ಸಾವಿರ ಗಡಿ ದಾಟಿದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಸಂಖ್ಯೆ: ಕಡಿಮೆಯಾದ ವಾಯು ಮಾಲಿನ್ಯ ಪ್ರಮಾಣವೆಷ್ಟು ಗೊತ್ತಾ?
ಬೆಂಗಳೂರಿನ ಪ್ರಮುಖ ಸಾರಿಗೆ ಸಂಸ್ಥೆ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್‌ಗಳ ಸಂಖ್ಯೆ ಸಾವಿರದ ಗಡಿ ದಾಟಿದೆ. 2025ರ ವೇಳೆಗೆ ಸುಮಾರು 2000 ಇ-ಬಸ್‌ಗಳನ್ನು ಹೊಂದುವ ಗುರಿ ಬಿಎಂಟಿಸಿಯದ್ದು. ಇ-ಬಸ್ಗಳಿಂದಾಗಿ ವಾಯುಮಾಲಿನ್ಯದ ಜತೆ ಶಬ್ದ ಮಾಲಿನ್ಯವೂ ಕಡಿಮೆಯಾಗಿದೆ ಎನ್ನುತ್ತಿದೆ ಬೆಂಮಸಾಸಂ. ಹಾಗಾದರೆ, ಇ-ಬಸ್ಗಳಿಂದ ಬೆಂಗಳೂರಿನ ವಾಯು ಮಾಲಿನ್ಯ ಎಷ್ಟು ಕಡಿಮೆಯಾಗಿದೆ? ಬಿಎಂಟಿಸಿ ಕೊಟ್ಟ ಲೆಕ್ಕಾಚಾರ ಇಲ್ಲಿದೆ.
ಬೆಂಗಳೂರು, ಸೆಪ್ಟೆಂಬರ್ 19: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಿಎಂಟಿಸಿ ಬಳಿ ಇರುವ ಎಲೆಕ್ಟ್ರಿಕ್ ಬಸ್‌ಗಳ ಸಂಖ್ಯೆ ಸಾವಿರದ ಗಡಿ ದಾಟಿವೆ. ಸದ್ಯ ಬಿಎಂಟಿಸಿ ಬಳಿ ಇರುವ ಎಲೆಕ್ಟ್ರಿಕ್ ಬಸ್‌ಗಳ ಸಂಖ್ಯೆ 1,027 ತಲುಪಿದ್ದು, ಈ ಮೂಲಕ ಸಂಸ್ಥೆ ಮಹತ್ವದ ಮೈಲಿಗಲ್ಲು ಸಾಧಿಸಿದಂತಾಗಿದೆ. ಮೂಲಗಳ ಪ್ರಕಾರ, 2025 ರ ವೇಳೆಗೆ ಎಲೆಕ್ಟ್ರಿಕ್ ಬಸ್‌ಗಳ ಸಂಖ್ಯೆ ಸುಮಾರು 2,000 ತಲುಪಲಿದೆ.
ಸದ್ಯ ಬಿಎಂಟಿಸಿ ಬಳಿ ಇರುವ ಒಟ್ಟು ಬಸ್‌ಗಳ ಸಂಖ್ಯೆ 6,158. ಈ ಬಸ್‌ಗಳಲ್ಲಿ 1,027 ಎಲೆಕ್ಟ್ರಿಕ್ ಆಗಿವೆ. ಇವುಗಳಲ್ಲಿ 637 ಇ-ಬಸ್‌ಗಳು ಟಾಟಾ ಮೋಟಾರ್ಸ್ ಅಂಗಸಂಸ್ಥೆಯಾಗಿರುವ ‘ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ ಲಿಮಿಟೆಡ್’ನ ಧಾರವಾಡ ಘಟಕದಲ್ಲಿ ತಯಾರಾಗಿವೆ. ಈ 12 ಮೀಟರ್ ಉದ್ದದ ಬಸ್‌ಗಳನ್ನು ಕೇಂದ್ರ ಸರ್ಕಾರದ ಫೇಮ್-II ಯೋಜನೆಯಡಿ ಪರಿಚಯಿಸಲಾಗಿದೆ.
ಫೇಮ್ ಯೋಜನೆಯಡಿ ಇನ್ನೂ 120 ಬಸ್‌ಗಳನ್ನು ಬಿಎಂಟಿಸಿ ಪಡೆದುಕೊಂಡಿದ್ದು, ಅವುಗಳನ್ನು ಕಾರ್ಯಾಚರಣೆಗೆ ಸೇರ್ಪಡೆಗೊಳಿಸಲು ಅಗತ್ಯ ಅನುಮತಿಗಳನ್ನು ಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಉಳಿದ ಎಲ್ಲಾ 284 ಇ-ಬಸ್‌ಗಳನ್ನು ನವೆಂಬರ್ ಅಂತ್ಯದ ವೇಳೆಗೆ ಕ್ರಮೇಣ ಸೇವೆಗೆ ಪರಿಚಯಿಸಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ.
ಫೇಮ್-II ಯೋಜನೆಯಡಿಯಲ್ಲಿ, ಬಿಎಂಟಿಸಿಯು ಅಶೋಕ್ ಲೇಲ್ಯಾಂಡ್ ಅಂಗಸಂಸ್ಥೆ ಸ್ವಿಚ್ ಮೊಬಿಲಿಟಿಯಿಂದ ತಯಾರಿಸಲ್ಪಟ್ಟ 12-ಮೀಟರ್ ಉದ್ದದ 300 ಇ-ಬಸ್‌ಗಳನ್ನು ಸಹ ಖರೀದಿಸಿದೆ. ಹೆಚ್ಚುವರಿಯಾಗಿ, ಇದು ಸ್ಮಾರ್ಟ್ ಸಿಟೀಸ್ ಮಿಷನ್ ಅಡಿಯಲ್ಲಿ ಜೆಬಿಎಂ ಗ್ರೂಪ್‌ನಿಂದ ತಯಾರಿಸಲ್ಪಟ್ಟ 9-ಮೀಟರ್ ಉದ್ದದ 90 ಇ-ಬಸ್‌ಗಳನ್ನೂ ಖರೀದಿಸಿ, ನಿರ್ವಹಿಸುತ್ತಿದೆ.
ವಾಯು ಮಾಲಿನ್ಯ ಕಡಿಮೆ: ವಿವರ ನೀಡಿದ ಬಿಎಂಟಿಸಿ
ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಕಡಿಮೆ ಮಾಡಲು ಮತ್ತು ಪರಿಣಾಮಕಾರಿಯಾಗಿ ಸಾರ್ವಜನಿಕ ಸಾರಿಗೆ ಸೇವೆಯನ್ನು ಒದಗಿಸಲು ಇ-ಬಸ್‌ಗಳನ್ನು ಪರಿಚಯಿಸಲಾಗುತ್ತಿದೆ. 1,000 ಇ-ಬಸ್‌ಗಳ ಮೂಲಕ 51,000 ಲೀಟರ್ ಡೀಸೆಲ್ ಅನ್ನು ಉಳಿಸಲಾಗುತ್ತಿದೆ. ಈ ಬಸ್ಗಳಿಂದಾಗಿ ಪ್ರತಿದಿನ 1.38 ಲಕ್ಷ ಕೆಜಿ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ತಡೆಯಲಾಗಿದೆ ಎಂದು ಎಂದು ಬಿಎಂಟಿಸಿ ಹೇಳಿದೆ.
ಇ-ಬಸ್‌ಗಳು ಹಾನಿಕಾರಕ ಅನಿಲಗಳು ಅಥವಾ ಹೊಗೆಯನ್ನು ಗಾಳಿಯಲ್ಲಿ ಹೊರಸೂಸುವುದಿಲ್ಲ, ಸಲ್ಫರ್ ಆಕ್ಸೈಡ್, ನೈಟ್ರೋಜನ್ ಮಾನಾಕ್ಸೈಡ್, ಹೈಡ್ರೋಕಾರ್ಬನ್ ಮತ್ತು ಪರ್ಟಿಕ್ಯುಲೇಟ್ ಮ್ಯಾಟರ್ನಂತಹ ಮಾಲಿನ್ಯಕಾರಕಗಳ ಹೊರಸೂಸುವಿಕೆಯ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಡೀಸೆಲ್ ವಾಹನಗಳಿಗೆ ಹೋಲಿಸಿದರೆ ಇ-ಬಸ್ಗಳಿಂದ ಶಬ್ದ ಮಾಲಿನ್ಯವೂ ಕಡಿಮೆ ಎಂದು ಬಿಎಂಟಿಸಿ ಹೇಳಿದೆ.
ಬರಲಿವೆ ಇನ್ನಷ್ಟು ಇ-ಬಸ್
ಮುಂದಿನ ದಿನಗಳಲ್ಲಿ 760 ಇ-ಬಸ್‌ಗಳನ್ನು ಖರೀದಿಸ ಕಾರ್ಯಾಚರಣೆಗಿಳಿಸಲು ಬಿಎಂಟಿಸಿ ಯೋಜಿಸಿದೆ. ಇವುಗಳಲ್ಲಿ 320 ಎಸಿ ಮತ್ತು 148 ನಾನ್-ಎಸಿ 12-ಮೀಟರ್ ಉದ್ದದ ಬಸ್‌ಗಳು ಸೇರಿವೆ. 320 ಎಸಿ ಬಸ್‌ಗಳು ಹಳೆಯ ವೋಲ್ವೋ ಬಸ್ಸುಗಳಿಗೆ ಬದಲಾಗಿ ಕಾರ್ಯಾಚರಣೆ ಶುರು ಮಾಡಲಿವೆ.
ಇದನ್ನೂ ಓದಿ: ಡೆಡ್ಲೈನ್ ಮುಗಿದ್ರೂ ಬಗೆಹರಿಯದ ರಸ್ತೆ ಗುಂಡಿ: ಜೇಬು ತುಂಬಿಸಿಕೊಂಡ್ರಾ ಎಂದ ಬಿಜೆಪಿ ಎಂಪಿ
ಕಳೆದ ವರ್ಷದಿಂದ ಬಿಎಂಟಿಸಿಯ ದೈನಂದಿನ ಪ್ರಯಾಣಿಕರ ಸಂಖ್ಯೆ 27.4 ಲಕ್ಷದಿಂದ 40 ಲಕ್ಷಕ್ಕೆ ಏರಿದ್ದರೆ, ಬಸ್‌ಗಳ ಸಂಖ್ಯೆ 6,888 ರಿಂದ 6,158 ಕ್ಕೆ ಇಳಿದಿದೆ. ಸರಾಸರಿಯಾಗಿ, ಬಿಎಂಟಿಸಿ ಪ್ರತಿದಿನ 5,725 ಬಸ್‌ಗಳನ್ನು ಕಾರ್ಯಾಚರಿಸುತ್ತಿದ್ದರೆ, 59,709 ಟ್ರಿಪ್‌ಗಳನ್ನು ನಿರ್ವಹಿಸುತ್ತದೆ. ಬಿಎಂಟಿಸಿ ಬಸ್‌ಗಳು ಪ್ರತಿ ದಿನ ಒಟ್ಟು 11.73 ಲಕ್ಷ ಕಿಲೋಮೀಟರ್‌ಗಳನ್ನು ಕ್ರಮಿಸುತ್ತವೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ