
ಬೆಂಗಳೂರು, ಜೂನ್ 7: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ (Chinnaswamy Stadium Stampede) ಪ್ರಕರಣ ಸಂಬಂಧ ಪೊಲೀಸ್ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಆರ್ಸಿಬಿ ಮಾರ್ಕೆಟಿಂಗ್ ಮುಖಸ್ಥ ನಿಖಿಲ್ ಸೋಸಲೆ ವಿಚಾರಣೆ ನಡೆಸಲಾಗಿದ್ದು, ಕಾಲ್ತುಳಿತದಿಂದ ಸಾವು ಸಂಬಂಧಿಸಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ಪ್ರಕಟಿಸಿದ್ದು ಯಾರು ಎಂಬ ಬಗ್ಗೆ ಪ್ರಶ್ನಿಸಲಾಗಿದೆ. ಸಾವಿನ ಬಗ್ಗೆ ಯಾವುದೇ ಪೋಸ್ಟ್ ಮಾಡಿಲ್ಲ ಎಂದು ಸೋಸಲೆ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ. ವಿಜಯೋತ್ಸವ ಮೆರವಣಿಗೆ ಹಾಗೂ ಉಚಿತ ಪಾಸ್ ಸಂಬಂಧ ಟ್ವೀಟ್ ಮಾಡಿದ್ದು ಯಾರು ಎಂಬುದನ್ನೂ ಪ್ರಶ್ನಿಸಲಾಗಿದೆ. ಅದೂ ಸಹ ತಾವಲ್ಲ ಎಂದು ಸೋಸಲೆ ಉತ್ತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆ ಎರಡು ಟ್ವೀಟ್ ಆಗಿದ್ದ ವೇಳೆ ತಾವು ಅಹಮದಾಬಾದ್ನಲ್ಲಿ ಇದ್ದುದಾಗಿಯೂ ಆರ್ಸಿಬಿ ಆಟಗಾರರ ಒಟ್ಟಿಗೆ ಇದ್ದುದಾಗಿಯೂ ಸೋಸಲೆ ಹೇಳಿದ್ದಾರೆ. ತಮಗೂ ಆ ಟ್ವೀಟ್ಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.
ಆರ್ಸಿಬಿ ವತಿಯಿಂದ ಚಿನ್ನಸ್ವಾಮಿ ಸ್ಟೇಡಿಯಂಗೆ ಉಚಿತ ಪಾಸ್ ನೀಡಲಾಗುತ್ತದೆ ಮತ್ತು ವಿಜಯೋತ್ಸವ ಮೆರವಣಿಗೆ ಇದೆ ಎಂದು ನಿಖಿಲ್ ಸೋಸಲೆ ಟ್ವೀಟ್ ಮಾಡಿದ್ದರು ಎನ್ನಲಾಗಿತ್ತು. ನಂತರ ಆ ಟ್ವೀಟ್ಗಳನ್ನು ಅಳಿಸಿಹಾಕಲಾಗಿತ್ತು.
ನಿಖಿಲ್ ಸೋಸಲೆ ಮಾಡಿಲ್ಲ ಎಂದಾದರೆ ಆ ಪೋಸ್ಟ್ಗಳನ್ನು ಪ್ರಕಟಿಸಿದವರು ಯಾರು? ಪೋಸ್ಟ್ ಮಾಡಲು ಹೇಳಿದ್ದು ಯಾರಾಗಿರಬಹುದು? ಎಲ್ಲಿಂದ ಅಪ್ಲೋಡ್ ಆಯಿತು? ಈ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆಗೆ ಮಾಡಲಿದ್ದಾರೆ. ಜೊತೆಗೆ, ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡುವವರು ಯಾರು? ಇಂತಹ ಪೋಸ್ಟ್ ಗಳನ್ನು ಹಾಕುವಾಗ ಅವರಿಗೆ ಯಾರು ಅನುಮತಿ ಕೊಡಬೇಕು? ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ಸಿಐಡಿ ತನಿಖೆ ನಡೆಸಲಿದೆ.
ಕೆಎಸ್ಸಿಎ ಆಡಳಿತ ಮಂಡಳಿಯವರ ವಿಚಾರಣೆಯನ್ನೂ ಸಿಐಡಿ ನಡೆಸಲಿದೆ. ನೊಟೀಸ್ ಕೊಟ್ಟು ವಿಚಾರಣೆ ನಡೆಸಸಲಾಗುವುದು ಎಂದು ಸಿಐಡಿ ಮೂಲಗಳು ತಿಳಿಸಿವೆ. ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್, ಗೌರವ ಅಧ್ಯಕ್ಷ ಶ್ರೀರಾಮ್ ಹಾಗೂ ಕಾರ್ಯದರ್ಶಿ ಎ ಶಂಕರ್ಗೆ ಸಿಐಡಿ ನೊಟೀಸ್ ನೀಡಲಿದೆ.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ನೈತಿಕ ಹೊಣೆ ಹೊತ್ತು ಕೆಎಸ್ಸಿಎ ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ
ಬಲವಂತದ ಕ್ರಮ ಜರುಗಿಸದಂತೆ ಹೈಕೋರ್ಟ್ ಆದೇಶಿಸಿದ್ದರಿಂದ ಕೆಎಸ್ಸಿಎ ಆಡಳಿತ ಮಂಡಳಿಯವರು ಸದ್ಯ ನಿರಾಳರಾಗಿದ್ದಾರೆ. ಆದರೆ, ಪೊಲೀಸರ ತನಿಖೆಗೆ ಸಹಕರಿಸಬೇಕು. ಬೆಂಗಳೂರು ಬಿಟ್ಟು ಹೋಗದಂತೆ ಹೈಕೋರ್ಟ್ ಆದೇಶದಲ್ಲಿ ತಿಳಿಸಲಾಗಿದೆ. ಹೀಗಾಗಿ ದಿಗ್ಗಜರ ವಿಚಾರಣೆಗೆ ಸಿಐಡಿ ಮುಂದಾಗಿದೆ.
Published On - 11:33 am, Sat, 7 June 25