ಹಲವು ಜವಾಬ್ದಾರಿಗಳ ನಡುವೆ ಜನಗಣತಿಗೂ ಶಿಕ್ಷಕರ ನಿಯೋಜನೆ: ನಿರ್ಧಾರಕ್ಕೆ ವ್ಯಾಪಕ ವಿರೋಧ

ಕರ್ನಾಟಕದಲ್ಲಿ ಪಾಠ, ಪರೀಕ್ಷಾ ಮೌಲ್ಯಮಾಪನ ಸೇರಿ ಹಲವು ಜವಾಬ್ದಾರಿಗಳಿರುವ ಶಿಕ್ಷಕರನ್ನು ಏಪ್ರಿಲ್ 16ರಿಂದ ಜನಗಣತಿ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇದರಿಂದ ರಜೆಗಳಿಲ್ಲದೆ ಕೆಲಸದ ಒತ್ತಡ ಹೆಚ್ಚಾಗಿರುವುದಕ್ಕೆ ಶಿಕ್ಷಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. 50 ವರ್ಷ ಮೇಲ್ಪಟ್ಟ ಶಿಕ್ಷಕರು ಮತ್ತು ಪರೀಕ್ಷಾ ಕರ್ತವ್ಯದಲ್ಲಿರುವವರಿಗೆ ವಿನಾಯಿತಿ ನೀಡುವ ಮನವಿಗಳು ತಿರಸ್ಕೃತಗೊಂಡಿದ್ದು, ಡೇಟಾ ಸಂಗ್ರಹಣೆಗೆ ಶಿಕ್ಷಕರೇ ಅನಿವಾರ್ಯವೆಂದು ಸರ್ಕಾರ ಹೇಳಿದೆ.

ಹಲವು ಜವಾಬ್ದಾರಿಗಳ ನಡುವೆ ಜನಗಣತಿಗೂ ಶಿಕ್ಷಕರ ನಿಯೋಜನೆ: ನಿರ್ಧಾರಕ್ಕೆ ವ್ಯಾಪಕ ವಿರೋಧ
ಸಾಂದರ್ಭಿಕ ಚಿತ್ರ

Updated on: Apr 03, 2026 | 12:51 PM

ಬೆಂಗಳೂರು, ಏಪ್ರಿಲ್​​ 03: ಜಾತಿ ಗಣತಿ, ಪಾಠ, ಬಿಸಿಯೂಟ ಹೀಗೆ ನಾನಾ ಜವಾಬ್ದಾರಿಗಳು ಮತ್ತು ಹೊಣೆ ನಿಭಾಯಿಸಿ ಸಂಕಷ್ಟ ಅನುಭವಿಸುತ್ತಿರುವ ಶಿಕ್ಷಕರನ್ನು ಏಪ್ರಿಲ್ 16ರಿಂದ ಜನಗಣತಿ ಕಾರ್ಯಕ್ಕೂ ರಾಜ್ಯದಲ್ಲಿ ನಿಯೋಜನೆ ಮಾಡಲಾಗ್ತಿದೆ. ರಾಜ್ಯದಲ್ಲಿ 2027ರ ಜನಗಣತಿ ಕಾರ್ಯಕ್ಕಾಗಿ ಒಂದು ಲಕ್ಷಕ್ಕೂ ಹೆಚ್ಚು ಸರ್ಕಾರಿ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳುತ್ತಿದ್ದು, ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಈ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಏಪ್ರಿಲ್ 1ರಿಂದ ಸ್ವಯಂ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಿದ್ದು, ಇದು ಏಪ್ರಿಲ್ 15ರವರೆಗೆ ಮುಂದುವರಿಯಲಿದೆ.

ಇನ್ನು ಈ ಹೆಚ್ಚುವರಿ ಹೊಣೆಗಾರಿಕೆಗೆ ಶಿಕ್ಷಕರಿಂದ ಅಸಮಾಧಾನ ವ್ಯಕ್ತವಾಗಿದ್ದು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನೀಡಿರುವ ಶೈಕ್ಷಣಿಕ ಕೆಲಸಗಳ ಜೊತೆಗೆ ಜನಗಣತಿ ಕೆಲಸವೂ ಸೇರಿರುವುದರಿಂದ ರಜೆಗಳೇ ಇಲ್ಲದಂತಾಗಿದೆ ಎಂದು ಅಲವತ್ತುಕೊಂಡಿದ್ದಾರೆ. ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಗಿದ ತಕ್ಷಣ ಮನೆ ಮನೆಗೆ ತೆರಳಿ ಕುಟುಂಬ ಸದಸ್ಯರ ಮಾಹಿತಿಯನ್ನು ಸಂಗ್ರಹಿಸಬೇಕಾಗುತ್ತಿದೆ. 2025ರಲ್ಲಿ ಸಮಾಜ-ಶೈಕ್ಷಣಿಕ ಸಮೀಕ್ಷೆಯಲ್ಲಿ ಶಿಕ್ಷಕರನ್ನು ಬಳಸಿಕೊಂಡ ಕಾರಣ ದಸರಾ ರಜೆಯನ್ನು ವಿಸ್ತರಿಸಲಾಗಿತ್ತು. ಬಳಿಕ 2025-26 ಶೈಕ್ಷಣಿಕ ವರ್ಷದ ಪಾಠ್ಯಕ್ರಮ ಪೂರ್ಣಗೊಳಿಸಲು ಶಿಕ್ಷಕರು ಒತ್ತಡಕ್ಕೆ ಒಳಗಾಗಿದ್ದರು ಎಂಬುದನ್ನೂ ಈ ವೇಳೆ ನೆನಪಿದ್ದಾರೆ.

ಇದನ್ನೂ ಓದಿ: ಏ 1ರಿಂದ ಕರ್ನಾಟಕದಲ್ಲಿ ಮೊದಲ ಹಂತ ಶುರು, ಸಾರ್ವಜನಿಕರು ಭಾಗಿಯಾಗೋದು ಹೇಗೆ?

ಚಿಕ್ಕಬಳ್ಳಾಪುರದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರೊಬ್ಬರು ಹೇಳುವಂತೆ, ನಾವು ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕರ್ತವ್ಯದಲ್ಲಿದ್ದೇವೆ. ಏಪ್ರಿಲ್ 2ರಂದು ಪರೀಕ್ಷೆಗಳು ಮುಗಿದಿದ್ದು, ಏಪ್ರಿಲ್ 7ರಿಂದ 12ರವರೆಗೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಬೇಕು. ಏಪ್ರಿಲ್ 16ರಿಂದ ಜನಗಣತಿ ಕಾರ್ಯಕ್ಕೆ ತೆರಳಬೇಕು. ಬಿಸಿಲಿನ ನಡುವೆ ಬೆಳಗ್ಗೆ 6.30ರಿಂದ 11.30ರವರೆಗೆ, ಸಂಜೆ 4.30ರಿಂದ 8.30ರವರೆಗೆ ಕೆಲಸ ಮಾಡಬೇಕಾಗಿದೆ. ಮೇ ಮೊದಲ ವಾರದಿಂದ ಮತ್ತೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕರ್ತವ್ಯ ಶುರುವಾಗುತ್ತದೆ. ಕನಿಷ್ಠ ನಮ್ಮಂಥ ಪರೀಕ್ಷಾ ಮೌಲ್ಯಮಾಪಕರಿಗೆ ವಿನಾಯಿತಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ನಡುವೆ 50 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಆರೋಗ್ಯ ಸಮಸ್ಯೆಗಳು ಮತ್ತು ಹೆಚ್ಚುತ್ತಿರುವ ತಾಪಮಾನವನ್ನು ಗಮನಿಸಿ ವಿಶೇಷ ತಿದ್ದುಪಡಿ ಪ್ರಕ್ರಿಯೆಯಿಂದ ವಿನಾಯಿತಿ ನೀಡುವಂತೆ ರಾಜಸ್ವ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ನುಗ್ಗಲಿ ತಿಳಿಸಿದ್ದಾರೆ. ಆದರೆ ನಮ್ಮ ಮನವಿಯನ್ನು ತಿರಸ್ಕರಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕರ್ತವ್ಯದಲ್ಲಿರುವ ಶಿಕ್ಷಕರಿಗೂ ಜನಗಣತಿ ಕೆಲಸದಿಂದ ವಿನಾಯಿತಿ ನೀಡುವಂತೆ ಕೇಳಿದ್ದೇದ್ದರೂ ಅದನ್ನೂ ಒಪ್ಪಿಲ್ಲ ಎಂದು ಅವರು ಹೇಳಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಿಕ್ಷಕರ ಮೇಲೆ ಹೆಚ್ಚುವರಿ ಭಾರ ಬೀಳುತ್ತಿರುವುದು ನಮಗೆ ತಿಳಿದಿದೆ. ಆದರೆ ಜನಗಣತಿಯಂತಹ ಮಹತ್ವದ ಡೇಟಾ ಸಂಗ್ರಹಣಾ ಕಾರ್ಯಗಳನ್ನು ಹೊರಗುತ್ತಿಗೆಗೆ ನೀಡಲು ಸಾಧ್ಯವಿಲ್ಲ. ಆದ್ದರಿಂದ ಶಿಕ್ಷಕರನ್ನೇ ನಿಯೋಜಿಸಬೇಕಾಗಿದೆ ಎಂದಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:48 pm, Fri, 3 April 26

Follow Us