
ಬೆಂಗಳೂರು ಆ.15: 80ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಬೆಂಗಳೂರಿನ ಬನ್ನಪ್ಪ ಪಾರ್ಕ್‌ನಲ್ಲಿ ಆಯೋಜಿಸಿದ್ದ ‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಿ, ಆರ್‌ಎಸ್‌ಎಸ್ ನೋಂದಣಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತೀವ್ರ ತಿರುಗೇಟು ನೀಡಿದ್ದಾರೆ. ನಡುವೆ ತಿರಂಗ ಧ್ವಜ ಹಾಗೂ ಕೇಸರಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ನೂರಾರು ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ದೇಶದ ಇತಿಹಾಸ ಹಾಗೂ ಆರ್‌ಎಸ್‌ಎಸ್ ಕೊಡುಗೆಗಳ ಕುರಿತು ಪ್ರಸ್ತಾಪಿಸಿದರು.
“ಆರ್‌ಎಸ್‌ಎಸ್ ರಿಜಿಸ್ಟ್ರೇಷನ್ (ನೋಂದಣಿ) ಆಗಿರಲಿಲ್ಲ, ಮುಂದೆಯೂ ಆಗಲ್ಲ. ಪ್ರಿಯಾಂಕ್ ಖರ್ಗೆ ಅವರೇ, ಪ್ರತಿಯೊಂದಕ್ಕೂ ನೋಂದಣಿಯೇ ಮಾನದಂಡವಲ್ಲ. ನಿಮ್ಮ ಕುಟುಂಬ ಕಲ್ಬುರ್ಗಿಗೆ ಓಡಿ ಬಂದಾಗ, ರಜಾಕಾರರ ವಿರುದ್ಧ ನಿಂತಿದ್ದು ಇದೇ ಆರ್‌ಎಸ್‌ಎಸ್‌ನ ಹುಡುಗರು” ಎಂದು ತಿರುಗೇಟು ನೀಡಿದರು.
“ನಮಗೆ ಉಪ್ಪು ತಯಾರಿಕೆ ಮತ್ತು ಚರಕದಿಂದ ಮಾತ್ರವೇ ಸ್ವಾತಂತ್ರ್ಯ ಬಂತು ಎಂದು ತಪ್ಪಾಗಿ ಹೇಳಿಕೊಡಲಾಗಿದೆ. ಆದರೆ 35 ಲಕ್ಷಕ್ಕೂ ಹೆಚ್ಚು ಹಿಂದೂಗಳ ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ. 1200 ವರ್ಷಗಳ ಕಾಲ ಖಿಲ್ಜಿ, ಕುಶಾನರು, ಅರಬರು, ಯುರೋಪಿಯನ್ನರು ಹಾಗೂ ಬ್ರಿಟಿಷರ ನಿರಂತರ ದಾಳಿಯನ್ನು ಎದುರಿಸಿ ಸಮಾಜವನ್ನು ರಕ್ಷಿಸಲಾಗಿದೆ” ಎಂದರು.ಸಂಘವು ಸಮಾಜದ ರಕ್ಷಣೆ ಮತ್ತು ಸೇವೆಗೆ ಬದ್ಧವಾಗಿದ್ದು, ಅದನ್ನು ನೋಂದಣಿಯ ಶರತ್ತುಗಳಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಗಾಂಧಿ ಸರ್ನೇಮ್ ಹೆಸರಿಟ್ಟುಕೊಂಡು ಇಷ್ಟು ಕೀಳು ಹೇಳಿಕೆ ನೀಡೋದಾ?; ರಾಹುಲ್ ವಿರುದ್ಧ ರಾಜನಾಥ್ ಸಿಂಗ್ ವಾಗ್ದಾಳಿ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂತರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಸಮಿತಿ ತಜ್ಞ ಹಾಗೂ ಪ್ಯಾರಿಸ್ ಬ್ರಿಕ್ಸ್ ಅಂತರಾಷ್ಟ್ರೀಯ ಉಪಾಧ್ಯಕ್ಷ ಡಾ. ಕೆ.ಜೆ. ಪುರುಷೋತ್ತಮ್ ವಹಿಸಿದ್ದರು. ಕಿಡ್ನಿ ಫೌಂಡೇಶನ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಹೆಚ್.ಕೆ. ನಾಗರಾಜ್, ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ನಾಯಕರಾದ ಜಯನಗರ ರಾಮಮೂರ್ತಿ, ಚಿ.ನಾ.ರಾಮು ಹಾಗೂ ಮಾಜಿ ಶಾಸಕ ನಂದೀಶ್ ರೆಡ್ಡಿ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:41 am, Sat, 15 August 26