ದಸರಾ ಹಬ್ಬದ ನಂತರ ಕಾರ್ ಪೂಲಿಂಗ್ ಮಾರ್ಗಸೂಚಿ ಜಾರಿ ಸಾಧ್ಯತೆ
ಕಳೆದ ಕೆಲ ದಿನಗಳ ಹಿಂದೆ ಕಾರ್ ಪೂಲಿಂಗ್ ಸಾಕಷ್ಟು ಸದ್ದು ಮಾಡಿತ್ತು. ಕಾರ್ ಪೂಲಿಂಗ್ ಅನ್ನು ಸಾರಿಗೆ ಇಲಾಖೆ ನಿಷೇಧಿಸುತ್ತೆ ಎಂಬ ಸುದ್ದಿ ಹರಿದಾಡಿತ್ತು. ಇದು ಕ್ವಿಕ್ ರೈಡ್ ಮತ್ತು ಬ್ಲಾಬ್ಲಾ ಕಾರ್ ಎಂಬ ಅಪ್ಲಿಕೇಶನ್ಗಳಿಗೆ ತಲೆನೋವಾಗಿತ್ತು. ಈ ಬಗ್ಗೆ ಸಾರಿಗೆ ಸಚಿವರು ಸ್ಪಷ್ಟನೆ ನೀಡಿದ್ದು, ಇದೀಗ ಸಾರಿಗೆ ಇಲಾಖೆ ಮಾರ್ಗಸೂಚಿ ಹೊರತರಲು ತಯಾರಿ ನಡೆಸಿದೆ.

ಬೆಂಗಳೂರು ಅ.15: ದಸರಾ ಹಬ್ಬದ ನಂತರ ಸಾರಿಗೆ ಇಲಾಖೆ ಕಾರ್ ಪೂಲಿಂಗ್ (Carpooling) ಕುರಿತು ಮಾರ್ಗಸೂಚಿಗಳನ್ನು ಹೊರತರಲಿದೆ. ಮಾರ್ಗಸೂಚಿಗಳನ್ನು ಸಿದ್ದಪಡಿಸಲಾಗುತ್ತಿದೆ ಎಂದು ಸಾರಿಗೆ ಇಲಾಖೆಯ (Transport Department) ಕಾರ್ಯದರ್ಶಿ ಎನ್‌ವಿ ಪ್ರಸಾದ್ ಹೇಳಿದ್ದಾರೆ. ರೈಡ್-ಹೇಲಿಂಗ್ ಅಪ್ಲಿಕೇಶನ್‌ಗಳಾದ ಕ್ವಿಕ್ ರೈಡ್ ಮತ್ತು ಬ್ಲಾಬ್ಲಾ ಕಾರ್ ಇಲಾಖೆಗೆ ತಮ್ಮ ಪ್ರಾತಿನಿಧ್ಯವನ್ನು ನೀಡಿವೆ. ಟ್ಯಾಕ್ಸಿ ಚಾಲಕರ ಸಂಘಗಳ ದೂರುಗಳ ನಂತರ, ಕೆಲವು ವಾರಗಳ ಹಿಂದೆ ರೈಡ್-ಹೇಲಿಂಗ್ ಅಪ್ಲಿಕೇಶನ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ನಗರದ ಆರ್‌ಟಿಒ ಕಚೇರಿಗಳಿಗೆ ಸೂಚಿಸಿದ ನಂತರ ಈ ವಿಷಯ ಮುನ್ನೆಲೆಗೆ ಬಂದಿದೆ.
ಕಾರ್ ಪೂಲಿಂಗ್ ನಿಷೇಧಿಸಿಲ್ಲ ಸುಳ್ಳು ಸುದ್ದಿ
ಈ ಬಗ್ಗೆ ಕಳೆದವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಎಕ್ಸ್ (ಟ್ವಿಟರ್)ನಲ್ಲಿ ಟ್ವೀಟ್ ಮಾಡಿ ಸರ್ಕಾರ ಕಾರ್ ಪೂಲಿಂಗ್ ನಿಷೇಧಿಸಿಲ್ಲ ಇದು ಸುಳ್ಳು ಸುದ್ದಿ. ಕಾರ್ ಪೂಲಿಂಗ್ ನಿಷೇಧ ಕುರಿತು ಯಾವುದೇ ಅಧಿಕೃತ ನೋಟಿಸ್ ನೀಡಿಲ್ಲ. ಈ ಕುರಿತು ಸರ್ಕಾರದಿಂದ ಯಾವುದೇ ಆದೇಶ ನೀಡಿಲ್ಲ ಎಂದು ತಿಳಿಸಿದ್ದರು.
ಇದನ್ನೂ ಓದಿ: Car Pooling: ಕಾರ್ ಪೂಲಿಂಗ್‌ಗೆ ಖಾಸಗಿ ವಾಹನಗಳ ಬಳಕೆಯನ್ನು ನಿಷೇಧಿಸಿ ಮಹಾರಾಷ್ಟ್ರ ಸರ್ಕಾರ ಆದೇಶ
ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ ಪೂಲಿಂಗ್ ಆ್ಯಪ್‌ಗಳು ಇದುವರೆಗೂ ಸರ್ಕಾರದಿಂದ ಯಾವುದೇ ಅಧಿಕೃತ ಪರವಾನಗಿ ಪಡೆದುಕೊಂಡಿಲ್ಲ. ಅನುಮತಿ ಇಲ್ಲದ ಕಾರ್ ಪೂಲಿಂಗ್ ಸಂಸ್ಥೆಗಳನ್ನು ಕಾನೂನು ಬದ್ಧ ಎಂದು ಪರಿಗಣಿಸಲು ಸಾಧ್ಯವಿಲ್ಲ. ಕಾರ್ ಪೂಲಿಂಗ್‌ಗೆ ಕೆಲ ಷರತ್ತುಗಳು ಅನ್ವಯವಾಗಲಿದೆ ಎಂದಿದ್ದರು.
ಏನಿದು ಕಾರ್ಪೂಲಿಂಗ್..?
ಕಾರ್ ಪೂಲಿಂಗ್ ಬೆಂಗಳೂರು, ಮುಂಬೈ ಇತ್ಯಾದಿ ನಗರಗಳಲ್ಲಿ ಟ್ರೆಂಡ್ನಲ್ಲಿದೆ. ಅದರಲ್ಲೂ ನಿತ್ಯ ಕಚೇರಿಗಳಿಗೆ ಕಾರಿನಲ್ಲಿ ಹೋಗುವ ಉದ್ಯೋಗಿಗಳಲ್ಲಿ ಇದು ಜನಪ್ರಿಯವಾಗಿದೆ. ಒಂದು ಕಾರಿನಲ್ಲಿ ಒಬ್ಬ ವ್ಯಕ್ತಿ ಮಾತ್ರ ಹೋಗುವ ಬದಲು ಅದೇ ಮಾರ್ಗದಲ್ಲಿ ಇತರರನ್ನೂ ಜೊತೆಗೆ ಸೇರಿಸಿಕೊಂಡು ಕರೆದೊಯ್ಯಬಹುದು. ಇದರಿಂದ ರಸ್ತೆಗಿಳಿಯುವ ವಾಹನಗಳ ಸಂಖ್ಯೆ ಕಡಿಮೆ ಆಗುತ್ತದೆ, ಪೆಟ್ರೋಲ್ ವೆಚ್ಚ ತಗ್ಗುತ್ತದೆ. ಐಟಿ ವಲಯದಲ್ಲಿ ಈ ಕಾರ್ ಪೂಲಿಂಗ್ ಬಹಳ ಜನಪ್ರಿಯವಾಗಿದೆ.
ಕಾರ್ ಪೂಲಿಂಗ್ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದು ಕರ್ನಾಟಕ ಮೊದಲ ರಾಜ್ಯವಲ್ಲ. ಮಹಾರಾಷ್ಟ್ರ ಇದೇ ಜನವರಿಯಲ್ಲಿ ಇಂಥದ್ದೇ ಕ್ರಮ ಕೈಗೊಂಡಿತ್ತು. ಕಾರ್ಪೂಲಿಂಗ್ ಮತ್ತು ಬೈಕ್ ಶೇರಿಂಗ್ ಅಪ್ಲಿಕೇಶನ್ಗಳು ಕಮರ್ಷಿಯಲ್ ಅಲ್ಲದ ವಾಹನಗಳನ್ನು ಬಳಸುವಂತಿಲ್ಲ ಎಂದು ಅಲ್ಲಿ ಸರ್ಕಾರ ಆದೇಶ ಹೊರಡಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ