
ಬೆಂಗಳೂರು, ಮೇ 09: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಬಿಟ್‌ಕಾಯಿನ್ ಹಗರಣದ ತನಿಖೆ ಈಗ ನಿರ್ಣಾಯಕ ಹಂತಕ್ಕೆ ತಲುಪಿದೆ. ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಹಗರಣದ ಕಿಂಗ್‌ಪಿನ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (Shreeki) ಸೇರಿದಂತೆ ಮೂವರನ್ನು ಬಂಧಿಸಿದ್ದು, ಇದರ ಬೆನ್ನಲ್ಲೇ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್‌ಗೆ ಸಂಕಷ್ಟ ಎದುರಾಗುತ್ತಾ ಎಂಬ ಪ್ರಶ್ನೆಯೆದ್ದಿದೆ.
ಬಂಧಿತ ಶ್ರೀಕಿ ಜೊತೆ ಮೊಹಮ್ಮದ್ ನಲಪಾಡ್ ನಿಕಟ ಸಂಪರ್ಕ ಹೊಂದಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿಂದೆ ರಾಜ್ಯ ಸರ್ಕಾರದ ಇ-ಪ್ರೊಕ್ಯೂರಮೆಂಟ್ ವೆಬ್‌ಸೈಟ್ ಹ್ಯಾಕ್ ಮಾಡಿ, ಸರ್ಕಾರದ ಹಣವನ್ನು ವಿವಿಧ ಅಕ್ರಮ ಖಾತೆಗಳಿಗೆ ವರ್ಗಾಯಿಸಿದ ಆರೋಪ ಶ್ರೀಕಿ ತಂಡದ ಮೇಲಿದೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ಎಸ್‌ಐಟಿ (SIT) ತನಿಖೆಗೆ ವಹಿಸಿತ್ತು. ಎಸ್‌ಐಟಿ ತನಿಖೆಯ ವೇಳೆ ಹಲವು ಡಿಜಿಟಲ್ ವ್ಯಾಲೆಟ್‌ಗಳ ಕಳ್ಳತನ ಬೆಳಕಿಗೆ ಬಂದಿದ್ದಲ್ಲದೆ, ನಲಪಾಡ್ಗೂ ಈ ಜಾಲದ ಜೊತೆ ಲಿಂಕ್ ಇರುವುದು ಕಂಡುಬಂದಿತ್ತು. ಇದೇ ಕಾರಣಕ್ಕೆ ನಲಪಾಡ್ ಈಗಾಗಲೇ ಎರಡು ಬಾರಿ ಎಸ್‌ಐಟಿ ವಿಚಾರಣೆಗೂ ಹಾಜರಾಗಿದ್ದರು. ಈಗ ಇಡಿ ಅಧಿಕಾರಿಗಳು ಶ್ರೀಕಿಯನ್ನು ಬಂಧಿಸಿರುವುದರಿಂದ, ಅಕ್ರಮ ಹಣ ವರ್ಗಾವಣೆಯಲ್ಲಿ ನಲಪಾಡ್ ಪಾತ್ರದ ಕುರಿತು ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ.
ಈ ಹಿಂದೆ ಏಪ್ರಿಲ್ 2024ರಲ್ಲಿ ಶಾಸಕ ಹ್ಯಾರಿಸ್ ಮತ್ತು ನಲಪಾಡ್ ನಿವಾಸಗಳ ಮೇಲೆ ಇಡಿ 15 ಗಂಟೆಗಳ ಕಾಲ ಸುದೀರ್ಘ ದಾಳಿ ನಡೆಸಿತ್ತು. ಶ್ರೀಕಿ ಹ್ಯಾಕ್ ಮಾಡಿದ ಬಿಟ್‌ಕಾಯಿನ್‌ಗಳನ್ನು ಕ್ರಿಪ್ಟೋ ಮೂಲಕ ಹಣವಾಗಿ ಪರಿವರ್ತಿಸಿ, ಲೇಯರಿಂಗ್ (Layering) ಪದ್ಧತಿಯಲ್ಲಿ ವರ್ಗಾಯಿಸಿರುವುದು ಅಂದು ಪತ್ತೆಯಾಗಿತ್ತು. ಶ್ರೀಕಿ, ನಲಪಾಡ್ ಸಹೋದರ ಉಮರ್ ನಲಪಾಡ್‌ನ ಸಹಪಾಠಿಯಾಗಿದ್ದರಿಂದ ಈ ಸ್ನೇಹ ಆರಂಭವಾಗಿತ್ತು. ಶ್ರೀಕಿ ಮುಂಬೈ ಮೂಲದ ವ್ಯಕ್ತಿಯೊಬ್ಬನ ಮೂಲಕ ನಲಪಾಡ್ ಖಾತೆಗೆ 10 ಲಕ್ಷ ರೂ. ವರ್ಗಾಯಿಸಿದ ಆರೋಪ ಅಂದೇ ಕೇಳಿಬಂದಿತ್ತು. ಒಟ್ಟಾರೆ 4.5 ಕೋಟಿ ರೂ. ಅಕ್ರಮ ವಹಿವಾಟಿನ ಶಂಕೆ ವ್ಯಕ್ತವಾಗಿತ್ತು.
ಇದನ್ನೂ ಓದಿ ಹ್ಯಾಕರ್ ಶ್ರೀಕಿಯ ಐಷಾರಾಮಿ ಜೀವನ ನಲಪಾಡ್‌ಗೆ ಕುತ್ತು ತಂದಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿ
ಹಿಂದಿನ ದಾಳಿ ಮತ್ತು ಎಸ್‌ಐಟಿ ನೀಡಿದ್ದ ಮಾಹಿತಿಗಳ ಆಧಾರದ ಮೇಲೆ ಇಡಿ ಈಗ ಶ್ರೀಕಿಯನ್ನು ವಶಕ್ಕೆ ಪಡೆದಿದೆ. ಶ್ರೀಕಿ ನೀಡುವ ಹೇಳಿಕೆಗಳು ನಲಪಾಡ್ ಪಾಲಿಗೆ ಕಂಟಕವಾಗುವ ಸಾಧ್ಯತೆಯಿದೆ. ರಾಜ್ಯ ಸರ್ಕಾರದ ಹಣ ಮತ್ತು ಡಿಜಿಟಲ್ ಆಸ್ತಿಗಳ ಲೂಟಿಯಲ್ಲಿ ಯಾರಿಗೆಲ್ಲಾ ಪಾಲು ಸಂದಿದೆ ಎಂಬುದು ಈಗ ಇಡಿ ತನಿಖೆಯಿಂದ ಹೊರಬರಬೇಕಿದೆ. ಸದ್ಯ ಶ್ರೀಕಿ ಬಂಧನದಿಂದ ರಾಜಕೀಯ ವಲಯದಲ್ಲೂ ನಡುಕ ಶುರುವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.