ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರಿಗೆ ಜ. 22ರಿಂದ ಉಚಿತ ಮಾಸಿಕ ಬಸ್ ಪಾಸ್ ವಿತರಣೆ
ಬೆಂಗಳೂರಿನ ಗಾರ್ಮೆಂಟ್ಸ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಕಾರ್ಮಿಕರಿಗೆ ವನಿತಾ ಸಂಗಾತಿ ಯೋಜನೆಯಡಿಯಲ್ಲಿ ಉಚಿತವಾಗಿ ಮಾಸಿಕ ಬಿಎಂಟಿಸಿ ಬಸ್ ಪಾಸುಗಳನ್ನು ಜನವರಿ 22ರಿಂದ ವಿತರಣೆ ಮಾಡಲಾಗುವುದು.
ಬೆಂಗಳೂರು: ಬೆಂಗಳೂರು ನಗರದಲ್ಲಿ ಸುಮಾರು 850ಕ್ಕಿಂತಲೂ ಹೆಚ್ಚಿನ ಗಾರ್ಮೆಂಟ್ಸ್ ಕಾರ್ಖಾನೆಗಳಿದ್ದು, ಸದರಿ ಗಾರ್ಮೆಂಟ್ಸ್‌ಗಳಲ್ಲಿ ಸುಮಾರು 3 ಲಕ್ಷಕ್ಕಿಂತಲೂ ಹೆಚ್ಚಿನ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಶೇ.80ಕ್ಕಿಂತ ಹೆಚ್ಚು ಮಹಿಳಾ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದರಿ ಮಹಿಳಾ ನೌಕರರು ಪ್ರತಿನಿತ್ಯ ತಮ್ಮ ಕರ್ತವ್ಯ ಸ್ಥಳಕ್ಕೆ ಹೋಗಲು ಹಾಗೂ ವಾಸಸ್ಥಳಕ್ಕೆ ಹಿಂತಿರುಗಲು ಖಾಸಗಿ ಬಸ್, ಆಟೋ ಹಾಗೂ ಇತರೆ ಖಾಸಗಿ ಸಂಸ್ಥೆಯ ವಾಹನಗಳನ್ನು ಹೆಚ್ಚಾಗಿ ಅವಲಂಬಿಸಿರುವುದು ಕಂಡುಬಂದಿದೆ.
ಹೀಗಾಗಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕಾರ್ಮಿಕ ಇಲಾಖೆಯ ಸಹಭಾಗಿತ್ವದಲ್ಲಿ ಬೆಂಗಳೂರಿನ ಗಾರ್ಮೆಂಟ್ಸ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಕಾರ್ಮಿಕರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸಲು ಹಾಗೂ ಆರ್ಥಿಕ ಸಹಾಯವನ್ನು ಮಾಡಲು ವನಿತಾ ಸಂಗಾತಿ ಯೋಜನೆಯಡಿಯಲ್ಲಿ ಉಚಿತವಾಗಿ ಮಾಸಿಕ ಬಸ್ ಪಾಸುಗಳನ್ನು ಜನವರಿ 22ರಿಂದ ವಿತರಣೆ ಮಾಡಲು ಕ್ರಮ ಕೈಗೊಂಡಿರುತ್ತದೆ.
ಪಾಸ್ ಪಡೆಯುವ ವಿಧಾನ: – ವನಿತಾ ಸಂಗಾತಿ ಪಾಸ್ ಪಡೆಯಲಿಚ್ಛಿಸುವ ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರು, ಕರ್ತವ್ಯ ನಿರ್ವಹಿಸುವ ಗಾರ್ಮೆಂಟ್ಸ್ ಕಾರ್ಖಾನೆಯ ಮಾಲೀಕರಿಗೆ ಮನವಿ ಸಲ್ಲಿಸಬೇಕು.
– ಗಾರ್ಮೆಂಟ್ಸ್ ಮಾಲೀಕರು ಪಾಸ್ ಪಡೆಯಲಿಚ್ಚಿಸುವ ಮಹಿಳಾ ಕಾರ್ಮಿಕರ ಪಟ್ಟಿಯನ್ನು, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಇ-ಮೇಲ್ ವಿಳಾಸ welfarecommissioner123@gmail.comಗೆ ಸಲ್ಲಿಸುವುದು.
– ವನಿತಾ ಸಂಗಾತಿ ಪಾಸ್ಗಾಗಿ ಗಾರ್ಮೆಂಟ್ಸ್ ಮಾಲೀಕರಿಂದ ಸ್ವೀಕರಿಸುವ ಕೋರಿಕೆಗಳನ್ನು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ, ಬೆಂಗಳೂರು ಅವರು ಪರಿಶೀಲಿಸಿ, ಅರ್ಹ ಮಹಿಳಾ ಕಾರ್ಮಿಕರ ಪಟ್ಟಿಯನ್ನು ಬಿಎಂಟಿಸಿಗೆ ಕಳುಹಿಸಬೇಕು.
– ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸ್ವೀಕರಿಸುವ ಪಟ್ಟಿಗನುಸಾರವಾಗಿ, ಗಾರ್ಮೆಂಟ್ಸ್ ಮಾಲೀಕರಿಂದ ಅವಶ್ಯವಾದ ದಾಖಲೆಗಳ ಪ್ರತಿಗಳನ್ನು (ಹಾರ್ಡ್ ಕಾಪಿ) ಹಾಗೂ ಗಾರ್ಮೆಂಟ್ಸ್ ಮಾಲೀಕರ ಪಾಲಿನ ಮೊತ್ತ ಶೇ.40ರಷ್ಟನ್ನು ಪಡೆದು (ಆರ್.ಟಿ.ಜಿ.ಎಸ್/ ಎನ್.ಇ.ಎಫ್.ಟಿ ಮೂಲಕ), ವನಿತಾ ಸಂಗಾತಿ ಪಾಸುಗಳನ್ನು ಕೆಂಪೇಗೌಡ ಬಸ್ ನಿಲ್ದಾಣ ಪಾಸ್ ಕೌಂಟರ್‌ನಿಂದ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
– ವನಿತಾ ಸಂಗಾತಿ ಪಾಸ್ಗಳನ್ನು ಪಡೆಯುವ ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರು ಬೆಂ.ಮ.ಸಾ.ಸಂಸ್ಥೆಯ ಮಾಸಿಕ ಪಾಸಿನ ಗುರುತಿನ ಚೀಟಿಯನ್ನು ಪಡೆಯಬೇಕು.
– ವನಿತಾ ಸಂಗಾತಿ ಪಾಸುಗಳನ್ನು ಪಡೆದ ಮಹಿಳಾ ಕಾರ್ಮಿಕರು ಸಂಸ್ಥೆಯ ಎಲ್ಲಾ ಸಾಮಾನ್ಯ ಸೇವೆಗಳಲ್ಲಿ ಅನಿಯಮಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
– ಗಾರ್ಮೆಂಟ್ಸ್ ಮಾಲೀಕರು ಜನವರಿ 2022ರ ತಿಂಗಳಿಗೆ ಅವಶ್ಯವಿರುವ ವನಿತಾ ಸಂಗಾತಿ ಪಾಸುಗಳ ಬೇಡಿಕೆಯನ್ನು ದಿನಾಂಕ 22.12.2021ರಿಂದ ಕಾರ್ಮಿಕ ಇಲಾಖೆಗೆ (welfarecommissioner123@gmail.com )ಸಲ್ಲಿಸಬಹುದಾಗಿರುತ್ತದೆ.
3 ಲಕ್ಷ ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿಗಳಿಗೆ ಉಚಿತವಾಗಿ ಬಸ್ ಪಾಸ್ ವಿತರಣೆಗೆ ಬಿಎಂಟಿಸಿ ಮುಂದಾಗಿದೆ. ವನಿತಾ ಸಂಗಾತಿ ಯೋಜನೆ ಅಡಿಯಲ್ಲಿ ಉಚಿತ ಪಾಸ್ ವಿತರಣೆ ಮಾಡಲಾಗುವುದು. ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಲಾಗಿತ್ತು. ಇದಕ್ಕೆ ತಗಲುವ ವೆಚ್ಚದ ಪೈಕಿ ಶೇಕಡಾ 40ರಷ್ಟು ಹಣ ಗಾರ್ಮೆಂಟ್ಸ್ ಮಾಲೀಕರು, ಶೇಕಡಾ 40ರಷ್ಟು ಹಣವನ್ನು ರಾಜ್ಯ ಸರ್ಕಾರ ಹಾಗೂ ಉಳಿದ ಶೇಕಡಾ 20ರಷ್ಟು ಹಣವನ್ನು ಬಿಎಂಟಿಸಿ ಭರಿಸುತ್ತದೆ.
ಇದನ್ನೂ ಓದಿ: New Year 2022 Guidelines: ಹೊಸ ವರ್ಷಾಚರಣೆ, ಕ್ರಿಸ್ಮಸ್ ಆಚರಣೆಗೆ ಸರ್ಕಾರದ ಮಾರ್ಗಸೂಚಿ ಪ್ರಕಟ
ತರಾತುರಿಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ
Published On - 8:00 pm, Tue, 21 December 21