ಶಕ್ತಿ ಯೋಜನೆಯಿಂದ ಪರದಾಡುತ್ತಿದ್ದ ಬೆಂಗಳೂರಿಗರಿಗೆ ಗುಡ್ ನ್ಯೂಸ್

ಕೇಂದ್ರದ PM-E-DRIVE ಯೋಜನೆಯಡಿ ಬಿಎಂಟಿಸಿಗೆ 1750 ಹೊಸ ಎಲೆಕ್ಟ್ರಿಕ್ ಬಸ್‌ಗಳು ಬರಲಿವೆ. ಆ ಮೂಲಕ ಶಕ್ತಿ ಯೋಜನೆಯಿಂದ ಬಿಎಂಟಿಸಿ ಬಸ್‌ಗಳಲ್ಲಿ ಹೆಚ್ಚಿದ ದಟ್ಟಣೆಗೆ ಕೊನೆಗೂ ಪರಿಹಾರ ಸಿಕ್ಕಂತ್ತಾಗಿದೆ. ಒಪ್ಪಂದ ಆಧಾರದಲ್ಲಿ ಕಾರ್ಯನಿರ್ವಹಿಸುವ ಈ ಬಸ್‌ಗಳು ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಹೊಸ ಚೈತನ್ಯ ನೀಡಲಿವೆ. ಪ್ರಯಾಣಿಕರು ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಶಕ್ತಿ ಯೋಜನೆಯಿಂದ ಪರದಾಡುತ್ತಿದ್ದ ಬೆಂಗಳೂರಿಗರಿಗೆ ಗುಡ್ ನ್ಯೂಸ್
ಬಿಎಂಟಿಸಿ ಬಸ್​​
Image Credit source: tv9 kannada
Edited By:

Updated on: Feb 11, 2026 | 9:27 PM

ಬೆಂಗಳೂರು, ಫೆಬ್ರವರಿ 11: ಶಕ್ತಿ ಯೋಜನೆ (Shakti Yojana) ಆರಂಭವಾದ ಮೇಲೆ ಬಿಎಂಟಿಸಿ ಬಸ್ (BMTC bus) ​​ಗಳಲ್ಲಿ ಪುರುಷರಿಗೆ, ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸೀಟ್ ಸಿಗುತ್ತಿಲ್ಲ ಎನ್ನುವ ಅಸಮಾಧಾನವಿತ್ತು. ಆದರೆ ಇದೀಗ ಕೇಂದ್ರ ಸರ್ಕಾರದ PM- E-DRIVE ಯೋಜನೆ ಅಡಿಯಲ್ಲಿ ಬಿಎಂಟಿಸಿಗೆ ಮೊದಲ ಹಂತದಲ್ಲಿ 1750 ಹೊಸ ಬಸ್​​ಗಳು ಬರುತ್ತಿದ್ದು, ಇದಕ್ಕೆ ಪ್ರಯಾಣಿಕರು ಫುಲ್ ಖುಷ್ ಆಗಿದ್ದಾರೆ.

ಶಕ್ತಿ ಯೋಜನೆ ಆರಂಭವಾದ ಮೇಲೆ ಬಿಎಂಟಿಸಿ ಬಸ್​ಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಪ್ರಯಾಣಿಕರು ಕಿಕ್ಕಿರಿದು ತುಂಬುತ್ತಿದ್ದಾರೆ. ಸದ್ಯ ಬಿಎಂಟಿಸಿಯಲ್ಲಿರುವ 6800ಕ್ಕೂ ಹೆಚ್ಚು ಬಸ್​​ಗಳು ಸಾಲುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ PM- E-DRIVE ಯೋಜನೆ ಅಡಿಯಲ್ಲಿ ಬಿಎಂಟಿಸಿಗೆ ಮೊದಲ ಹಂತದಲ್ಲಿ 1750 ಎಸಿ ಮತ್ತು ನಾನ್ ಎಸಿ ಎಲೆಕ್ಟ್ರಿಕ್ ಬಸ್​ಗಳು ಬರಲಿವೆ.

ಇದನ್ನೂ ಓದಿ: ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!

ಮೊದಲ ಹಂತದಲ್ಲಿ ಸಿಇಎಸ್ಎಲ್ ಸಂಸ್ಥೆ ಟೆಂಡರ್ ಪ್ರಕ್ರಿಯೆ ಮೂಲಕ, ಏಕಾ ಮೊಬಿಲಿಟಿ ಗೆ 1750 ಬಸ್​ಗಳು ಹಂಚಿಕೆ ಮಾಡಲು ಮುಂದಾಗಿದೆ. ಏಕಾ ಮೊಬಿಲಿಟಿಗೆ ಸಿಇಎಸ್ಎಲ್ ಕಂಪನಿ ಲೆಟರ್ ಆಫ್ ಇನ್ಫರ್ಮೇಷನ್ ಆಫ್ ಕ್ವಾಂಟಿಟಿ ಕೂಡ ನೀಡಿದ್ದಾರೆ.

ಇನ್ನು 1750 ಹೊಸ ಬಸ್​​ಗಳಿಂದ ಬಿಎಂಟಿಸಿಯ ಹಳೆಯ ಬಸ್​​ಗಳಿಗೆ ಮುಕ್ತಿ ಸಿಗಲಿದೆ. ಸಾಮಾನ್ಯವಾಗಿ ಈ ಬಸ್​ಗಳಲ್ಲಿ ಡ್ರೈವರ್ ಕಂಪನಿ ಕಡೆಯಿಂದ, ಕಂಡಕ್ಟರ್ ಬಿಎಂಟಿಸಿ ಕಡೆಯಿಂದ ಬರುತ್ತಾರೆ. ಒಂದು ಕಿಮೀ 45 ರಿಂದ 50 ರೂ ವೆಚ್ಚದಲ್ಲಿ ಬಿಎಂಟಿಸಿ ಗುತ್ತಿಗೆದಾರ ಕಂಪನಿಗೆ ಹಣ ನೀಡುತ್ತದೆ. ಈ ಎಲೆಕ್ಟ್ರಿಕ್ ಬಸ್​ಗಳು 12 ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ಬಿಎಂಟಿಸಿಯಲ್ಲಿ ಸಂಚಾರ ಮಾಡಲಿವೆ.

ಪಿಎಂ-ಈ-ಡ್ರೈವ್ ಯೋಜನೆ ಅಡಿಯಲ್ಲಿ ದೇಶಕ್ಕೆ 14 ಸಾವಿರ ಎಸಿ ಮತ್ತು ನಾನ್ ಎಸಿ ಎಲೆಕ್ಟ್ರಿಕ್ ಬಸ್​ಗಳನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಲ್ಲಿ ಬೆಂಗಳೂರಿಗೆ 4500 ಬಸ್​ಗಳು (ಎಸಿ ಮತ್ತು ನಾನ್ ಎಸಿ ಎಲೆಕ್ಟ್ರಿಕ್) ಘೋಷಣೆ ಮಾಡಲಾಗಿದೆ.

ಪ್ರಯಾಣಿಕರು ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ಮಾತನಾಡಿದ ಬಿಎಂಟಿಸಿ ಪ್ರಯಾಣಿಕ ವಸಂತ, ಹೊಸ ಬಸ್​ಗಳು ಬರುವುದರಿಂದ ತುಂಬಾ ಸಹಾಯ ಆಗುತ್ತದೆ ಎಂದಿದ್ದಾರೆ. ಅದೇ ರೀತಿಯಾಗಿ ಮಹಿಳಾ ಪ್ರಯಾಣಿಕರಾದ ಸೌಮ್ಯ ಎನ್ನುವವರು ಕೂಡ    ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮತ್ತೆ ಕುಖ್ಯಾತಿಗೆ ಒಳಗಾದ ಬಿಎಂಟಿಸಿ ಸಂಸ್ಥೆ; ಬಸ್ ಹರಿದು ಬಾಲಕಿ ದಾರುಣ ಸಾವು

ಒಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಬರುತ್ತಿರುವ 1750 ಬಸ್​ಗಳಿಂದ ಸಿಲಿಕಾನ್ ಸಿಟಿಯ ಪ್ರಯಾಣಿಕರಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಆಗುವುದಂತು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Kiran Surya

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Follow Us