
ಬೆಂಗಳೂರು, ನವೆಂಬರ್ 29: ಪ್ರೀತಿ ಹೆಸರಿನಲ್ಲಿ ಮಾಜಿ ಪ್ರಿಯತಮನಿಂದ ಯುವತಿಗೆ ಲೈಂಗಿಕ ದೋಖಾ ಎಸಗಿದ್ದು, ಖಾಸಗಿ ವಿಡಿಯೋಗಳನ್ನು ಅಶ್ಲೀಲ ವೆಬ್‌ಸೈಟ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸದ್ಯ ಈ ಕುರಿತಾಗಿ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಭ್ಯುದಯ್ ಪುರೋಹಿತ್ ಎಂಬಾತ ಲವ್ ಮಾಡುವುದಾಗಿ ಹೇಳಿ ಯುವತಿಯ ನಂಬಿಕೆ ಗಳಿಸಿದ್ದ. ಇಬ್ಬರೂ 2023ರಿಂದ 2024ರವರೆಗೆ ಲಿವ್-ಇನ್ ರಿಲೇಷನ್ಶಿಪ್ನಲ್ಲಿದ್ದರು. ಈ ಅವಧಿಯಲ್ಲಿ ಇಬ್ಬರ ಖಾಸಗಿ ಕ್ಷಣಗಳ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಬಳಿಕ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ಪ್ರೇಮ ಸಂಬಂಧ ಮುರಿದು ಬಿದ್ದಿತ್ತು.
ಬ್ರೇಕಪ್ ಬಳಿಕ ತಮ್ಮ ಖಾಸಗಿ ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಯುವತಿ ಮಾಜಿ ಪ್ರಿಯತಮನಿಗೆ ಮನವಿ ಮಾಡಿದ್ದಾಳೆ. ಅದರಂತೆ ಆತ ಕೂಡ ವಿಡಿಯೋಗಳನ್ನು ಡಿಲೀಟ್ ಮಾಡುವುದಾಗಿ ಒಪ್ಪಿಕೊಂಡಿದ್ದ. ಆದರೆ ಆತ ವಿಡಿಯೋಗಳನ್ನು ಡಿಲೀಟ್ ಮಾಡದೆ ಅಶ್ಲೀಲ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ತನ್ನ ಖಾಸಗಿ ವಿಡಿಯೋಗಳು ಅಶ್ಲೀಲ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಆಗಿರುವುದನ್ನು ಕಂಡ ಯುವತಿ ಆಘಾತಕ್ಕೊಳಗಾಗಿದ್ದಾಳೆ. ತಕ್ಷಣವೇ ವಿಡಿಯೋಗಳ ಲಿಂಕ್ ಸಮೇತ ಪೊಲೀಸರ ಮೊರೆ ಹೋಗಿದ್ದು, ದೂರು ದಾಖಲಿಸಿದ್ದಾಳೆ.
ಇದನ್ನೂ ಓದಿ: ಚಿಕ್ಕೋಡಿ: ಅಕ್ರಮ ಸಂಬಂಧ ಹೊಂದಿದ್ದ ಯುವಕನಿಂದಲೇ ವಿವಾಹಿತೆಯ ಕೊಲೆ, ಕಾರಣ ವಿಚಿತ್ರ
ಇನ್ನು ಯುವತಿ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ವಿಡಿಯೋಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿರುವ ಆರೋಪದ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.