ಬೆಂಗಳೂರು, ಮಾರ್ಚ್ 7: ಬೆಂಗಳೂರು ನಗರವು ಇತಿಹಾಸದಲ್ಲಿಯೇ ಅತಿದೊಡ್ಡ ನೀರಿನ ಬಿಕ್ಕಟ್ಟನ್ನು (Water Crisis) ಎದುರಿಸುತ್ತಿದೆ. ನೀರು ಸರಬರಾಜು ಕಡಿತ (Water Supply Cut), ಖಾಲಿ ಬಕೆಟ್‌ಗಳನ್ನು ಹಿಡಿದು ನಿಂತಿರುವ ಮಹಿಳೆಯರ ಉದ್ದನೆಯ ಸರದಿ ಇತ್ಯಾದಿ ದೃಶ್ಯಗಳು ನಗರದಲ್ಲಿ ದಿನ ಬೆಳಗಾದರೆ ಸಾಮಾನ್ಯವಾಗಿ ಕಂಡುಬರುತ್ತಿವೆ. ಕುಸಿಯುತ್ತಿರುವ ಅಂತರ್ಜಲ ಮಟ್ಟ, ಕ್ಷೀಣಿಸುತ್ತಿರುವ ಜಲಾಶಯಗಳು, ಮಳೆಯ ಕೊರತೆ ಇತ್ಯಾದಿ ಕಾರಣಗಳಿಂದ ಈ ವರ್ಷ ಬೆಂಗಳೂರು ಹಾಗೂ ರಾಜ್ಯದ ಇತರ ಕಡೆಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ.
ಐಟಿ ಹಬ್ ಎಂದೇ ಕರೆಯಲಾಗುವ ಬೆಂಗಳೂರಿನಲ್ಲಿ ಸದ್ಯ ನೀರಿನ ತೀವ್ರ ಅಭಾವ ಎದುರಾಗಿದ್ದು, ಇದರ ಲಾಭವನ್ನು ಪಡೆದುಕೊಂಡು ನೀರಿನ ಟ್ಯಾಂಕರ್ ಕಂಪನಿಗಳು ಹೆಚ್ಚಿನ ದರ ವಸೂಲಿ ಮಾಡುತ್ತಿವೆ ಎಂದು ನಿವಾಸಿಗಳು ದೂರುತ್ತಿದ್ದಾರೆ. ಕರ್ನಾಟಕ ಸರ್ಕಾರವು ಈ ಸಮಸ್ಯೆಯನ್ನು ಪರಿಹರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ಕೇಂದ್ರ ಕಚೇರಿಯಲ್ಲಿ 35 ವಾರ್ಡ್‌ಗಳಲ್ಲಿ 110 ಹಳ್ಳಿಗಳಲ್ಲಿ ನೀರು ಸರಬರಾಜು ಸವಾಲುಗಳನ್ನು ಎದುರಿಸಲು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಹೆಚ್ಚುವರಿಯಾಗಿ, ನಗರದ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳನ್ನು ನಿರ್ವಹಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಿದೆ.
ನೀರಿನ ಟ್ಯಾಂಕರ್‌ಗಳ ಮಾಲೀಕರು ಇಂದಿನ (ಮಾರ್ಚ್ 7) ಗಡುವಿನ ಒಳಗೆ ನೋಂದಣಿ ಮಾಡಿಕೊಳ್ಳಲು ವಿಫಲವಾದರೆ ಸರ್ಕಾರವು ಸರ್ಕಾರವು ಟ್ಯಾಂಕರ್‌ಗಳನ್ನು ವಶಪಡಿಸಿಕೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕೆಲವು ದಿನಗಳ ಹಿಂದೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ಶಿವಕುಮಾರ್, ಬೆಂಗಳೂರು ನಗರದಲ್ಲಿ ಒಟ್ಟು 3,500 ನೀರಿನ ಟ್ಯಾಂಕರ್‌ಗಳ ಪೈಕಿ ಶೇ 10ರಷ್ಟು ಅಂದರೆ 219 ಟ್ಯಾಂಕರ್‌ಗಳು ಮಾತ್ರ ನೋಂದಣಿಯಾಗಿವೆ. ಗಡುವಿನೊಳಗೆ ನೋಂದಣಿ ಮಾಡದಿದ್ದರೆ ಸರ್ಕಾರ ಅವುಗಳನ್ನು ವಶಪಡಿಸಿಕೊಳ್ಳಲಿದೆ. ನೀರು ಯಾವುದೇ ವ್ಯಕ್ತಿಯ ಸ್ವತ್ತಲ್ಲ, ಅದು ಸರ್ಕಾರಕ್ಕೆ ಸೇರಿದ ಸಂಪನ್ಮೂಲವಾಗಿದೆ. ಜಲಮೂಲಗಳ ಮೇಲೆ ಹಿಡಿತ ಸಾಧಿಸುವ ಹಕ್ಕು ಸರ್ಕಾರಕ್ಕಿದೆ ಎಂದು ಅವರು ಹೇಳಿದ್ದಾರೆ.
ಬಳಕೆಯಾಗದ ಹಾಲಿನ ಟ್ಯಾಂಕರ್‌ಗಳನ್ನು ನೀರು ಪೂರೈಕೆಗೆ ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಒಡೆತನದ ಟ್ಯಾಂಕರ್‌ಗಳನ್ನು ಬೆಂಗಳೂರಿನಲ್ಲಿ ನೀರು ಒದಗಿಸಲು ಬಳಸುವ ಮೊದಲು ಸ್ವಚ್ಛಗೊಳಿಸಲಾಗುತ್ತದೆ. ಸಮಸ್ಯೆ ಬಗೆಹರಿಯುವ ವರೆಗೆ ನೀಗುವವರೆಗೆ ಈ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತದೆ.
ಬೆಂಗಳೂರಿನ ನೀರಿನ ಸಮಸ್ಯೆ ನಿವಾರಣೆಗೆ ಒಟ್ಟು 556 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಶಿವಕುಮಾರ್ ಘೋಷಿಸಿದ್ದಾರೆ. ಬೆಂಗಳೂರು ನಗರದ ಪ್ರತಿ ಶಾಸಕರಿಗೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ನೀರಿನ ಕೊರತೆ ನೀಗಿಸಲು 10 ಕೋಟಿ ರೂ. ಘೋಷಿಸಲಾಗಿದೆ.
ಇದನ್ನೂ ಓದಿ: ಮುಖ್ಯಮಂತ್ರಿಗಳ ಗೃಹಕಚೇರಿಗೂ ತಟ್ಟಿದ ನೀರಿನ ಬಿಸಿ; ಟ್ಯಾಂಕರ್ನಲ್ಲಿ ನೀರು ಪೂರೈಕೆ
ಹೆಚ್ಚುವರಿಯಾಗಿ, ಬಿಬಿಎಂಪಿಯು 148 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದರೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಸಮಸ್ಯೆಯನ್ನು ನಿಭಾಯಿಸಲು 128 ಕೋಟಿ ರೂಪಾಯಿಗಳನ್ನು ನಿಗದಿಪಡಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ