲೆಕ್ಕವಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಇದನ್ನೂ ಓದಿ: ಬರ ಹೆಚ್ಚಾಗಬಹುದು: ಕುಡಿಯುವ ನೀರು, ಮೇವು ಸಿದ್ಧತೆಗೆ ಡಿಸಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ
ಬಿಜೆಪಿಯವರು ಹೇಳಿದಷ್ಟು ಬೆಂಗಳೂರಲ್ಲಿ ನೀರಿನ ಹಾಹಾಕಾರ ಇಲ್ಲ. ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ, ಮಾಡಿಕೊಳ್ಳಲಿ. ನಮಗೆ ಬದ್ಧತೆ ಇರುವುದರಿಂದ ಮೇಕೆದಾಟು ಯೋಜನೆ ಕೈಗೆತ್ತಿಕೊಂಡಿದ್ದೇವೆ. ಈಗಾಗಲೇ ಆ ಭಾಗದಲ್ಲಿ ಮರಗಳ ಲೆಕ್ಕ ಹಾಕಲಾಗುತ್ತಿದೆ. ಅಲ್ಲಿ ಒಂದು ಜೋನ್ ಕೂಡ ಆರಂಭ ಮಾಡಿದ್ದೇವೆ. ಅದು ನನ್ನ ಕ್ಷೇತ್ರದಲ್ಲೇ ಇರುವ ಯೋಜನೆ. ಬೆಂಗಳೂರಿನ ಜನರಿಗೆ ಒಳ್ಳೆಯದು ಮಾಡಬೇಕು ಅಂತಲೇ ಇದನ್ನು ಮಾಡುತ್ತಿದ್ದೇವೆ ಎಂದು ಭರವಸೆ ನೀಡಿದರು.
ಲೋಕಸಭೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಂಜೆ ಸಭೆ ಮಾಡುತ್ತೇವೆ. ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲು ನಮಗೆ ಹಕ್ಕು ಇಲ್ಲ. ಇಂದು ಸಂಜೆ ಅಭ್ಯರ್ಥಿಗಳ ಪಟ್ಟಿಯನ್ನು ದೆಹಲಿಗೆ ಕಳುಹಿಸುತ್ತೇವೆ. ಹೈಕಮಾಂಡ್ ಯಾವ ಹೆಸರು ಬೇಕಾದರೂ ಘೋಷಿಸಬಹುದು. ಪಟ್ಟಿಯಲ್ಲಿರುವ ಯಾವ ಹೆಸರನ್ನಾದರೂ ತೆಗೆದುಹಾಕಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ