ಮೆಜೆಸ್ಟಿಕ್​ನಲ್ಲಿ​ ಬಿಎಂಟಿಸಿ ಬಸ್​ ಹರಿದು ವಿಶೇಷಚೇತನ ಯುವಕ ಸ್ಥಳದಲ್ಲೇ ಸಾವು

ಬೆಂಗಳೂರಿನ ಮೆಜೆಸ್ಟಿಕ್​ ಬಸ್​ ನಿಲ್ದಾಣದಲ್ಲಿ ತಡರಾತ್ರಿ 12.15ರ ಸುಮಾರಿಗೆ ಬಿಎಂಟಿಸಿ ಬಸ್​ ಹರಿದು ವಿಶೇಷಚೇತನ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಬಸ್ ಚಾಲಕನ ಅತಿ ವೇಗದಿಂದಾಗ ದುರಂತ ಸಂಭವಿಸಿದ್ದು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತನ ಗುರುತು ಪತ್ತೆ ಹಚ್ಚಲಾಗುತ್ತಿದೆ.

ಮೆಜೆಸ್ಟಿಕ್​ನಲ್ಲಿ​ ಬಿಎಂಟಿಸಿ ಬಸ್​ ಹರಿದು ವಿಶೇಷಚೇತನ ಯುವಕ ಸ್ಥಳದಲ್ಲೇ ಸಾವು
ಮೆಜೆಸ್ಟಿಕ್​ನಲ್ಲಿ​ ಬಿಎಂಟಿಸಿ ಬಸ್​ ಹರಿದು ವಿಶೇಷಚೇತನ ಯುವಕ ಸಾವು
Follow us
| Updated By: ಆಯೇಷಾ ಬಾನು

Updated on:Sep 18, 2024 | 8:04 AM

ಬೆಂಗಳೂರು, ಸೆ.18: ಬಿಎಂಟಿಸಿ ಬಸ್​ (BMTC Bus) ಹರಿದು ವಿಶೇಷಚೇತನ ಯುವಕ ಸ್ಥಳದಲ್ಲೇ ಮೃತಪಟ್ಟ (Death) ಘಟನೆ ಮೆಜೆಸ್ಟಿಕ್​ ಬಸ್​ ನಿಲ್ದಾಣದಲ್ಲಿ ತಡರಾತ್ರಿ ನಡೆದಿದೆ. ನಿಲ್ದಾಣದಲ್ಲಿ ನಡೆದುಹೋಗುತ್ತಿದ್ದ ಯುವಕನ ಮೇಲೆ ಬಸ್ ಹರಿದಿದೆ. ಕೆಎ 57 ಎಫ್ 4330 ಸಂಖ್ಯೆಯ ಬಿಎಂಟಿಸಿ‌ ಬಸ್​ ಹರಿದು ಘಟನೆ ಸಂಭವಿಸಿದ್ದು ಸದ್ಯ ಬಿಎಂಟಿಸಿ ಚಾಲಕ ಗೋಪಾಲ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾತ್ರಿ 12.15ರ ಸುಮಾರಿನಲ್ಲಿ ಬಿಎಂಟಿಸಿ ಬಸ್ ಚಾಲಕನ ಅಜಾಗರೂಕತೆಗೆ ಯುವಕ ಬಲಿಯಾಗಿದ್ದಾನೆ. ಅತಿ ವೇಗವೇ ಘಟನೆಗೆ ಕಾರಣ ಎಂದು ಪ್ರಯಾಣಿಕರು ಆರೋಪ ಮಾಡಿದ್ದಾರೆ. ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆ ಬಗ್ಗೆ ಎಚ್ಚರವಹಿಸುತ್ತಿಲ್ಲ ಎಂದು ಬಿಎಂಟಿಸಿ ಸಿಬ್ಬಂದಿ, ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಜನರು ಆಕ್ರೋಶ ಹೊರ ಹಾಕಿದ್ದಾರೆ. ನಿಲ್ದಾಣದಲ್ಲಿ ಚಾಲಕರು ವೇಗವಾಗಿ ಬಸ್​ ಚಲಾಯಿಸುತ್ತಾರೆ. ಬಸ್​ ನಿಲ್ದಾಣದಲ್ಲಿ ಹಂಪ್​ ಹಾಕಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ. ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಮೃತ ಯುವಕನ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಹಿಂಸಾಚಾರ, ಮೂವರು ವಿದ್ಯಾರ್ಥಿಗಳಿಗೆ ಚಾಕು ಇರಿತ

ಇನ್ನು ಈ ಘಟನೆ ಸಂಬಂಧ ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿದ್ದು, ವಿಶೇಷ ಚೇತನ ವ್ಯಕ್ತಿ ನಡೆದುಕೊಂಡು ಬರ್ತಿದ್ದ. ಬಿಎಂಟಿಸಿ ಬಸ್ ಚಾಲಕ ಅತೀ ವೇಗದಿಂದ ಬಂದಿದ್ದಾನೆ. ಅಪಘಾತವಾದ್ರು ಆತ ನೋಡಿಲ್ಲ. ಎಲ್ಲಾ ಕಿರುಚಿದ ಮೇಲೆ‌ ಮುಂದೆ ಹೋಗಿ ಬಸ್ ನಿಲ್ಲಿಸಿದ್ದ. ಚಾಲಕ ಪರಾರಿಯಾಗಲು ಯತ್ನಿಸಿದ, ಎಲ್ಲರೂ ಹಿಡಿದು ನಿಲ್ಲಿಸಿಕೊಂಡ್ವಿ. ಪೊಲೀಸರಿಗೆ ಫೋನ್ ಮಾಡಿದ ಮೇಲೆ ಬಂದ್ರು. ಇಲ್ಲಿ ಹಂಪ್ ಹಾಕಬೇಕು, ಬಿಎಂಟಿಸಿ ನವರು ವೇಗವಾಗಿ ಬರ್ತಾರೆ. ಪೊಲೀಸರು ಇದ್ರೂ ಇಲ್ಲಿ ಅಪಘಾತ ನಿಲ್ಲಲ್ಲ. ಬಿಎಂಟಿಸಿ ಬಸ್ ಬಂದ್ರೆ ನಾವೆ ಸೈಡಿಗ್ ಹೋಗ್ಬೇಕು. ಇಲ್ಲ ಅಂದರೆ ಹತ್ತಿಸಿಕೊಂಡು ಹೋಗ್ತೀವಿ ಅನ್ನೋ ರೀತಿ ಬರ್ತಾರೆ. ಹಾರ್ನ್ ಮಾಡಲ್ಲ, ಏನಿಲ್ಲ. ಜೀವ ಉಳಿಸಬೇಕಾದರೆ ನಾವೇ ಸೈಡಿಗ್ ಹೋಗಬೇಕು. ಬ್ರೇಕ್ ಮೇಲೆ ಕಾಲಿಡೊ ಪದ್ಧತಿನೇ ಇಲ್ಲ. ಅಪಘಾತ ತಪ್ಪಬೇಕಂದ್ರೆ ಹಂಪ್ ಹಾಕಬೇಕು ಎಂದು ಹೇಮಂತ್ ಅವರು ಮನವಿ ಮಾಡಿದ್ದಾರೆ.

ಮನುಷ್ಯನ ಪ್ರಾಣಕ್ಕೆ ಬೆಲೆ ಇರುತ್ತೆ. ಈ‌‌ ಘಟನೆ ನೋಡಿ ಶಾಕ್ ಆಗಿದೆ. ನಾನು ಬಸ್ಸಲ್ಲೇ ಇದ್ದೇ, ಯಶವಂತಪುರದಿಂದ ಬಂದಿದ್ದೆ. ಒಂದು ಪ್ರಾಣ ಹೋಗಿರೋದು ಬಹಳ ದುಃಖ ಆಗ್ತಿದೆ ಎಂದು ಪ್ರತ್ಯಕ್ಷದರ್ಶಿ ಮಂಜುನಾಥ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:59 am, Wed, 18 September 24