BMTC ನಿಗಮಕ್ಕೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಕಂಡಕ್ಟರ್​ಗಳು: ತನಿಖೆ ವೇಳೆ ಕಳ್ಳಾಟ ಬಯಲು

ಬಿಎಂಟಿಸಿ ಕಂಡಕ್ಟರ್‌ಗಳು ಶಕ್ತಿ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡು ಪ್ರಯಾಣಿಕರಿಗೆ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ನಿಗಮದ ಯುಪಿಐ ಸ್ಕ್ಯಾನರ್‌ಗಳನ್ನು ತೆಗೆದು ತಮ್ಮ ವೈಯಕ್ತಿಕ ಸ್ಕ್ಯಾನರ್‌ಗಳನ್ನು ಬಳಸಿ ಲಕ್ಷಾಂತರ ರೂ ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಬಿಎಂಟಿಸಿ ತನಿಖೆ ನಡೆಸಿ, ಹತ್ತಕ್ಕೂ ಹೆಚ್ಚು ಕಂಡಕ್ಟರ್‌ಗಳ ಕಳ್ಳಾಟ ಬಯಲಿಗೆಳೆದಿದೆ.

BMTC ನಿಗಮಕ್ಕೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಕಂಡಕ್ಟರ್​ಗಳು: ತನಿಖೆ ವೇಳೆ ಕಳ್ಳಾಟ ಬಯಲು
Bmtc bus
Edited By:

Updated on: Jan 19, 2026 | 10:47 PM

ಬೆಂಗಳೂರು, ಜನವರಿ 19: ‘ಶಕ್ತಿ’ ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಈ ಯೋಜನೆಯ ಲಾಭವನ್ನು ರಾಜ್ಯದ ಕೋಟ್ಯಂತರ ಹೆಣ್ಣು ಮಕ್ಕಳು ಪಡೆಯುತ್ತಿದ್ದರೆ, ಇತ್ತ ಬಿಎಂಟಿಸಿಯ (BMTC) ಕೆಲ ಕಿಲಾಡಿ ಕಂಡಕ್ಟರ್​ಗಳು (Conductor) ಮಾತ್ರ, ಅನ್ನ ತಿಂದ ಮನೆಗೆ ಕನ್ನ ಹಾಕುವ ಕೆಲಸ ಮಾಡಿ ನಿಗಮಕ್ಕೆ ಸೇರಬೇಕಿದ್ದ, ಲಕ್ಷ ಲಕ್ಷ ಹಣವನ್ನು ತಮ್ಮ ಜೇಬಿಗೆ ಹಾಕಿಕೊಳ್ಳಲು ಮುಂದಾಗುತ್ತಿದ್ದಾರೆ.

ಬಿಎಂಟಿಸಿ ಬಸ್​ಗಳಲ್ಲಿ ಪ್ರಯಾಣಿಕರಿಗೆ ಸಹಾಯವಾಗಲಿ ಎಂದು ಬಿಎಂಟಿಸಿ ನಿಗಮ ಯುಪಿಐ ಸ್ಕ್ಯಾನರ್ ಗಳನ್ನು ಹಾಕಿದೆ. ಆದರೆ ಕೆಲ ಕಿಲಾಡಿ ಕಂಡಕ್ಟರ್​ಗಳು ಬಿಎಂಟಿಸಿ ಬಸ್​ನಲ್ಲಿರುವ ಯುಪಿಐ ಸ್ಕ್ಯಾನರ್​ಗಳನ್ನು ಕಿತ್ತು, ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್​ಗಳನ್ನು ನೀಡಿ, ತಮ್ಮ ಬ್ಯಾಂಕ್ ಅಕೌಂಟ್​ಗೆ ಲಕ್ಷಾಂತರ ರೂ ಹಣ ಹಾಕಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಕನ್ನಡ ಬಾರದವರಿಗೆ ತಮ್ಮ ಮೊಬೈಲ್ ಯುಪಿಐ ಸ್ಕ್ಯಾನರ್ ನೀಡಿ ಹಣ ಹಾಕಿಸಿಕೊಳ್ಳುತ್ತಿದ್ದಾರಂತೆ.

ಇದನ್ನೂ ಓದಿ: ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಬಿಎಂಟಿಸಿ: ಮೂರು ಸಾವಿರ ಬಸ್​​ ಮಾರ್ಗಗಳ ವೇಳಾಪಟ್ಟಿ ಪರಿಷ್ಕರಣೆ

ಇನ್ನು ತನಿಖೆಯಲ್ಲಿ ಈ ಕಂಡಕ್ಟರ್​ಗಳ ಕಳ್ಳಾಟ ಕೂಡ ಬಯಲಾಗಿದೆ. ಪ್ರತಿಯೊಬ್ಬರ ಅಕೌಂಟ್​ನಲ್ಲೂ ಸುಮಾರು 50 ಸಾವಿರಕ್ಕೂ ಹೆಚ್ಚು ಹಣ ಪ್ರಯಾಣಿಕರಿಂದ ಹಾಕಿಸಿಕೊಂಡಿರುವುದು ತನಿಖೆಯಿಂದ ಬಯಲಾಗಿದೆ. ಶಕ್ತಿ ಯೋಜನೆಯ ಉಚಿತ ಟಿಕೆಟ್ ಮೇಲೆ ಕನ್ನಡದಲ್ಲಿ ಉಚಿತ ಟಿಕೆಟ್ ಎಂದು ಮುದ್ರಿಸಲಾಗಿದೆ. ಇಂಗ್ಲಿಷ್​ನಲ್ಲಿ ಉಚಿತ ಟಿಕೆಟ್ ಎಂದು ಮುದ್ರಿಸಿಲ್ಲ. ಇದನ್ನು ಬಂಡವಾಳ ಮಾಡಿಕೊಂಡು ಕನ್ನಡ ಬಾರದ ನಾರ್ತ್, ಸೌತ್ ಇಂಡಿಯನ್ಸ್​ಗೆ ಶಕ್ತಿ ಯೋಜನೆಯ ಉಚಿತ ಟಿಕೆಟ್ ನೀಡುತ್ತಿದ್ದಾರೆ.

ಈ ಕಿಲಾಡಿ ಕಂಡಕ್ಟರ್​ಗಳು ಡಿಪೋದಿಂದ ಬಸ್​ಗಳು ಹೊರಗೆ ಬರ್ತಿದ್ದಂತೆ, ಬಿಎಂಟಿಸಿ ಬಸ್​ನಲ್ಲಿರುವ ಬಿಎಂಟಿಸಿ ನಿಗಮದ ಯುಪಿಐ ಸ್ಕ್ಯಾನರ್​ಗಳನ್ನು ಕಿತ್ತು ಇಟ್ಟುಕೊಳ್ಳುತ್ತಾರಂತೆ. ಪ್ರಯಾಣಿಕರು ಯುಪಿಐ ಮೂಲಕ ಪೇಮೆಂಟ್ ಮಾಡಿ ಟಿಕೆಟ್ ಖರೀದಿ ಮಾಡಬೇಕು ಎಂದು ಕಂಡಕ್ಟರ್​ಗಳ ಬಳಿ ಕೇಳಿದಾಗ, ತಮ್ಮ ಮೊಬೈಲ್​ನಲ್ಲಿರುವ ಸ್ವಂತ ಖಾತೆಯ ಸ್ಕ್ಯಾನರ್​ಗಳನ್ನು ನೀಡಿ ಪ್ರಯಾಣಿಕರಿಂದ ತಮ್ಮ ಅಕೌಂಟ್​ಗೆ ಹಣ ಹಾಕಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆ ಬಿಎಂಟಿಸಿಯ ಸೆಕ್ಯೂರಿಟಿ ಅಧಿಕಾರಿಗಳು ತಪಾಸಣೆ ಮಾಡಿದಾಗ ಹತ್ತಕ್ಕೂ ಹೆಚ್ಚು ಕಂಡಕ್ಟರ್​ಗಳು ಸಿಕ್ಕಿಬಿದ್ದಿದ್ದಾರೆ.

ಪ್ರಯಾಣಿಕರು ಹೇಳಿದ್ದಿಷ್ಟು

ಹೀಗೆ ಸಿಕ್ಕಿಬಿದ್ದ ಪ್ರತಿಯೊಬ್ಬ ಕಂಡಕ್ಟರ್​ ಅಕೌಂಟ್​ನಲ್ಲಿ 50 ಸಾವಿರ ರೂ. ಯುಪಿಐ ಮಾಡಿಸಿಕೊಂಡಿರುವುದು ಬಯಲಾಗಿದೆ. ಈಗಾಗಲೇ ಬಿಎಂಟಿಸಿ ಸೆಕ್ಯೂರಿಟಿ ಅಧಿಕಾರಿಗಳು ಈ ಬಗ್ಗೆ ಬಿಎಂಟಿಸಿ ಎಂಡಿ ಶಿವಕುಮಾರ್​​ಗೆ ವರದಿ ಸಲ್ಲಿಸಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಪ್ರಯಾಣಿಕ ಮಂಜುನಾಥ್, ಇಂತಹವರನ್ನು ಮೊದಲು ಕೆಲಸದಿಂದ ಕಿತ್ತು ಮನೆಗೆ ಕಳಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮತ್ತೆ ಕುಖ್ಯಾತಿಗೆ ಒಳಗಾದ ಬಿಎಂಟಿಸಿ ಸಂಸ್ಥೆ; ಬಸ್ ಹರಿದು ಬಾಲಕಿ ದಾರುಣ ಸಾವು

ಶಕ್ತಿ ಯೋಜನೆಯ ಟಿಕೆಟ್​ಗಳನ್ನು ಹೊರ ರಾಜ್ಯದವರಿಗೆ ನೀಡುತ್ತಿರುವುದು, ನಿಗಮದ ಸ್ಕ್ಯಾನರ್​ಗಳನ್ನು ಕಿತ್ತು ತಮ್ಮ ಸ್ವಂತ ಯುಪಿಐ ಸ್ಕ್ಯಾನರ್​ಗಳನ್ನು ನೀಡಿ ಹಣ ಹಾಕಿಸಿಕೊಳ್ಳುತ್ತಿರುವ ಕಂಡಕ್ಟರ್​ಗಳ ವಿರುದ್ಧ ಬಿಎಂಟಿಸಿ ನಿಗಮ ಕಠಿಣ ಕ್ರಮಕೈಗೊಳ್ಳದಿದ್ದರೆ, ಇವರಿಂದ ಮತ್ತಷ್ಟು ಕಂಡಕ್ಟರ್​​ಗಳು ಈ ದಾರಿ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.